ಮಣಿಪುರಕ್ಕೆ ವಿಪಕ್ಷಗಳ INDIA ಸಂಸದರ ಭೇಟಿಯನ್ನು 'ಶೋ-ಆಫ್' ಎಂದ ಬಿಜೆಪಿ; ಸಂಜಯ್ ರಾವುತ್ ಕಿಡಿ

ವಿರೋಧ ಪಕ್ಷಗಳ ಒಕ್ಕೂಟ INDIA ಸಂಸದರ ಮಣಿಪುರ ಭೇಟಿಯನ್ನು 'ಶೋ-ಆಫ್' ಎಂದಿದ್ದ ಬಿಜೆಪಿ ವಿರುದ್ದ ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಭಾನುವಾರ ವಾಗ್ದಾಳಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಕಲಹ ಪೀಡಿತ ರಾಜ್ಯಕ್ಕೆ ಭೇಟಿ ನೀಡಿಲ್ಲ ಮತ್ತು ಸಂಸತ್ತಿನಲ್ಲಿ ಅದರ ಬಗ್ಗೆ ಮಾತನಾಡಿಲ್ಲ ಎಂದು ಹೇಳಿದರು.
ಸಂಜಯ್ ರಾವುತ್
ಸಂಜಯ್ ರಾವುತ್
Updated on

ಮುಂಬೈ: ವಿರೋಧ ಪಕ್ಷಗಳ ಒಕ್ಕೂಟ INDIA ಸಂಸದರ ಮಣಿಪುರ ಭೇಟಿಯನ್ನು 'ಶೋ-ಆಫ್' ಎಂದಿದ್ದ ಬಿಜೆಪಿ ವಿರುದ್ದ ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಭಾನುವಾರ ವಾಗ್ದಾಳಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಕಲಹ ಪೀಡಿತ ರಾಜ್ಯಕ್ಕೆ ಭೇಟಿ ನೀಡಿಲ್ಲ ಮತ್ತು ಸಂಸತ್ತಿನಲ್ಲಿ ಅದರ ಬಗ್ಗೆ ಮಾತನಾಡಿಲ್ಲ ಎಂದು ಹೇಳಿದರು.

ಮಣಿಪುರದ ಪರಿಸ್ಥಿತಿ ಕುರಿತು ಅವಲೋಕಿಸಲು ಮತ್ತು ಮೇ 3ರಂದು ಈಶಾನ್ಯ ರಾಜ್ಯದಲ್ಲಿ ಉಂಟಾದ ಜನಾಂಗೀಯ ಘರ್ಷಣೆಯ ಸಂತ್ರಸ್ತರನ್ನು ಭೇಟಿ ಮಾಡಲು ಹಲವಾರು ಪರಿಹಾರ ಶಿಬಿರಗಳಿಗೆ ಭೇಟಿ ನೀಡಲು ವಿರೋಧ ಪಕ್ಷಗಳ ಒಕ್ಕೂಟವಾದ INDIA ದ 21 ಸಂಸದರ ನಿಯೋಗ ಶನಿವಾರ ಇಂಫಾಲ್ ತಲುಪಿದೆ.

ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಶನಿವಾರ ಪ್ರತಿಪಕ್ಷಗಳ ಸಂಸದರ ನಿಯೋಗದ ಮಣಿಪುರ ಭೇಟಿಯನ್ನು 'ಕೇವಲ ಶೋ-ಆಫ್' ಎಂದು ಕರೆದಿದ್ದಾರೆ.

ಈಶಾನ್ಯ ರಾಜ್ಯವು ಇಂಫಾಲ್ ಕಣಿವೆಯಲ್ಲಿ ಕೇಂದ್ರೀಕೃತವಾಗಿರುವ ಬಹುಸಂಖ್ಯಾತ ಮೇಟಿ ಸಮುದಾಯ ಮತ್ತು ಗುಡ್ಡಗಾಡುಗಳನ್ನು ಆಕ್ರಮಿಸಿಕೊಂಡಿರುವ ಕುಕಿ ಸಮುದಾಯದ ನಡುವೆ ಮೇ ತಿಂಗಳಿಂದ ಆರಂಭವಾದ ಜನಾಂಗೀಯ ಘರ್ಷಣೆಗಳಿಗೆ ಸಾಕ್ಷಿಯಾಗಿದೆ. ಹಿಂಸಾಚಾರದಲ್ಲಿ ಇಲ್ಲಿಯವರೆಗೆ 160 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. 

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್, ಮಣಿಪುರದಲ್ಲಿ 200ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಸಚಿವರು ಮತ್ತು ಶಾಸಕರ ಮನೆಗಳನ್ನು ಸುಟ್ಟುಹಾಕಲಾಗಿದೆ ಮತ್ತು ಕೆಲವು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿದೆ. ಆದರೂ, ಪ್ರಧಾನಿ ಮಣಿಪುರಕ್ಕೆ ಹೋಗಿಲ್ಲ ಮತ್ತು ಸಂಸತ್ತಿನಲ್ಲಿ ಇನ್ನೂ ಈ ವಿಷಯದ ಬಗ್ಗೆ ಮಾತನಾಡಿಲ್ಲ ಎಂದರು.

'ಪ್ರಧಾನಿಯವರೇ, ಮಣಿಪುರ ಭಾರತದ ಭಾಗವಾಗಿದೆ ಮತ್ತು ಅದರ ನಾಗರಿಕರು ಭಾರತೀಯ ಪ್ರಜೆಗಳು. ಅವರ ಮಾತನ್ನು ಕೇಳಿ. ಅದಕ್ಕಾಗಿಯೇ INDIA ಒಕ್ಕೂಟದ ಸಂಸದರ ನಿಯೋಗ ರಾಜ್ಯಕ್ಕೆ ಭೇಟಿ ನೀಡಿತ್ತು. ನಾಗರಿಕರ ದುಃಖವನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವರಿಗೆ ಸಾಂತ್ವನ ಹೇಳುವುದನ್ನು ಶೋ-ಆಫ್ ಎಂದು ಹೇಗೆ ಕರೆಯುವಿರಿ?' ಎಂದು ಅವರು ಪ್ರಶ್ನಿಸಿದರು.

ವಿರೋಧ ಪಕ್ಷದ ನಾಯಕರು ಸಂತ್ರಸ್ತ ನಾಗರಿಕರೊಂದಿಗೆ ಮಾತನಾಡಿ, ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿದ್ದಾರೆ. ಇದನ್ನು ಶೋ-ಆಫ್ ಎಂದು ಕರೆದರೆ, ಇದಕ್ಕಿಂತ ಕ್ರೂರ ಸರ್ಕಾರ ಮತ್ತು ರಾಜಕೀಯವನ್ನು ನಾವು ನೋಡಿಲ್ಲ' ಎಂದು ರಾವುತ್ ಆರೋಪಿಸಿದ್ದಾರೆ.

ಶಿವಸೇನಾ (ಯುಬಿಟಿ) ನಾಯಕ ಅರವಿಂದ್ ಸಾವಂತ್ ಅವರು ಮಣಿಪುರಕ್ಕೆ ತೆರಳಿದ ಸಂಸದರ ನಿಯೋಗದ ಭಾಗವಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com