ಬೆಂಗಳೂರು: ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವವರಿಂದ ಕೊಲೆ ಬೆದರಿಕೆ ಕರೆ ಬಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಎಫ್ಐಆರ್ ದಾಖಲಿಸಿಕೊಂಡಿದ್ದು, ಈ ಮೂಲಕ ಪ್ರಕರಣದ ತನಿಖೆ ಹೊಸ ತಿರುವುದು ಪಡೆದುಕೊಂಡಿದೆ.
ಕೊಲೆ ಪ್ರಕರಣವೊಂದರಲ್ಲಿ ಬೆಳಗಾವಿಯ ಹಿಂಡಲಗಾ ಜೈಲು ಸೇರಿದ್ದ ಜ್ಞಾನೇಶ್ ಪೂಜಾರಿ ಎಂಬ ಆರೋಪಿ, ಮಾ.21ರಂದು ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಸಚಿವರ ಕಚೇರಿಗೆ ಕರೆ ಮಾಡಿ ನಿತಿನ್ ಗಡ್ಕರಿಯವರಿಗೆ ಜೀವ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಈ ಹಿಂದೆ ಜ.14ರಂದು ಸಚಿವರ ಕಚೇರಿಗೆ ಕರೆ ಮಾಡಿ ಜೀವ ಬೆದರಿಕೆ ಒಡ್ಡುವುದರ ಜತೆಗೆ 10 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದನು.
ನಾಗ್ಪುರದಲ್ಲಿರುವ ಗಡ್ಕರಿ ಕಚೇರಿಗೆ ಕರೆ ಮಾಡಿರುವ ಆರೋಪಿಗಳು ಸಚಿವರು 100 ಕೋಟಿ ನೀಡದಿದ್ದರೆ ಬಾಂಬ್ ಇಡುವುದಾಗಿ ಬೆದರಿಕೆ ಹಾಕಿದ್ದರು. ಈ ಸಂಬಂಧ ಮಹಾರಾಷ್ಟ್ರ ಪೊಲೀಸರು ಕೂಡಲೇ ತನಿಖೆ ಆರಂಭಿಸಿದ್ದರು.
ಕಳೆದ ಮಾರ್ಚ್ 21ರಂದು ನಾಗ್ಪುರದಲ್ಲಿರುವ ಸಚಿವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಮತ್ತೆ ಮೂರು ಬಾರಿ ದೂರವಾಣಿ ಕರೆ ಬಂದಿದ್ದು, ಹಣ ಕೊಡದಿದ್ದರೆ ಹತ್ಯೆ ಮಾಡುವುದಾಗಿ ಸಚಿವರಿಗೆ ಬೆದರಿಕೆ ಹಾಕಿದ್ದಾರೆ.
ಬೆದರಿಕೆ ಹಿನ್ನೆಲೆಯಲ್ಲಿ ನಾಗ್ಪುರ ಪೊಲೀಸರು ಗಡ್ಕರಿ ಅವರ ನಿವಾಸ ಮತ್ತು ಕಚೇರಿಗಳಿಗೆ ಬಿಗಿ ಭದ್ರತೆ ಒದಗಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇದರಂತೆ ತನಿಖೆಯ ಭಾಗವಾಗಿ, ನಾಗ್ಪುರ ಪೊಲೀಸರು ಮಾರ್ಚ್ 28 ರಂದು ಹಿಂಡಲಗಾ ಜೈಲಿಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದರು. ಈ ವೇಳೆ ಜಯೇಶ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆತನಿಂದ ಒಂದು ಸೆಲ್ ಫೋನ್ ಮತ್ತು ಎರಡು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದೀಗ ಆತನನ್ನು ನಾಗ್ಪುರ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ವಿಚಾರಣೆ ವೇಳೆ ಭಯೋತ್ಪಾದಕ ಸಂಘಟನೆಯೊಂದಿಗೆ 'ಸಂಪರ್ಕ' ಹೊಂದಿರುವ ಬೆಂಗಳೂರಿನ ನಾಲ್ವರೊಂದಿಗೆ ತಾನು ಸಂಪರ್ಕದಲ್ಲಿದ್ದೆ ಎಂದು ಜಯೇಶ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಬೆದರಿಕೆ ಹಾಕುವ ವೇಳೆ ಜಯೇಶ್ ತಾನು ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಸದಸ್ಯ ಎಂದು ಹೇಳಿಕೊಂಡಿದ್ದು, ಹೀಗಾಗಿ ಮಹಾರಾಷ್ಟ್ರ ಪೊಲೀಸರು ಈ ಮಾಹಿತಿಯನ್ನು ಎನ್ಐಎ ಜತೆ ಹಂಚಿಕೊಂಡಿದ್ದಾರೆ. ಇದರಂತೆ ಜಯೇಶ್ ಹೆಸರಿಸಿರುವ ನಾಲ್ವರ ವಿರುದ್ಧ ಎನ್‌ಐಎ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
Advertisement