
ನಾಗ್ಪುರ: ಈ ವರ್ಷದ ಆರಂಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಕರೆ ಮಾಡಿದ ಆರೋಪದ ಮೇಲೆ ಬಂಧಿತರಾಗಿರುವ ಜಯೇಶ್ ಪೂಜಾರಿ ಮತ್ತು ಬೆಂಗಳೂರು ಭಯೋತ್ಪಾದನಾ ದಾಳಿ ಪ್ರಕರಣದಲ್ಲಿ ಆರೋಪಿಯಾಗಿ ಕರ್ನಾಟಕದ ಜೈಲಿನಲ್ಲಿರುವ ಅಫ್ಸರ್ ಪಾಷಾ ನಡುವೆ ಸಂಪರ್ಕವಿರುವುದನ್ನು ಮಹಾರಾಷ್ಟ್ರದ ನಾಗ್ಪುರದ ಪೊಲೀಸರು ಕಂಡುಕೊಂಡಿದ್ದಾರೆ ಎಂದು ಅಧಿಕಾರಿ ಹೇಳಿದರು.
ಪೂಜಾರಿ ಅಲಿಯಾಸ್ ಕಾಂತ ಮತ್ತು ಶಾಕೀರ್ ಈ ಹಿಂದೆ ಪಾಷಾ ಜೊತೆಗೆ ಬೆಳಗಾವಿ ಜೈಲಿನಲ್ಲಿದ್ದರು ಎಂದು ಅವರು ಹೇಳಿದರು.
ನಾಗ್ಪುರದಲ್ಲಿರುವ ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಜನವರಿ 14 ರಂದು ಪೂಜಾರಿ ಬೆದರಿಕೆ ಕರೆ ಮಾಡಿ, 100 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದನು ಮತ್ತು ತಾನು ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಸದಸ್ಯ ಎಂದು ಹೇಳಿಕೊಂಡಿದ್ದಾನೆ. ಆ ಸಮಯದಲ್ಲಿ ಆತನನ್ನು ನೆರೆಯ ಕರ್ನಾಟಕದ ಜೈಲಿನಲ್ಲಿ ಇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆತ ಮಾರ್ಚ್ 21 ರಂದು ಮತ್ತೊಂದು ಕರೆ ಮಾಡಿ, 10 ಕೋಟಿ ರೂಪಾಯಿ ಪಾವತಿಸದಿದ್ದರೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಈ ಸಂಬಂಧ ಪೂಜಾರಿಯನ್ನು ಬಂಧಿಸಿ ಮಾರ್ಚ್ 28 ರಂದು ಬೆಳಗಾವಿಯ ಹಿಂಡಲಗಾ ಜೈಲಿನಿಂದ ನಾಗ್ಪುರಕ್ಕೆ ಕರೆತರಲಾಯಿತು ಮತ್ತು ಆತನ ವಿರುದ್ಧ ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಅಡಿ ಪ್ರಕರಣ ದಾಖಲಿಸಲಾದಿದೆ.
ಈ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಪೂಜಾರಿ ಮತ್ತು ಭಯೋತ್ಪಾದಕ ಬಶೀರುದ್ದೀನ್ ನೂರ್ ಅಹ್ಮದ್ ಅಲಿಯಾಸ್ ಅಫ್ಸರ್ ಪಾಷಾ ನಡುವೆ ಸಂಬಂಧ ಇತ್ತು ನಾಗ್ಪುರ ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ ಎಂದು ನಾಗ್ಪುರ ಪೊಲೀಸ್ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2012ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ)ಗೆ ಭಯೋತ್ಪಾದಕರನ್ನು ನೇಮಿಸಿದ ಪ್ರಕರಣದಲ್ಲಿ ಅಪರಾಧಿಯಾಗಿರುವ ಪಾಷಾನೊಂದಿಗೆ ಪೂಜಾರಿ ಸಂಪರ್ಕ ಹೊಂದಿದ್ದನು ಎಂದು ಅವರು ಹೇಳಿದರು.
2005ರ ಡಿಸೆಂಬರ್‌ನಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲೂ ಪಾಷಾ ಭಾಗಿಯಾಗಿದ್ದ ಮತ್ತು ಸದ್ಯ ಆತ ಬೆಳಗಾವಿಯಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪಾಷಾನನ್ನು ಬಂಧಿಸಲು ನಾಗ್ಪುರ ಪೊಲೀಸ್ ತಂಡವನ್ನು ಬೆಳಗಾವಿಗೆ ಕಳುಹಿಸಲಾಗಿದೆ. ಗಡ್ಕರಿ ಅವರಿಗೆ ಬಂದಿದ್ದ ಬೆದರಿಕೆ ಕರೆಗಳ ಕುರಿತು ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ತಂಡವು ಮೇ ತಿಂಗಳಲ್ಲಿ ನಾಗ್ಪುರಕ್ಕೆ ಭೇಟಿ ನೀಡಿತ್ತು. ಕೇಂದ್ರ ಗೃಹ ಸಚಿವಾಲಯದಿಂದ ಹಸಿರು ನಿಶಾನೆ ದೊರೆತ ನಂತರ ಕೇಂದ್ರ ತನಿಖಾ ಸಂಸ್ಥೆಯು ಪ್ರಕರಣದ ಭಯೋತ್ಪಾದನೆಯ ಕೋನದ ತನಿಖೆಯನ್ನು ಆರಂಭಿಸಿತ್ತು.
Advertisement