ಚಂಡೀಗಢ: ತೀವ್ರಗಾಮಿ ಬೋಧಕ ಮತ್ತು ಖಲಿಸ್ತಾನದ ಪರ ಸಹಾನುಭೂತಿ ಹೊಂದಿರುವ ಅಮೃತಪಾಲ್ ಸಿಂಗ್ ಬಂಧನಕ್ಕೆ ಪೊಲೀಸರು ನಿರಂತರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮಂಗಳವಾರ, ರಾಜ್ಯದ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಲು ಪ್ರಯತ್ನಿಸುವವರ ವಿರುದ್ಧ ತಮ್ಮ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಅಮೃತಪಾಲ್ ಸಿಂಗ್ ಮತ್ತು ಆತನ 'ವಾರಿಸ್ ಪಂಜಾಬ್ ದೇ' ಸಂಘಟನೆಯ ಸದಸ್ಯರ ವಿರುದ್ಧ ಪೊಲೀಸರು ಶನಿವಾರ ದೊಡ್ಡ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಅಮೃತಪಾಲ್ ನೇತೃತ್ವದ ಸಂಘಟನೆಯ 78 ಸದಸ್ಯರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದಾಗ್ಯೂ, ಜಲಂಧರ್ ಜಿಲ್ಲೆಯ ಮೆಹತ್‌ಪುರ ಗ್ರಾಮದಲ್ಲಿ ಅಮೃತ್ ಪಾಲ್ ಹಾಗೂ ಅವರ ಬೆಂಬಲಿಗರು ಇರುವ ವಾಹನವನ್ನು ಪೊಲೀಸರು ಬೆನ್ನತ್ತಿದ್ದರು. ಪೊಲೀಸರ ಕೈಗೆ ಇನ್ನೇನು ಸಿಕ್ಕೇಬಿಟ್ಟರು ಎನ್ನುವಷ್ಟರಲ್ಲಿ ತಪ್ಪಿಸಿಕೊಂಡನು ಎಂದು ತಿಳಿಸಿದ್ದಾರೆ.
ಪೋಲೀಸರ ಈ ಕ್ರಮಕ್ಕೆ ಮೊದಲ ಪ್ರತಿಕ್ರಿಯೆ ನೀಡಿರುವ ಮಾನ್, ಅವರು ತಮ್ಮ ಸರ್ಕಾರವನ್ನು ಹೊಗಳಿ ಜನರು ಹಲವಾರು ಕರೆಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
'ನೀವು ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ಜನರು ಹೇಳುತ್ತಿದ್ದಾರೆ. ಪಂಜಾಬ್‌ನಲ್ಲಿ ಶಾಂತಿ ಮತ್ತು ಸೌಹಾರ್ದತೆ ಇರಬೇಕು. ಈ ವಿಷಯದಲ್ಲಿ ನಾವು ನಿಮಗೆ ಬೆಂಬಲ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಪಂಜಾಬ್‌ನ ಶಾಂತಿ, ಸೌಹಾರ್ದತೆ ಮತ್ತು ದೇಶದ ಪ್ರಗತಿಯು ತನ್ನ ಪ್ರಮುಖ ಆದ್ಯತೆಗಳಾಗಿವೆ. ದೇಶದ ವಿರುದ್ಧ ಕೆಲಸ ಮಾಡುವ ಯಾವುದೇ ಶಕ್ತಿಯನ್ನೂ ನಾವು ಬಿಡುವುದಿಲ್ಲ. ಚುನಾವಣೆಯಲ್ಲಿ ಜನರು ಎಎಪಿಗೆ ಭಾರಿ ಜನಾದೇಶ ನೀಡುವ ಮೂಲಕ ಜವಾಬ್ದಾರಿ ನೀಡಿದ್ದಾರೆ' ಎಂದು ಮಾನ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
'ಈ ಕಾರ್ಯಾಚರಣೆಯಲ್ಲಿ (ಸಿಂಗ್ ಮತ್ತು 'ವಾರಿಸ್ ಪಂಜಾಬ್ ದೇ' ವಿರುದ್ಧ) ಸಹಕರಿಸಿದ್ದಕ್ಕಾಗಿ ನಾನು 3 ಕೋಟಿ ಪಂಜಾಬಿಗಳಿಗೆ ಧನ್ಯವಾದ ಹೇಳುತ್ತೇನೆ. ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ. ಜನರು ಶಾಂತಿ ಮತ್ತು ಪ್ರಗತಿಯನ್ನು ಬಯಸುತ್ತಾರೆ ಎಂಬುದು ನನ್ನ ವಿಶ್ವಾಸವನ್ನು ಇದು ಹೆಚ್ಚಿಸಿದೆ' ಎಂದು ಮಾನ್ ಹೇಳಿದರು.
'ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿ ಪಾರ್ಟಿ ಎಎಪಿ '100 ಪ್ರತಿಶತ ಜಾತ್ಯತೀತ ಪಕ್ಷ'. ನಾವು ಎಂದಿಗೂ ಧರ್ಮ, ಜಾತಿ ಮತ್ತು ದ್ವೇಷದ ಹೆಸರಿನಲ್ಲಿ ರಾಜಕೀಯ ಮಾಡುವುದಿಲ್ಲ' ಎಂದು ಅವರು ಹೇಳಿದರು.
Advertisement