
ಧೋಲ್ಪುರ್: ರಾಜಸ್ಥಾನದ ಧೋಲ್ಪುರ್ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಮಹಿಳೆ ಮತ್ತು ಆಕೆಯ ಒಂದು ವರ್ಷದ ಮಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದುಷ್ಕರ್ಮಿಗಳು ರಾಜಖೇರಾದ ಬನ್ವಾರಿ ಅವರ ಮನೆಗೆ ನುಗ್ಗಿ ಅವರ ಪತ್ನಿ ಸೀಮಾ(25) ಮತ್ತು ಕೋಣೆಯಲ್ಲಿ ಮಲಗಿದ್ದ ದಂಪತಿಯ ಒಂದು ವರ್ಷದ ಮಗಳ ಮೇಲೆ ಗುಂಡು ಹಾರಿಸಿದ್ದಾರೆ. ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮನೆಯಲ್ಲಿ ಬನ್ವಾರಿ ಸಹ ಇದ್ದರು. ಆದರೆ ಅವರು ಭಯದಿಂದ ಒಂದು ಸ್ಥಳದಲ್ಲಿ ಅವಿತುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
"ಇಂದು ಬೆಳಗ್ಗೆ ನಮಗೆ ಮಾಹಿತಿ ಸಿಕ್ಕಿ ತಕ್ಷಣ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಗ್ರಾಮದ ಕೆಲವರ ವಿರುದ್ಧ ಆರೋಪ ಮಾಡಿದ್ದು, ಆರೋಪಿಗಳನ್ನು ಗುರುತಿಸಲು ತನಿಖೆ ನಡೆಸಲಾಗುತ್ತಿದೆ ಎಂದು ಧೋಲ್ಪುರ ಎಸ್ಪಿ ಮನೋಜ್ ಕುಮಾರ್ ತಿಳಿಸಿದ್ದಾರೆ.
ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸುತ್ತಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
Advertisement