ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಎನ್‌ಸಿಪಿ ಶುಕ್ರವಾರ ಹೇಳಿಕೊಂಡಿದೆ.
ಈ ವಿಷಯವನ್ನು ಅರಿತು ಮುಂಬೈ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪವಾರ್ ಅವರ ಪುತ್ರಿ ಮತ್ತು ಲೋಕಸಭಾ ಸದಸ್ಯೆ ಸುಪ್ರಿಯಾ ಸುಳೆ ನೇತೃತ್ವದ ಎನ್‌ಸಿಪಿ ನಾಯಕರ ನಿಯೋಗ ಮುಂಬೈ ಪೊಲೀಸ್ ಮುಖ್ಯಸ್ಥ ವಿವೇಕ್ ಫನ್ಸಾಲ್ಕರ್ ಅವರನ್ನು ಭೇಟಿ ಮಾಡಿ, ಕ್ರಮಕ್ಕೆ ಒತ್ತಾಯಿಸಿದೆ.
82 ವರ್ಷದ ಪವಾರ್ ಅವರಿಗೆ ಫೇಸ್‌ಬುಕ್‌ನಲ್ಲಿ ಜೀವ ಬೆದರಿಕೆಯ ಸಂದೇಶ ಬಂದಿದೆ ಎಂದು ಎನ್‌ಸಿಪಿ ನಾಯಕರು ಪೊಲೀಸರಿಗೆ ತಿಳಿಸಿದ್ದಾರೆ.
ಕೊಲೆ ಬೆದರಿಕೆಯ ಸ್ಕ್ರೀನ್‌ಶಾಟ್‌ಗಳ ಪ್ರಿಂಟೌಟ್‌ಗಳನ್ನು ಸುಪ್ರಿಯಾ ಸುಳೆ ಪೊಲೀಸರಿಗೆ ಸಲ್ಲಿಸಿದ್ದಾರೆ.
ಎನ್‌ಸಿಪಿ ಮುಖ್ಯಸ್ಥರಿಗೆ ಸಾಮಾಜಿಕ ಮಾಧ್ಯಮ ವೇದಿಕೆಯ ಮೂಲಕ ಜೀವಬೆದರಿಕೆ ಹಾಕಲಾಗಿದೆ. ನಾವು ಅದನ್ನು ಪರಿಶೀಲಿಸುತ್ತಿದ್ದೇವೆ. ಈ ಸಂಬಂಧ ತನಿಖೆಯನ್ನು ಪ್ರಾರಂಭಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಈ ಸಂಬಂಧ ದಕ್ಷಿಣ ವಲಯದ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆಯಲ್ಲಿ ಪೊಲೀಸರು ತೊಡಗಿದ್ದಾರೆ.
Advertisement