ಮತದಾರರಿಗೆ ಬೆದರಿಕೆ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆ ಸತ್ಯಕ್ಕೆ ದೂರ ಎಂದ ಬಿಎಸ್ಎಫ್
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾಡಿರುವ ಗಡಿ ಪ್ರದೇಶಗಳಲ್ಲಿ ಮತದಾರರಿಗೆ ಬೆದರಿಕೆ ಹಾಕಲಾಗುತ್ತಿದೆ ಎನ್ನುವ ಆರೋಪಗಳು 'ಆಧಾರರಹಿತ' ಮತ್ತು 'ಸತ್ಯಕ್ಕೆ ದೂರ' ಎಂದು ಗಡಿ ಭದ್ರತಾ ಪಡೆ ಸೋಮವಾರ ಬಣ್ಣಿಸಿದೆ.
ಬ್ಯಾನರ್ಜಿ, ಕೂಚ್ ಬೆಹಾರ್‌ನಲ್ಲಿ ಪಂಚಾಯತ್ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ, ಕೇಸರಿ ಪಾಳಯದ ಆಜ್ಞೆಯ ಮೇರೆಗೆ ಬಿಎಸ್‌ಎಫ್ ಗಡಿ ಪ್ರದೇಶಗಳಲ್ಲಿ ಮತದಾರರನ್ನು ಹೆದರಿಸುತ್ತಿದೆ ಎಂದು ಆರೋಪಿಸಿದರು ಮತ್ತು ಸೂಕ್ಷ್ಮವಾಗಿ ಗಮನಿಸುವಂತೆ ಪೊಲೀಸರನ್ನು ಕೇಳಿಕೊಂಡರು.
'ಕೂಚ್ ಬೆಹಾರ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಪಶ್ಚಿಮ ಬಂಗಾಳದ ಸಿಎಂ ಬಿಎಸ್‌ಎಫ್ ವಿರುದ್ಧ ಮಾಡಿದ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ ಮತ್ತು ಸತ್ಯಕ್ಕೆ ದೂರವಾಗಿವೆ' ಎಂದು ಬಿಎಸ್‌ಎಫ್ ಗುವಾಹಟಿ ಫ್ರಾಂಟಿಯರ್ ಹೇಳಿಕೆಯಲ್ಲಿ ತಿಳಿಸಿದೆ.
ಕೂಚ್ ಬೆಹರ್ ಬಿಎಸ್ಎಫ್‌ನ ಗುವಾಹಟಿ ಫ್ರಾಂಟಿಯರ್ ವ್ಯಾಪ್ತಿಯ ಅಡಿಯಲ್ಲಿ ಬರುತ್ತದೆ.
ಬಿಎಸ್ಎಫ್ ಭಾರತದ ಅಂತರರಾಷ್ಟ್ರೀಯ ಗಡಿಯನ್ನು ಭದ್ರಪಡಿಸುವ ಜವಾಬ್ದಾರಿಯನ್ನು ವಹಿಸಿಕೊಂಡ ವೃತ್ತಿಪರ ಪಡೆ ಮತ್ತು 'ಯಾವುದೇ ಕಾರಣಕ್ಕೂ ಯಾವುದೇ ಗಡಿ ಜನಸಂಖ್ಯೆ ಅಥವಾ ಗಡಿ ಪ್ರದೇಶಗಳಲ್ಲಿನ ಮತದಾರರನ್ನು ಎಂದಿಗೂ ಹೆದರಿಸಿಲ್ಲ' ಎಂದಿದೆ.
ಗಡಿ ಪ್ರದೇಶದಲ್ಲಿ ಯಾವುದೇ ವ್ಯಕ್ತಿಯನ್ನು ಬೆದರಿಸುವ ಯಾವುದೇ ದೂರು ಬಿಎಸ್ಎಫ್ ಅಥವಾ ಯಾವುದೇ ಇತರ ಸಹೋದರ ಸಂಸ್ಥೆಯ ಮೇಲೆ ಇದುವರೆಗೆ ಬಂದಿಲ್ಲ. ಗಡಿ ಮತ್ತು ಇತರ ಪ್ರದೇಶಗಳಲ್ಲಿ ಶಾಂತಿಯುತ ಮತ್ತು ಅಡೆತಡೆಯಿಲ್ಲದ ಚುನಾವಣಾ ಪ್ರಕ್ರಿಯೆಗೆ ಬಿಎಸ್ಎಫ್ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಹೇಳಿಕೆ ತಿಳಿಸಿದೆ.
ಬಿಎಸ್‌ಎಫ್ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದ್ದು, ಅವರು ಸ್ಥಳೀಯ ಆಡಳಿತದ ಒಟ್ಟಾರೆ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂದು ಅದು ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ