ಪ್ರವಾಹ ಪೀಡಿತ ಪಂಜಾಬ್, ಹರ್ಯಾಣದಲ್ಲಿ ಸಾವಿನ ಸಂಖ್ಯೆ 62ಕ್ಕೆ ಏರಿಕೆ!
ಚಂಡೀಗಢ: ಪ್ರವಾಹ ಪೀಡಿತ ರಾಜ್ಯಗಳಾದ ಪಂಜಾಬ್ ಹಾಗೂ ಹರ್ಯಾಣಗಳಲ್ಲಿ ಸಾವಿನ ಸಂಖ್ಯೆ 62ಕ್ಕೆ ಏರಿಕೆಯಾಗಿದೆ
ಎರಡೂ ರಾಜ್ಯಗಳಲ್ಲಿ ಜಲಾವೃತಗೊಂಡ ಹಲವು ಪ್ರದೇಶಗಳು ಸಹಜ ಸ್ಥಿತಿಗೆ ಮರಳುತ್ತಿದ್ದಂತೆಯೇ ವಿದ್ಯುತ್ ಮತ್ತು ನೀರಿನ ಪೂರೈಕೆಯನ್ನು ಪುನಾರಂಭ ಮಾಡುವತ್ತ ಅಧಿಕಾರಿಗಳು ಗಮನ ಹರಿಸಿದ್ದಾರೆ.
ಹಲವು ಪ್ರದೇಶಗಳಲ್ಲಿ ಪರಿಹಾರ ಚಟುವಟಿಕೆಗಳು ಪ್ರಗತಿಯಲ್ಲಿದ್ದು, ಗಗ್ಗರ್ ನದಿಯಾದ್ಯಂತ ದಂಡೆಗಳ ದುರಸ್ತಿ ಕಾಮಗಾರಿ ನಡೆಯುತ್ತಿದೆ.
ಪಂಜಾಬ್ ಶಿಕ್ಷಣ ಸಚಿವ ಹರ್ಜೊತ್ ಸಿಂಗ್ ಬೇನ್ಸ್ ಈ ಬಗ್ಗೆ ಮಾಹಿತಿ ನೀಡಿದ್ದು, ಜು.17 ರಿಂದ ಶಾಲೆಗಳು ಪುನಾರಂಭವಾಗಲಿವೆ. ಒಂದು ವೇಳೆ ಯಾವುದೇ ಶಾಲಾಕಟ್ಟಡಗಳು ಜಲಾವೃತಗೊಂಡು, ಹಾನಿಗೀಡಾಗಿದ್ದರೆ, ಅಂತಹ ಪ್ರದೇಶಗಳಲ್ಲಿ ರಜೆಯನ್ನು ವಿಸ್ತರಿಸುವ ಬಗ್ಗೆ ವಿಭಾಗಾಧಿಕಾರಿಗಳು ನಿರ್ಧರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಪಂಜಾಬ್ ಮತ್ತು ಹರ್ಯಾಣಗಳಲ್ಲಿ ಕಳೆದ ವಾರ ಹಲವೆಡೆ ಭಾರಿ ಪ್ರಮಾಣದ ಮಳೆ ಸುರಿದು ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಪರಿಣಾಮ ಪಂಜಾಬ್ ನಲ್ಲಿ ಪ್ರವಾಹಕ್ಕೆ 32 ಮಂದಿ ಸಾವನ್ನಪ್ಪಿದ್ದರೆ, ಹರ್ಯಾಣದಲ್ಲಿ 30 ಮಂದಿ ಸಾವನ್ನಪ್ಪಿದ್ದಾರೆ. 26,000 ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ರವಾನೆ ಮಾಡಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ