ಕೆಲವು ನಿವೃತ್ತ ನ್ಯಾಯಾಧೀಶರು ಭಾರತ ವಿರೋಧಿ ಗ್ಯಾಂಗ್‌ನ ಭಾಗವಾಗಿದ್ದಾರೆ: ಕಿರಣ್ ರಿಜಿಜು

'ಭಾರತ ವಿರೋಧಿ ಗ್ಯಾಂಗ್'ನ ಭಾಗವಾಗಿರುವ ಕೆಲವು ನಿವೃತ್ತ ನ್ಯಾಯಾಧೀಶರು ಮತ್ತು ಕಾರ್ಯಕರ್ತರು ವಿರೋಧ ಪಕ್ಷಗಳ ರೀತಿಯಲ್ಲಿ ಸರ್ಕಾರದ ವಿರುದ್ಧ ನ್ಯಾಯಾಂಗವನ್ನು ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಶನಿವಾರ ಹೇಳಿದ್ದಾರೆ.
ಕಿರಣ್ ರಿಜಿಜು
ಕಿರಣ್ ರಿಜಿಜು

ನವದೆಹಲಿ: 'ಭಾರತ ವಿರೋಧಿ ಗ್ಯಾಂಗ್'ನ ಭಾಗವಾಗಿರುವ ಕೆಲವು ನಿವೃತ್ತ ನ್ಯಾಯಾಧೀಶರು ಮತ್ತು ಕಾರ್ಯಕರ್ತರು ವಿರೋಧ ಪಕ್ಷಗಳ ರೀತಿಯಲ್ಲಿ ಸರ್ಕಾರದ ವಿರುದ್ಧ ನ್ಯಾಯಾಂಗವನ್ನು ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಶನಿವಾರ ಹೇಳಿದ್ದಾರೆ.

ಇಂಡಿಯಾ ಟುಡೇ ಕಾನ್‌ಕ್ಲೇವ್‌ನಲ್ಲಿ ಮಾತನಾಡಿದ ರಿಜಿಜು, 'ಇತ್ತೀಚೆಗೆ ನ್ಯಾಯಾಧೀಶರ ಹೊಣೆಗಾರಿಕೆಯ ಕುರಿತು ಸೆಮಿನಾರ್ ಇತ್ತು. ಹೇಗೋ, ಇಡೀ ಸೆಮಿನಾರ್ ನ್ಯಾಯಾಂಗದ ಮೇಲೆ ಕಾರ್ಯಾಂಗವು ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಚರ್ಚೆಯಾಗಿ ಮಾರ್ಪಟ್ಟಿತು. ಕೆಲವು ನಿವೃತ್ತ ನ್ಯಾಯಾಧೀಶರು- ಬಹುಶಃ ಮೂರು ಮತ್ತು ಭಾರತ ವಿರೋಧಿ ಗ್ಯಾಂಗ್‌ನ ಭಾಗವಾಗಿರುವ ಕೆಲವು ಕಾರ್ಯಕರ್ತರು ಭಾರತೀಯ ನ್ಯಾಯಾಂಗವನ್ನು ವಿರೋಧ ಪಕ್ಷದ ಪಾತ್ರವನ್ನು ವಹಿಸುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕೆಲವರು ಸುಪ್ರೀಂ ಕೋರ್ಟ್‌ಗೆ ಹೋಗಿ ದಯವಿಟ್ಟು ಸರ್ಕಾರದಲ್ಲಿ ಹಿಡಿತ ಸಾಧಿಸಿ ಎಂದು ಹೇಳುತ್ತಾರೆ' ಎಂದು ಆರೋಪಿಸಿದರು.

'ಇದು ಆಗಲಾರದು. ನ್ಯಾಯಾಂಗವು ತಟಸ್ಥವಾಗಿದೆ ಮತ್ತು ನ್ಯಾಯಾಧೀಶರು ಯಾವುದೇ ಗುಂಪುಗಳು ಅಥವಾ ರಾಜಕೀಯ ಸಂಬಂಧಗಳ ಭಾಗವಾಗಿರುವುದಿಲ್ಲ. ಈ ಜನರು ಭಾರತೀಯ ನ್ಯಾಯಾಂಗವು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕು ಎಂದು ಹೇಗೆ ಬಹಿರಂಗವಾಗಿ ಹೇಳಬಹುದು? ಎಂದಿದ್ದಾರೆ.

ರಾಹುಲ್ ಗಾಂಧಿಯನ್ನು ಗುರಿಯಾಗಿಸಿದ ರಿಜಿಜು, 'ದೇಶದ ಒಳಗೆ ಮತ್ತು ಹೊರಗೆ ಭಾರತ ವಿರೋಧಿ ಶಕ್ತಿಗಳು ಒಂದೇ ಭಾಷೆಯನ್ನು ಬಳಸುತ್ತವೆ. ಅದುವೇ, 'ಪ್ರಜಾಪ್ರಭುತ್ವ ಅಪಾಯದಲ್ಲಿದೆ ಮತ್ತು ಮಾನವ ಹಕ್ಕುಗಳು ಅಸ್ತಿತ್ವದಲ್ಲಿಲ್ಲ' ಎಂಬುದು ಎಂದು ಹೇಳಿದರು.
ಈ ಭಾರತ ವಿರೋಧಿ ಗ್ಯಾಂಗ್‌ನ ಭಾಷೆಯೇ ರಾಹುಲ್ ಗಾಂಧಿ ಬಳಸುತ್ತಿರುವ ಭಾಷೆಯಾಗಿದೆ. ಈ 'ತುಕ್ಡೆ-ತುಕ್ಡೆ ಗ್ಯಾಂಗ್' ನಮ್ಮ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ನಾಶಮಾಡಲು ನಾವು ಬಿಡುವುದಿಲ್ಲ ಎಂದು ರಿಜಿಜು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com