ಗಡಿ ವಿವಾದ ಬಗೆಹರಿಸಲು ಪ್ರಧಾನಿ ಮೋದಿ, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್ ಒಪ್ಪಿಗೆ
ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಪ್ರವಾಸದಲ್ಲಿರುವ ನೇಪಾಳ ಪ್ರಧಾನಿ ಪುಷ್ಪಕಮಲ್ ದಹಾಲ್ 'ಪ್ರಚಂಡ' ಅವರು ಗುರುವಾರ ವ್ಯಾಪಕ ಮಾತುಕತೆಯ ನಂತರ ಸ್ನೇಹದಿಂದ ಗಡಿ ವಿವಾದ ಪರಿಹರಿಸಲು ಒಪ್ಪಿಕೊಂಡಿದ್ದಾರೆ.
Published: 02nd June 2023 09:51 AM | Last Updated: 02nd June 2023 08:40 PM | A+A A-

ಪ್ರಧಾನಿ ಮೋದಿ, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಪ್ರವಾಸದಲ್ಲಿರುವ ನೇಪಾಳ ಪ್ರಧಾನಿ ಪುಷ್ಪಕಮಲ್ ದಹಾಲ್ 'ಪ್ರಚಂಡ' ಅವರು ಗುರುವಾರ ವ್ಯಾಪಕ ಮಾತುಕತೆಯ ನಂತರ ಸ್ನೇಹದಿಂದ ಗಡಿ ವಿವಾದ ಪರಿಹರಿಸಲು ಒಪ್ಪಿಕೊಂಡಿದ್ದಾರೆ.
ಮುಂದಿನ 10 ವರ್ಷಗಳಲ್ಲಿ ಭಾರತದ ವಿದ್ಯುತ್ ಆಮದನ್ನು 10,000 ಮೆಗಾವ್ಯಾಟ್‌ಗೆ ಹೆಚ್ಚಿಸುವುದು ಸೇರಿದಂತೆ ಹಲವು ಪ್ರಮುಖ ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಹಾಕಿದ್ದಾರೆ.
ಪ್ರಸ್ತುತ, ಭಾರತ ನೇಪಾಳದಿಂದ ಕೇವಲ 450 ಮೆಗಾವ್ಯಾಟ್ ವಿದ್ಯುತ್ ಅನ್ನು ಮಾತ್ರ ಆಮದು ಮಾಡಿಕೊಳ್ಳುತ್ತಿದೆ. ಭಾರತದ ಗ್ರಿಡ್ ಮೂಲಕ ನೇಪಾಳದಿಂದ ಬಾಂಗ್ಲಾದೇಶಕ್ಕೆ ಮೊದಲ ತ್ರಿಪಕ್ಷೀಯ ವಿದ್ಯುತ್ ವ್ಯಾಪಾರಕ್ಕೂ ಉಭಯ ನಾಯಕರು ಒಪ್ಪಿಗೆ ನೀಡುವ ಮೂಲಕ ಪ್ರಾದೇಶಿಕ ಸಹಕಾರವನ್ನು ಬಲಪಡಿಸಿದ್ದಾರೆ.
ದ್ವಿಪಕ್ಷೀಯ ಮಾತುಕತೆಯ ನಂತರ ಮಾತನಾಡಿದ ಪ್ರಚಂಡ ಅವರು, “ಸ್ಥಾಪಿತ ದ್ವಿಪಕ್ಷೀಯ ರಾಜತಾಂತ್ರಿಕ ಕಾರ್ಯವಿಧಾನದ ಮೂಲಕ ಗಡಿ ವಿವಾದವನ್ನು ಪರಿಹರಿಸಲು ನಾನು ಪ್ರಧಾನಿ ಮೋದಿ ಜಿ ಅವರನ್ನು ಒತ್ತಾಯಿಸುತ್ತೇನೆ.... ಭಾರತವು ತಮ್ಮ ನೆರೆಹೊರೆಯ ಮೊದಲ ನೀತಿಯಂತೆ ನೇಪಾಳದ ಪರವಾಗಿ ನಿಂತಿದೆ ಮತ್ತು ನಾವು ಸಹ ಅದನ್ನೇ ಆಶಿಸುತ್ತೇವೆ. ಗಡಿ ಸಮಸ್ಯೆಯನ್ನು ರಾಜತಾಂತ್ರಿಕವಾಗಿ ಪರಿಹರಿಸಲಾಗುವುದು ಎಂದರು.
ಇದನ್ನು ಓದಿ: ಮೇ 31 ರಿಂದ ಜೂನ್ 3 ರವರೆಗೆ ನೇಪಾಳ ಪ್ರಧಾನಿ ಪ್ರಚಂಡ ಭಾರತಕ್ಕೆ ಭೇಟಿ
2020ರಲ್ಲಿ ನೇಪಾಳವು ಉತ್ತರಾಖಂಡದ ಲಿಂಪಿಯಾಧುರಾ, ಕಾಲಾಪಾನಿ ಮತ್ತು ಲಿಪುಲೇಖ್ ಎಂಬ ಮೂರು ಪ್ರದೇಶಗಳನ್ನು ತಮ್ಮ ಭೂಮಿಯ ಭಾಗವಾಗಿ ತೋರಿಸುವ ಹೊಸ ರಾಜಕೀಯ ನಕ್ಷೆಯನ್ನು ಪ್ರಕಟಿಸಿದ ನಂತರ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿತು.
ಭಾರತ ಮತ್ತು ನೇಪಾಳದ ನಡುವೆ ಗಡಿಗಳು ಅಡೆತಡೆಗಳಾಗಬಾರದು ಮತ್ತು ಭವಿಷ್ಯದಲ್ಲಿ ಪಾಲುದಾರಿಕೆ ಸೂಪರ್‌ಹಿಟ್ ಆಗಬೇಕು ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದರು.
ರೈಲು ಸಂಪರ್ಕ, ವಿದ್ಯುತ್ ಖರೀದಿ ಒಪ್ಪಂದಗಳು, ಜಲವಿದ್ಯುತ್ ಶಕ್ತಿ, ಪೆಟ್ರೋಲಿಯಂ ಮೂಲಸೌಕರ್ಯ, ಗಡಿಯಾಚೆಗಿನ ಪಾವತಿ ವ್ಯವಸ್ಥೆಗಳು ಮತ್ತು ವ್ಯಾಪಾರ ಹಾಗೂ ಹೂಡಿಕೆ ಸುಧಾರಿಸುವ ಹಲವು ಒಪ್ಪಂದಗಳಿಗೆ ಭಾರತ ಹಾಗೂ ನೇಪಾಳ ಸಹಿ ಹಾಕಿವೆ.