ಉದ್ಯೋಗಕ್ಕಾಗಿ ಭೂಹಗರಣ: ಬಿಹಾರದ ಮಾಜಿ ಸಿಎಂ ರಾಬ್ರಿ ದೇವಿ ವಿಚಾರಣೆ ಬೆನ್ನಲ್ಲೇ ಇಂದು ಪತಿ ಲಾಲು ವಿರುದ್ಧ ಸಿಬಿಐ ಗ್ರಿಲ್
ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ಪಾಟ್ನಾ ನಿವಾಸದಲ್ಲಿ ಕೇಂದ್ರೀಯ ತನಿಖಾ ದಳ (CBI) ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ಅವರ ಪತಿ ಆರ್‌ಜೆಡಿ ಮುಖ್ಯಸ್ಥ ಮತ್ತು ಕೇಂದ್ರದ ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಅವರಿಗೆ ಉದ್ಯೋಗಕ್ಕಾಗಿ ಭೂಹಗರಣ ಸಂಬಂಧ ನೋಟಿಸ್ ಜಾರಿ ಮಾಡಿದೆ.
Published: 07th March 2023 08:39 AM | Last Updated: 07th March 2023 03:03 PM | A+A A-

ರಾಬ್ರಿ ದೇವಿ ನಿವಾಸಕ್ಕೆ ಆಗಮಿಸುತ್ತಿರುವ ಪುತ್ರ ತೇಜ್ ಪ್ರತಾಪ್
ಪಾಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ಪಾಟ್ನಾ ನಿವಾಸದಲ್ಲಿ ಕೇಂದ್ರೀಯ ತನಿಖಾ ದಳ (CBI) ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ಅವರ ಪತಿ ಆರ್‌ಜೆಡಿ ಮುಖ್ಯಸ್ಥ ಮತ್ತು ಕೇಂದ್ರದ ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರಿಗೆ ಉದ್ಯೋಗಕ್ಕಾಗಿ ಭೂಹಗರಣ ಸಂಬಂಧ ನೋಟಿಸ್ ಜಾರಿ ಮಾಡಿದೆ.
ಈ ಪ್ರಕರಣದಲ್ಲಿ ಸಿಬಿಐ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಸಿದೆ. ದೆಹಲಿಯ ವಿಶೇಷ ನ್ಯಾಯಾಲಯವು ಆರೋಪಿಗಳಾದ ಲಾಲು ಪ್ರಸಾದ್, ರಾಬ್ರಿ ದೇವಿ, ಅವರ ಪುತ್ರಿ ಮಿಸಾ ಭಾರತಿ ಮತ್ತು ಇತರರಿಗೆ ಮಾರ್ಚ್ 15 ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ. ಲಾಲು ಪ್ರಸಾದ್ ಅವರನ್ನು ಇಂದು ದೆಹಲಿಯಲ್ಲಿರುವ ಅವರ ಪುತ್ರಿ ಮಿಸಾ ಭಾರ್ತಿ ಅವರ ನಿವಾಸದ ಆವರಣದಲ್ಲಿ ಏಜೆನ್ಸಿ ವಿಚಾರಣೆ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಅಧಿಕಾರಿಯೊಬ್ಬರು, ಸಿಬಿಐ ರಾಬ್ರಿ ದೇವಿ ಅವರನ್ನು ಕೆಲವು ದಿನಗಳ ಹಿಂದೆ ವಿಚಾರಣೆಗಾಗಿ ಕರೆಸಿದೆ. ಅವರ ನಿವಾಸದಲ್ಲಿ ವಿಚಾರಣೆಗೆ ನಿನ್ನೆ ದಿನಾಂಕವನ್ನು ನಿಗದಿಪಡಿಸಿದೆ. ಪುತ್ರಿಯಿಂದ ಮಾಹಿತಿ ಸಂಗ್ರಹಿಸಲು ಮಾತ್ರ ಭೇಟಿ ನೀಡಲಾಗಿದ್ದು, ಇದು ಹುಡುಕಾಟ ಅಥವಾ ದಾಳಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಉದ್ಯೋಗಕ್ಕಾಗಿ ಭೂ ಹಗರಣ: ಬಿಹಾರ ಮಾಜಿ ಸಿಎಂ ರಾಬ್ರಿ ದೇವಿ ನಿವಾಸದ ಮೇಲೆ ಸಿಬಿಐ ದಾಳಿ
12 ಸದಸ್ಯರನ್ನೊಳಗೊಂಡ ಸಿಬಿಐ ತಂಡವು ನಾಲ್ಕು ಕಾರುಗಳಲ್ಲಿ ನಿನ್ನೆ ಬೆಳಗ್ಗೆ 10 ಗಂಟೆ ಸುಮಾರಿಗೆ ರಾಬ್ರಿ ದೇವಿ ಅವರ ನಿವಾಸಕ್ಕೆ ತಲುಪಿ ಮಧ್ಯಾಹ್ನ 2 ರವರೆಗೆ ಅಲ್ಲಿಯೇ ಇತ್ತು. ಅವರ ಪುತ್ರ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಮನೆಗೆ ತಲುಪಿದಾಗ ಅವರ ನಿವಾಸದಲ್ಲಿ ಇರಲಿಲ್ಲ. ಆದರೆ, ನಿತೀಶ್ ಕುಮಾರ್ ಸಂಪುಟದಲ್ಲಿ ಸಚಿವರಾಗಿರುವ ಅವರ ಹಿರಿಯ ಸಹೋದರ ತೇಜ್ ಪ್ರತಾಪ್ ಯಾದವ್ ಅವರು ರಾಬ್ರಿ ದೇವಿ ಅವರೊಂದಿಗೆ ಹಾಜರಿದ್ದರು.
ಕೇಂದ್ರೀಯ ಸಂಸ್ಥೆಗಳ ದುರುಪಯೋಗದ ವಿರುದ್ಧ ತೇಜಸ್ವಿ ಯಾದವ್ ಅವರು ಇತರ ಎಂಟು ಪ್ರತಿಪಕ್ಷ ನಾಯಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ಒಂದು ದಿನದ ನಂತರ ರಾಬ್ರಿ ದೇವಿ ಅವರನ್ನು ಸಿಬಿಐ ಅಧಿಕಾರಿಗಳು ಪ್ರಶ್ನಿಸಿದ್ದಾರೆ.
ಮೂಲಗಳ ಪ್ರಕಾರ, 2004 ರಿಂದ 2009 ರವರೆಗೆ ಲಾಲು ಪ್ರಸಾದ್ ಕೇಂದ್ರ ರೈಲ್ವೇ ಸಚಿವರಾಗಿದ್ದಾಗ ರೈಲ್ವೇ ಸಚಿವಾಲಯದಲ್ಲಿ ನೇಮಕಾತಿಗಳ ಬಗ್ಗೆ ಸಿಬಿಐ ಅಧಿಕಾರಿಗಳು ರಾಬ್ರಿ ದೇವಿ ಅವರನ್ನು ಪ್ರಶ್ನಿಸಿದ್ದಾರೆ. ಹಲವಾರು ವ್ಯಕ್ತಿಗಳು ತಮ್ಮ ಜಮೀನುಗಳನ್ನು ಲಾಲೂ ಕುಟುಂಬಕ್ಕೆ ಉಡುಗೊರೆಯಾಗಿ ಅಥವಾ ಮಾರಾಟ ಮಾಡಿದ ನಂತರ ರೈಲ್ವೆಯಲ್ಲಿ ಗ್ರೂಪ್ ಡಿ ಉದ್ಯೋಗವನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.