ಅಮೃತಪಾಲ್ ಸಿಂಗ್ ಬಂಧನಕ್ಕೆ ಕೇಂದ್ರ ಸರ್ಕಾರ ನೆರವು; ಪಂಜಾಬ್ ಗೆ ಭದ್ರತಾ ಪಡೆಗಳ ನಿಯೋಜನೆ
ಪಲಾಯನ ಗೈದಿರುವ ಸಿಖ್ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತ್‌ಪಾಲ್ ಸಿಂಗ್ ಬಂಧನಕ್ಕೆ ಕೇಂದ್ರ ಸರ್ಕಾರ ಭದ್ರತಾ ನೆರವು ನೀಡಿದ್ದು, 1,900 ಸಿಆರ್‌ಪಿಎಫ್ ಸಿಬ್ಬಂದಿ ಹಾಗೂ ಗಲಭೆ ತಡೆಯುವಲ್ಲಿ ವಿಶೇಷ ತರಬೇತಿ ಪಡೆದಿರುವ ಆರ್‌ಎಎಫ್ ತಂಡವನ್ನು ಪಂಜಾಬ್‌ಗೆ ಕೇಂದ್ರ ಸರ್ಕಾರ ರವಾನಿಸಿದೆ.
Published: 19th March 2023 02:09 AM | Last Updated: 19th March 2023 02:09 AM | A+A A-

ಅಮಿತ್ ಶಾ ಮತ್ತು ಭಗವಂತ್ ಮಾನ್
ನವದೆಹಲಿ: ಪಲಾಯನ ಗೈದಿರುವ ಸಿಖ್ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತ್‌ಪಾಲ್ ಸಿಂಗ್ ಬಂಧನಕ್ಕೆ ಕೇಂದ್ರ ಸರ್ಕಾರ ಭದ್ರತಾ ನೆರವು ನೀಡಿದ್ದು, 1,900 ಸಿಆರ್‌ಪಿಎಫ್ ಸಿಬ್ಬಂದಿ ಹಾಗೂ ಗಲಭೆ ತಡೆಯುವಲ್ಲಿ ವಿಶೇಷ ತರಬೇತಿ ಪಡೆದಿರುವ ಆರ್‌ಎಎಫ್ ತಂಡವನ್ನು ಪಂಜಾಬ್‌ಗೆ ಕೇಂದ್ರ ಸರ್ಕಾರ ರವಾನಿಸಿದೆ.
ಪಂಜಾಬ್‌ನಲ್ಲಿ ಖಲಿಸ್ತಾನ್ ಬೆಂಬಲಿಗರ ಚಟುವಟಿಕೆಗಳನ್ನು ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ರಾಜ್ಯದ ಕಾನೂನು ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಚರ್ಚಿಸಿದ್ದರು. ರಾಜ್ಯದ ಕಾನೂನು ಸುವ್ಯವಸ್ಥೆಗೆ ಬಲ ತುಂಬಲು 18 ಕೇಂದ್ರೀಯ ತುಕಡಿಗಳನ್ನು ಪಂಜಾಬ್‌ಗೆ ರವಾನಿಸುವಂತೆ ಕಳೆದ ವಾರ ಕೇಂದ್ರ ಸರ್ಕಾರ ಆದೇಶಿಸಿತ್ತು. ಅಲ್ಲದೆ 1,900 ಸಿಆರ್‌ಪಿಎಫ್ ಸಿಬ್ಬಂದಿ ಹಾಗೂ ಗಲಭೆ ತಡೆಯುವಲ್ಲಿ ವಿಶೇಷ ತರಬೇತಿ ಪಡೆದಿರುವ ಆರ್‌ಎಎಫ್ ತಂಡವನ್ನು ಪಂಜಾಬ್‌ಗೆ ಕೇಂದ್ರ ಸರ್ಕಾರ ರವಾನಿಸಿದೆ.
ಮೂಲಗಳ ಪ್ರಕಾರ, ಕೇಂದ್ರ ಸರ್ಕಾರ ಮತ್ತು ಎಎಪಿ ನೇತೃತ್ವದ ಪಂಜಾಬ್ ಸರ್ಕಾರದ ನಡುವೆ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಸಹ, ದೇಶದ ಭದ್ರತೆ ಮತ್ತು ಬೆಳವಣಿಗೆಗೆ ಅಪಾಯವನ್ನುಂಟುಮಾಡುವ ಖಲಿಸ್ತಾನ್ ಪರ ಭಾವನೆಗಳು ತೇಲಬಾರದು ಎಂಬ ಒಮ್ಮತವಿದೆ. ಇದೇ ವಿಚಾರವಾಗಿ ಈ ಹಿಂದಿನ ಭೇಟಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ 'ಭವಿಷ್ಯದಲ್ಲಿ ಇದನ್ನು ಸಹಿಸಬೇಡಿ' ಎಂದು ಸಭೆಯಲ್ಲಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಭೇಟಿ ಬೆನ್ನಲ್ಲೇ ಪಂಜಾಬ್ ನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಎಂಟು ಕ್ಷಿಪ್ರ ಕಾರ್ಯಾಚರಣೆ ಪಡೆ ಸೇರಿದಂತೆ ಸುಮಾರು 35 ಕಂಪನಿಗಳನ್ನು ಪಂಜಾಬ್‌ಗೆ ಕಳುಹಿಸಲಾಯಿತು.
ಇದನ್ನೂ ಓದಿ: ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಬಂಧನ; ಪಂಜಾಬ್‌ನಲ್ಲಿ ಇಂಟರ್ನೆಟ್ ಸೇವೆಗಳು ಸ್ಥಗಿತ
ಪೊಲೀಸ್ ಬಂಧನ ಭೀತಿ: ಕಾರಿನಲ್ಲಿ ಸಿಂಗ್ ಪಲಾಯನ
ಪೊಲೀಸರು ತಮ್ಮ ಬೆನ್ನು ಹತ್ತಿದ್ದಾರೆ ಎಂದು ಸಿಂಗ್ ಅವರ ಬೆಂಬಲಿಗರು ಹೇಳುತ್ತಿರುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ವಾಹನವೊಂದರಲ್ಲಿ ಸಿಂಗ್ ಹಾಗೂ ಅವರ ಬೆಂಬಲಿಗರು ಕುಳಿತು ಪ್ರಯಾಣಿಸುತ್ತಿದ್ದಾರೆ ಎನ್ನಲಾದ ವಿಡಿಯೊವನ್ನು ಅವರ ಬೆಂಬಲಿಗರು ಹಂಚಿಕೊಂಡಿದ್ದಾರೆ. ಪೊಲೀಸರು ಬೆನ್ನು ಹತ್ತಿರುವ ವಿಚಾರವನ್ನು ಬೆಂಬಲಿಗರೊಬ್ಬರು ಹೇಳುತ್ತಿರುವುದು ವಿಡಿಯೊದಲ್ಲಿ ಕೇಳಿಸುತ್ತದೆ.
ಅಮೃತ್‌ಪಾಲ್ ವಿರುದ್ಧ ಹಲವು ಪ್ರಕರಣ
ಅಮೃತ್‌ಪಾಲ್ ಹಾಗೂ ಸಹಚರರ ವಿರುದ್ಧ ಪಂಜಾಬ್‌ನಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ಅಜನಾಲದಲ್ಲಿ ಪೊಲೀಸರು ಕಳೆದ ವಾರ ಪ್ರಕರಣ ದಾಖಲಿಸಿಕೊಂಡಿದ್ದರು. ಅಮೃತ್‌ಪಾಲ್ ಹಾಗೂ ಬೆಂಬಲಿಗರು ತನ್ನನ್ನು ಅಪಹರಿಸಿ, ಥಳಿಸಿದ್ದಾರೆ ಎಂದು ಆರೋಪಿಸಿದ್ದ ವ್ಯಕ್ತಿಯೊಬ್ಬರು ಅಜನಾಲ ಪೊಲೀಸ್ ಠಾಣೆಗೆ ಕಳೆದ ತಿಂಗಳು ದೂರು ನೀಡಿದ್ದರು. ಈ ದೂರಿನನ್ವಯ, ಅಮೃತ್‌ಪಾಲ್ ಹಾಗೂ ಆರು ಸಹಚರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ವಿಚಾರವಾಗಿ ಲವ್‌ಪ್ರೀತ್ ಸಿಂಗ್ ತೂಫಾನ್ ಎಂಬ ಬೆಂಬಲಿಗನನ್ನು ಬಂಧಿಸಿದ್ದರು.
ಇದನ್ನೂ ಓದಿ: ಪಂಜಾಬ್ ನಲ್ಲಿ ಗನ್ ಸಂಸ್ಕೃತಿ ನಿಗ್ರಹ ಕಾರ್ಯಾಚರಣೆ ಮುಂದುವರಿಕೆ; 813 ಶಸ್ತ್ರಾಸ್ತ್ರ ಪರವಾನಗಿ ರದ್ದು
ಇದರಿಂದ ಕೆರಳಿದ್ದ ಸಿಂಗ್ ಹಾಗೂ ಬೆಂಬಲಿಗರು ತಮ್ಮ ವಿರುದ್ಧದ ಪ್ರಕರಣ ವಾಪಸ್ ಪಡೆಯುವಂತೆ ಪೊಲೀಸರಿಗೆ ಬೆದರಿಕೆ ಹಾಕಿದ್ದರು. ನೂರಾರು ಬೆಂಬಲಿಗರು ಬ್ಯಾರಿಕೇಡ್ ಮುರಿದು, ಚೂಪಾದ ಆಯುಧಗಳು ಹಾಗೂ ಸ್ವಯಂಚಾಲಿತ ಬಂದೂಕುಗಳೊಂದಿಗೆ ಅಜನಾಲ ಪೊಲೀಸ್ ಠಾಣೆಗೆ ನುಗ್ಗಿದ್ದರು. ಈ ಘಟನೆಯಲ್ಲಿ ಆರು ಪೊಲೀಸರು ಗಾಯಗೊಂಡಿದ್ದರು.