ಕುಸ್ತಿಪಟುಗಳಿಗೆ 'ಲೈಂಗಿಕ ಕಿರುಕುಳ', ಆಯ್ಕೆ ಮಾಡಲು 'sexual favours' ಕೇಳಿದ್ದ WFI ಮುಖ್ಯಸ್ಥ; ಬ್ರಿಜ್ ಭೂಷಣ್ ವಿರುದ್ಧದ 2 FIR ನಲ್ಲೇನಿದೆ?

ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಸಂಸ್ಥೆ (ಡಬ್ಲ್ಯೂಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದಾಖಲಾದ 2 ಪ್ರತ್ಯೇಕ ಎಫ್ ಐಆರ್ ನಲ್ಲಿ ಸಂತ್ರಸ್ತ ಕುಸ್ತಿಪಟುಗಳು ಅನೇಕ ಅಂಶಗಳನ್ನು ಉಲ್ಲೇಖಿಸಿದ್ದು ಈ ಪೈಕಿ 'ಲೈಂಗಿಕ ಕಿರುಕುಳ' ಮತ್ತು 'sexual favours' ಕೇಳಿದ್ದ ಕುರಿತೂ ಕುಸ್ತಿಪಟುಗಳು ಆರೋಪಿಸಿದ್ದಾರೆ.
ಕುಸ್ತಿಪಟುಗಳ ಪ್ರತಿಭಟನೆ
ಕುಸ್ತಿಪಟುಗಳ ಪ್ರತಿಭಟನೆ

ನವದೆಹಲಿ: ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಸಂಸ್ಥೆ (ಡಬ್ಲ್ಯೂಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದಾಖಲಾದ 2 ಪ್ರತ್ಯೇಕ ಎಫ್ ಐಆರ್ ನಲ್ಲಿ ಸಂತ್ರಸ್ತ ಕುಸ್ತಿಪಟುಗಳು ಅನೇಕ ಅಂಶಗಳನ್ನು ಉಲ್ಲೇಖಿಸಿದ್ದು ಈ ಪೈಕಿ 'ಲೈಂಗಿಕ ಕಿರುಕುಳ' ಮತ್ತು 'sexual favours' ಕೇಳಿದ್ದ ಕುರಿತೂ ಕುಸ್ತಿಪಟುಗಳು ಆರೋಪಿಸಿದ್ದಾರೆ.

ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಸಂಸ್ಥೆ (ಡಬ್ಲ್ಯೂಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದಾಖಲಾದ ಎಫ್‌ಐಆರ್‌ನಲ್ಲಿ ನಮೂದಿಸಿರುವ ಆರೋಪಗಳು ಬಯಲಾಗಿವೆ. ಮಹಿಳಾ ಅಥ್ಲೀಟ್‌ಗಳ ಉಸಿರಾಟವನ್ನು ಪರೀಕ್ಷಿಸುವ ನೆಪದಲ್ಲಿ ಅವರನ್ನು ಅಸಮರ್ಪಕವಾಗಿ ಸ್ಪರ್ಶಿಸಿದ, ಮೈ ಸವರಿದ, ಗೌಪ್ಯ ಅಂಗಗಳನ್ನು ಮುಟ್ಟಿದ್ದು ಮಾತ್ರವಲ್ಲದೇ, ಮುಜುಗರ ಉಂಟುಮಾಡುವ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿದ, ಟೂರ್ನಮೆಂಟ್ ಸಂದರ್ಭದಲ್ಲಿ ಗಾಯಗೊಂಡರೆ ಸಂಸ್ಥೆಯೇ ಚಿಕಿತ್ಸೆ ವೆಚ್ಚ ಭರಿಸುವುದಕ್ಕೆ ಪ್ರತಿಯಾಗಿ ಲೈಂಗಿಕ ಸುಖದ ಬೇಡಿಕೆ ಇರಿಸಿದ ಆರೋಪಗಳನ್ನು ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

ಅಂತೆಯೇ ಕುಸ್ತಿಪಟುಗಳಿಗೆ ಡಯಟೀಷಿಯನ್ ಅಥವಾ ಕೋಚ್ ಅನುಮೋದನೆ ನೀಡದ ಅಪರಿಚಿತ ಖಾದ್ಯವನ್ನು ತಿನ್ನಲು ನೀಡಿದ್ದರು, ಅಪ್ರಾಪ್ತ ವಯಸ್ಸಿನ ಆಟಗಾರ್ತಿಯ ಎದೆ ಮೇಲೆ ಕೈಗಳನ್ನು ಆಡಿಸಿದ್ದ. ಕಳೆದ ಏಪ್ರಿಲ್ 21ರಂದು ದೆಹಲಿಯ ಕನ್ನೌಟ್ ಪ್ಲೇಸ್ ಪೊಲೀಸ್ ಠಾಣೆಗೆ ಆರು ಮಂದಿ ಮಹಿಳಾ ಕುಸ್ತಿಪಟುಗಳು ನೀಡಿದ ದೂರಿನ ಆಧಾರದಲ್ಲಿ ಈ ಎಫ್‌ಐಆರ್ ದಾಖಲಿಸಲಾಗಿದೆ. ಅಪ್ರಾಪ್ತ ವಯಸ್ಸಿನ ಕುಸ್ತಿಪಟುವಿನ ತಂದೆ ಕೂಡ ಏಪ್ರಿಲ್ 28ರಂದು ಪ್ರತ್ಯೇಕ ದೂರು ನೀಡಿದ್ದು, ಎರಡೂ ಎಫ್‌ಐಆರ್‌ಗಳಿಂದ ಒಟ್ಟು ಏಳು ಕುಸ್ತಿಪಟುಗಳ ಆರೋಪ ದಾಖಲಾಗಿದೆ.

ಎರಡೂ ಎಫ್‌ಐಆರ್‌ಗಳು ಐಪಿಸಿ ಸೆಕ್ಷನ್ 354 (ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಬಲ ಪ್ರಯೋಗ), 354 ಎ (ಲೈಂಗಿಕ ಕಿರುಕುಳ), 354 ಡಿ (ಅನುಚಿತ ವರ್ತನೆ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿ ಪ್ರಕರಣಗಳನ್ನು ನಮೂದಿಸಿವೆ. ಇವು ಆರೋಪಿಗೆ ಒಂದರಿಂದ ಮೂರು ವರ್ಷ ಜೈಲು ಶಿಕ್ಷೆಗೆ ಗುರಿಪಡಿಸಬಲ್ಲವು.

ಮಹಿಳೆಯರು ಮಾಡಿದ ಆರೋಪಗಳೇನು?
ಸಿಂಗ್ ಅವರು ಅನುಚಿತವಾಗಿ ಮತ್ತು ದೌರ್ಜನ್ಯದ ರೀತಿಯಲ್ಲಿ ಬೆದರಿಕೆ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾರೆ. ಅವರ ಕೈಗೆ ಒಂಟಿಯಾಗಿ ಸಿಗದಂತೆ ತಪ್ಪಿಸಿಕೊಳ್ಳಲು ಕೊಠಡಿಗಳಿಂದ ಹೊರ ಹೋಗುವಾಗ ಗುಂಪುಗಳಲ್ಲಿ ಓಡುತ್ತಿದ್ದೆವು ಎಂದು ಅಥ್ಲೀಟ್‌ಗಳು ಆರೋಪಿಸಿದ್ದಾರೆ. ಗುಂಪುಗಳಿಂದ ಒಬ್ಬೊಬ್ಬರನ್ನೇ ಪ್ರತ್ಯೇಕಿಸುತ್ತಿದ್ದ ಸಿಂಗ್, ಅವರಿಗೆ ಸಮರ್ಪಕವಲ್ಲದ ವೈಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಿದ್ದರು ಎಂದು ದೂರಿದ್ದಾರೆ. "ನನ್ನ ಟಿ ಶರ್ಟ್ ಎತ್ತುವಂತೆ ಬ್ರಿಜ್ ಭೂಷಣ್ ಸೂಚಿಸಿದ್ದರು. ನನ್ನ ಹೊಟ್ಟೆಯ ಮೇಲೆ ಅವರು ಕೈ ಆಡಿಸಿದ್ದರು. ನನ್ನ ಉಸಿರಾಟ ಪರೀಕ್ಷಿಸುವ ನೆಪದಲ್ಲಿ ಹೊಕ್ಕಳಿನ ಮೇಲೆ ಕೈ ಹಾಕಿದ್ದರು. ಆರೋಗ್ಯ ಹಾಗೂ ಪ್ರದರ್ಶನಕ್ಕೆ ಒಳ್ಳೆಯದು ಎಂದು ನನಗೆ ಪರಿಚಯವಿಲ್ಲದ ಖಾದ್ಯವೊಂದನ್ನು ತಿನ್ನಲು ಹೇಳಿದ್ದರು. ಅದಕ್ಕೆ ಡಯಟೀಷಿಯನ್ ಅಥವಾ ಕೋಚ್ ಅನುಮೋದನೆ ನೀಡಿರಲಿಲ್ಲ" ಎಂದು ಒಬ್ಬ ಮಹಿಳಾ ಆಟಗಾರ್ತಿ ಆರೋಪಿಸಿದ್ದಾರೆ.

ಅಂತೆಯೇ "ವಿದೇಶದಲ್ಲಿ ಸ್ಪರ್ಧೆ ವೇಳೆ ಗಾಯಗೊಂಡಿದ್ದೆ. ಲೈಂಗಿಕ ಸುಖ ನೀಡಿದರೆ ಚಿಕಿತ್ಸೆಯ ವೆಚ್ಚವನ್ನು ಸಂಸ್ಥೆಯೇ ನೋಡಿಕೊಳ್ಳಲಿದೆ ಎಂದು ಬ್ರಿಜ್ ಭೂಷಣ್ ಸಿಂಗ್ ಹೇಳಿದ್ದರು. ನಾನು ಮ್ಯಾಟ್ ಮೇಲೆ ಮಲಗಿದ್ದಾಗ ನನ್ನ ಬಳಿ ಬಂದಿದ್ದ ಸಿಂಗ್, ನನ್ನ ಪಕ್ಕ ಕುಳಿತಿದ್ದರು. ಆಗ ಅಲ್ಲಿ ನನ್ನ ಕೋಚ್ ಇರಲಿಲ್ಲ. ನನ್ನ ಅನುಮತಿ ಇಲ್ಲದೆ ನನ್ನ ಟಿ ಶರ್ಟ್ ಎತ್ತಿ, ಉಸಿರಾಟ ಪರೀಕ್ಷಿಸುವ ನೆಪದಲ್ಲಿ ಎದೆಯ ಮೇಲೆ ಅವರ ಕೈ ಇರಿಸಿದ್ದರು. ನಂತರ ಹೊಟ್ಟೆಯ ಮೇಲೆ ಜಾರಿಸಿದ್ದರು" ಎಂದು ಮತ್ತೊಬ್ಬ ಕುಸ್ತಿಪಟು ಆರೋಪಿಸಿದ್ದಾರೆ. ಇತರೆ ಮಹಿಳೆಯರು ಕೂಡ ಇದೇ ರೀತಿಯ ಲೈಂಗಿಕ ದೌರ್ಜನ್ಯ ಹಾಗೂ ಅಸಭ್ಯ ವರ್ತನೆಯ ಆರೋಪ ಮಾಡಿದ್ದಾರೆ. ಕುಸ್ತಿ ಸಂಸ್ಥೆ ಕಾರ್ಯದರ್ಶಿ ವಿನೋದ್ ತೋಮರ್ ವಿರುದ್ಧವೂ ಒಬ್ಬ ಮಹಿಳಾ ಕುಸ್ತಿಪಟು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. 

ಮತ್ತೆ ಆರೋಪ ಅಲ್ಲಗಳೆದ ಬ್ರಿಜ್ ಭೂಷಣ್
ಲೈಂಗಿಕ ದುರ್ವರ್ತನೆ ಆರೋಪಗಳನ್ನು ಬ್ರಿಜ್ ಭೂಷಣ್ ಮತ್ತೆ ಅಲ್ಲಗಳೆದಿದ್ದಾರೆ. ಎಲ್ಲ ಆರೋಪಗಳೂ ಶುದ್ಧ ಸುಳ್ಳು ಎಂದು ಅವರು ಬುಧವಾರ ಹೇಳಿಕೆ ನೀಡಿದ್ದರು. "ನನ್ನ ವಿರುದ್ಧದ ಒಂದೇ ಒಂದು ಆರೋಪ ಸಾಬೀತಾದರೂ ನನ್ನನ್ನು ನಾನು ನೇಣಿಗೆ ಒಡ್ಡಿಕೊಳ್ಳುತ್ತೇನೆ. ನಿಮ್ಮ ಬಳಿ (ಕುಸ್ತಿಪಟುಗಳು) ಯಾವುದೇ ಪುರಾವೆ ಇದ್ದರೂ ಅದನ್ನು ಕೋರ್ಟ್‌ ಮುಂದೆ ಹಾಜರುಪಡಿಸಿ. ನಾನು ಯಾವುದೇ ಶಿಕ್ಷೆ ಎದುರಿಸಲೂ ಸಿದ್ಧ" ಎಂದು ಅವರು ಹೇಳಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com