ಕಾಂಗ್ರೆಸ್‌ಗೆ 'ಭಾರತ್ ಜೋಡೋ', ಬಿಜೆಪಿ-ಆರ್‌ಎಸ್‌ಎಸ್‌ಗೆ 'ಭಾರತ್ ತೋಡೋ' ಸಿದ್ಧಾಂತವಿದೆ: ರಾಹುಲ್ ಗಾಂಧಿ

ಪ್ರತಿಪಕ್ಷಗಳ ಸಭೆಗೂ ಮುನ್ನ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಶುಕ್ರವಾರ, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಹೋರಾಡಲು ಒಗ್ಗಟ್ಟಿನಿಂದ ಇರುವಂತೆ ತಮ್ಮ ಪಕ್ಷದ ನಾಯಕರಿಗೆ ಮನವಿ ಮಾಡಿದರು.
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on

ಪಾಟ್ನಾ: ಪ್ರತಿಪಕ್ಷಗಳ ಸಭೆಗೂ ಮುನ್ನ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಶುಕ್ರವಾರ, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಹೋರಾಡಲು ಒಗ್ಗಟ್ಟಿನಿಂದ ಇರುವಂತೆ ತಮ್ಮ ಪಕ್ಷದ ನಾಯಕರಿಗೆ ಮನವಿ ಮಾಡಿದರು ಮತ್ತು 'ಭಾರತ್ ಜೋಡೋ' ನಮ್ಮ ನಂಬಿಕೆ. ಆದರೆ, ಕಾಂಗ್ರೆಸ್‌ಗೆ ವ್ಯತಿರಿಕ್ತವಾಗಿ ಬಿಜೆಪಿ-ಆರ್‌ಎಸ್‌ಎಸ್ 'ಭಾರತ್ ತೋಡೋ' ಸಿದ್ಧಾಂತವನ್ನು ಹೊಂದಿದೆ ಎಂದು ದೂರಿದರು.

2024ರ ಲೋಕಸಭಾ ಚುನಾವಣೆಗೆ ಕಾರ್ಯತಂತ್ರವನ್ನು ರೂಪಿಸಲು ವಿರೋಧ ಪಕ್ಷಗಳು ಇಂದು ಪಾಟ್ನಾದಲ್ಲಿ ಸಭೆ ನಡೆಸಲಿವೆ. ಸಭೆಗೆ ಹಾಜರಾಗಲು ಪಾಟ್ನಾಗೆ ಆಗಮಿಸಿರುವ ರಾಹುಲ್ ಗಾಂಧಿ, ಪಕ್ಷದ ಕಚೇರಿಯಲ್ಲಿ ಮಾತನಾಡಿದರು. ನಾವು ಬಿಹಾರವನ್ನು ಗೆದ್ದರೆ ಇಡೀ ದೇಶವನ್ನು ಗೆಲ್ಲುತ್ತೇವೆ ಎಂದು ಹೇಳಿದರು.

'ಸದ್ಯ ಭಾರತದಲ್ಲಿ ಸಿದ್ಧಾಂತದ ಹೋರಾಟ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷವು 'ಭಾರತ್ ಜೋಡೋ' (ಭಾರತವನ್ನು ಒಂದುಗೂಡಿಸುವ) ಸಿದ್ಧಾಂತವನ್ನು ಹೊಂದಿದ್ದರೆ, ಬಿಜೆಪಿ-ಆರ್‌ಆರ್‌ಎಸ್ 'ಭಾರತ್ ತೋಡೋ' (ಭಾರತದವನ್ನು ಒಡೆಯುವ) ಸಿದ್ಧಾಂತವನ್ನು ಹೊಂದಿದೆ. ನಾವು ದೇಶದಲ್ಲಿ ಪ್ರೀತಿಯನ್ನು ಹರಡುತ್ತೇವೆ ಮತ್ತು ಮೊಹಬ್ಬತ್ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ, ಬಿಜೆಪಿ-ಆರ್‌ಎಸ್‌ಎಸ್ ದ್ವೇಷ ಮತ್ತು ಸಮಾಜವನ್ನು ವಿಭಜಿಸುವ ಬಗ್ಗೆ ಮಾತನಾಡುತ್ತಿವೆ' ಎಂದು ಕಾಂಗ್ರೆಸ್ ನಾಯಕ ಹೇಳಿದರು.

'ಭಾರತ್ ಜೋಡೋ ಯಾತ್ರೆ ನಡೆಯುತ್ತಿರುವಾಗ ನಾವು ಹೋದಲ್ಲೆಲ್ಲಾ ಬಿಹಾರದ ಜನ ಸಿಗುತ್ತಿದ್ದರು. ನನ್ನನ್ನು ಭೇಟಿಯಾಗಲು ಬರುತ್ತಿದ್ದವರನ್ನು ನಾನು ಎಲ್ಲಿಯವರು ಎಂದು ಕೇಳಿದಾಗ, ಅವರು ಬಿಹಾರ ಎಂದು ನನಗೆ ತಿಳಿಸಿದರು. ನಾನು ಕೇರಳ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ, ದೆಹಲಿ, ಪಂಜಾಬ್ ಮತ್ತು ಕಾಶ್ಮೀರದಲ್ಲಿ ನಡೆದಿದ್ದೇನೆ ಮತ್ತು ಬಿಹಾರದ ಜನರನ್ನು ನಾನು ಎಲ್ಲೆಡೆ ಕಂಡಿದ್ದೇನೆ' ಎಂದು ಹೇಳಿದರು.

2024ರ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲಾ ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಬಿಜೆಪಿಯನ್ನು ಸೋಲಿಸಲಿವೆ. ದ್ವೇಷವನ್ನು ದ್ವೇಷದಿಂದ ಎದುರಿಸಲು ಸಾಧ್ಯವಿಲ್ಲ ಎಂದು ನಿಮಗೆ ತಿಳಿದಿದೆ. ಅದನ್ನು ಪ್ರೀತಿಯಿಂದ ಮಾತ್ರ ಸೋಲಿಸಬಹುದು. ದೇಶವನ್ನು ಒಗ್ಗೂಡಿಸಲು ಮತ್ತು ಪ್ರೀತಿಯನ್ನು ಹರಡಲು ಕಾಂಗ್ರೆಸ್ ಶ್ರಮಿಸುತ್ತಿದೆ. ಅದಕ್ಕಾಗಿಯೇ ನಾವು ಬಿಹಾರಕ್ಕೆ ಬಂದಿದ್ದೇವೆ ಏಕೆಂದರೆ, ಕಾಂಗ್ರೆಸ್‌ನ ಡಿಎನ್‌ಎ ಬಿಹಾರದಲ್ಲಿದೆ ಎಂದು ಅವರು ಹೇಳಿದರು.

'ಕರ್ನಾಟಕದಲ್ಲಿ ಬಿಜೆಪಿ ನಾಯಕರು ಭಾಷಣ ಮಾಡಿದರು ಮತ್ತು ಎಲ್ಲೆಡೆ ಹೋದರು. ಆದರೆ, ಫಲಿತಾಂಶವನ್ನು ನೀವು ನೋಡಿದಿರಿ. 'ಕಾಂಗ್ರೆಸ್ ಒಗ್ಗಟ್ಟಾಗಿ ನಿಂತ ತಕ್ಷಣ ಕರ್ನಾಟಕದಲ್ಲಿ ಬಿಜೆಪಿ ಕಣ್ಮರೆಯಾಯಿತು'. ತೆಲಂಗಾಣ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಎಲ್ಲಿಯೂ ಇರುವುದಿಲ್ಲ ಮತ್ತು ಕಾಂಗ್ರೆಸ್ ಗೆಲ್ಲುತ್ತದೆ ಎಂದು ನಾನು ಈ ಹಂತದಿಂದಲೇ ಹೇಳುತ್ತಿದ್ದೇನೆ ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದೇಶದ ಜನರನ್ನು ಒಗ್ಗೂಡಿಸಲು ಮುಂದಾಗಿರುವವರು ರಾಹುಲ್ ಗಾಂಧಿ. ಅವರು ದೇಶದ ಪ್ರತಿಯೊಂದು ರಾಜಕೀಯ ಪಕ್ಷಗಳೊಂದಿಗೆ ಮಾತನಾಡಲು ಮುಂದಾದರು ಎಂದು ಹೇಳಿದರು.

'ನಾವು ಪಾಟ್ನಾದಲ್ಲಿ 20 ವಿರೋಧ ಪಕ್ಷಗಳು ಸಭೆ ಸೇರುತ್ತಿದ್ದೇವೆ ಮತ್ತು 2024ರಲ್ಲಿ ನಾವು ಒಟ್ಟಾಗಿ ಹೋರಾಡುತ್ತೇವೆ. ನಮ್ಮ ನಡುವಿನ ಆಂತರಿಕ ಭಿನ್ನಭಿಪ್ರಾಯಗಳನ್ನು ತೆಗೆದುಹಾಕಲು ಬಿಹಾರದ ಜನರನ್ನು ಕೇಳಲು ಬಯಸುತ್ತೇನೆ. ನಾವು ಬಿಹಾರವನ್ನು ಗೆದ್ದರೆ ನಾವು ಇಡೀ ದೇಶವನ್ನು ಗೆಲ್ಲುತ್ತೇವೆ' ಎಂದು ಖರ್ಗೆ ಹೇಳಿದರು.

ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಪಾಟ್ನಾ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅಲ್ಲಿ ಹೆಚ್ಚಿನ ಸಂಖ್ಯೆಯ ಕಾಂಗ್ರೆಸ್ ಪಕ್ಷದ ಬೆಂಬಲಿಗರು ಉಪಸ್ಥಿತರಿದ್ದರು.

ಇಬ್ಬರೂ ನಾಯಕರು ನೇರವಾಗಿ ಕಾಂಗ್ರೆಸ್ ಕಚೇರಿ 'ಸದಕತ್ ಆಶ್ರಮ'ಕ್ಕೆ ಆಗಮಿಸಿದರು. ಅಲ್ಲಿ ಅವರನ್ನು ರಾಜ್ಯದ ಪಕ್ಷದ ಮುಖಂಡರು ಸ್ವಾಗತಿಸಿದರು. 'ಮೊಹಬ್ಬತ್ ಕಿ ದುಕಾನ್' ಘೋಷಣೆಯನ್ನು ಎತ್ತಿ ತೋರಿಸುವ ಹೆಚ್ಚಿನ ಸಂಖ್ಯೆಯ ಹೋರ್ಡಿಂಗ್‌ಗಳು ಮತ್ತು ಇತರ ಪ್ರದರ್ಶನ ಫಲಕಗಳನ್ನು ಪಕ್ಷವು ಪಾಟ್ನಾದಲ್ಲಿ ಸ್ಥಾಪಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com