
ಕಾರು ಅಡ್ಡಗಟ್ಟಿರುವ ದರೋಡೆಕೋರರು.
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಾಡಹಗಲೇ ಕಾರು ಅಡ್ಡಗಟ್ಟಿ, ಬೆದರಿಸಿ ದರೋಡೆ ಮಾಡಿರುವ ಘಟನೆ ವರದಿಯಾಗಿದೆ.
ಇಂಡಿಯಾ ಗೇಟ್‌ನಿಂದ ರಿಂಗ್ ರೋಡ್‌ಗೆ ಸಂಪರ್ಕ ಕಲ್ಪಿಸುವ ಪ್ರಗತಿ ಮೈದಾನದ ಸುರಂಗ ಬೈಕ್‌ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಗನ್ ತೋರಿಸಿ ಕಾರಿನಲ್ಲಿದ್ದ ಡೆಲಿವರಿ ಏಜೆಂಟ್‌ನ ಬ್ಯಾಗ್ ದೋಚಿ ಪರಾರಿಯಾಗಿದ್ದಾರೆ.
ಪಟೇಲ್ ಸಾಜನ್ ಕುಮಾರ್ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದು, ಅವರು ಚಾಂದಿನಿ ಚೌಕ್‌ನಲ್ಲಿರುವ ಓಮಿಯಾ ಎಂಟರ್‌ಪ್ರೈಸಸ್‌ನಲ್ಲಿ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು. ತನ್ನ ಸ್ನೇಹಿತ ಜಿಗರ್ ಪಟೇಲ್ ಜೊತೆ ಸೇರಿ ಶನಿವಾರ ಸಂಜೆ ಗುರುಗ್ರಾಮಕ್ಕೆ 2 ಲಕ್ಷ ರೂ. ನೀಡಲು ಹೋಗುತ್ತಿದ್ದರು.
ರಿಂಗ್ ರಸ್ತೆಯಿಂದ ಪ್ರಗತಿ ಮೈದಾನದ ಸುರಂಗ ಮಾರ್ಗ ಪ್ರವೇಶಿಸಿ ಸ್ವಲ್ಪ ದೂರ ಸಾಗುತ್ತಿದ್ದಾಗ 2 ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳು ಗನ್ ತೋರಿಸಿ ಬಲವಂತವಾಗಿ ಕ್ಯಾಬ್ ತಡೆದಿದ್ದಾರೆ. ಬಳಿಕ ನಗದು ತುಂಬಿದ್ದ ಬ್ಯಾಗ್ ಅನ್ನು ದೋಚಿ, ಪರಾರಿಯಾಗಿದ್ದಾರೆ.
ಪಟೇಲ್ ಸಾಜನ್ ಕುಮಾರ್ ದೂರಿನ ಮೇರೆಗೆ ತಿಲಕ್ ಮಾರ್ಗ್ ಠಾಣೆ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 397 ಮತ್ತು 34 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಈವರೆಗೂ ದುಷ್ಕರ್ಮಿಗಳ ಸುಳಿವು ಪತ್ತೆಯಾಗಿಲ್ಲ. ಈ ನಡುವೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದರೋಡೆ ಪ್ರಕರಣದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Four motorcycle-borne men on two separate bikes forcibly stopped a vehicle inside the Pragati Maidan tunnel in the national capital and robbed the occupants of Rs 2 lakh on gunpoint.@NewIndianXpress @santwana99 pic.twitter.com/ZxWy4pQyEj
— Ujwal Jalali (@ujwaljalali) June 26, 2023
ಈ ನಡುವೆ ಘಟನೆಗೆ ಕಿಡಿಕಾರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ರಾಷ್ಟ್ರ ರಾಜಧಾನಿಯಲ್ಲಿ ಅಪರಾಧ ಹೆಚ್ಚಳವಾಗಿದ್ದು, ಲೆಫ್ಟಿನೆಂಟ್ ಗವರ್ನರ್ ವಿಕೆ.ಸಕ್ಸೇನಾ ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಎಎಪಿ ಸರ್ಕಾರದ ಅಡಿಯಲ್ಲಿ ಕಾನೂನು ಸುವ್ಯವಸ್ಥೆ ಇದ್ದಿದ್ದರೆ ದೆಹಲಿ ಅತ್ಯಂತ ಸುರಕ್ಷಿತವಾಗಿರುತ್ತಿತ್ತು: ಅರವಿಂದ ಕೇಜ್ರಿವಾಲ್
ದೆಹಲಿಯ ನಿವಾಸಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುವ ವ್ಯಕ್ತಿಗಳಿಗೆ ಸಕ್ಸೇನಾ ದಾರಿ ಮಾಡಿಕೊಡಬೇಕು. ಎಎಪಿ ನೇತೃತ್ವದ ಸರ್ಕಾರಕ್ಕೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಹಸ್ತಾಂತರಿಸಬೇಕೆಂದು ಒತ್ತಾಯಿಸಿದ್ದಾರೆ.
ಎಲ್‌ಜಿ ರಾಜೀನಾಮೆ ಕೊಡಲಿ. ದೆಹಲಿಯ ಜನರಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸುವ ಯಾರಿಗಾದರೂ ದಾರಿ ಮಾಡಿಕೊಡಿ. ದೆಹಲಿಯನ್ನು ಸುರಕ್ಷಿತವಾಗಿಡಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಅದನ್ನು ನಮಗೆ ಒಪ್ಪಿಸಿ. ನಗರವನ್ನು ಅದರ ನಾಗರಿಕರಿಗೆ ಹೇಗೆ ಸುರಕ್ಷಿತವಾಗಿಸುವುದು ನಾವು ನಿಮಗೆ ತೋರಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.