
ನಟ ಸಲ್ಮಾನ್ ಖಾನ್ ಗೆ ಜೀವಬೆದರಿಕೆ ಇ-ಮೇಲ್
ಮುಂಬೈ: ನಟ ಸಲ್ಮಾನ್ ಖಾನ್ ಗೆ ಜೀವಬೆದರಿಕೆ ಇ-ಮೇಲ್ ಕಳುಹಿಸಿದ ಆರೋಪದ ಮೇರೆಗೆ ಶಂಕಿತ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಬೈ ಪೊಲೀಸರು ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ. ರಾಜಸ್ಥಾನದ ನಿವಾಸಿಯಾಗಿರುವ ಶಂಕಿತ ವ್ಯಕ್ತಿಯನ್ನು ಬಾಂದ್ರಾ ಪೊಲೀಸ್ ಠಾಣೆಯ ತಂಡ ಬಂಧಿಸಿದ್ದು, ಮುಂಬೈಗೆ ಕರೆತರಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಮುಂಬೈ: ಇಮೇಲ್ ಮೂಲಕ ಬೆದರಿಕೆ, ನಟ ಸಲ್ಮಾನ್ ಖಾನ್ ನಿವಾಸದ ಹೊರಗೆ ಬಿಗಿ ಭದ್ರತೆ
ಬೆದರಿಕೆ ಇ-ಮೇಲ್ ಕುರಿತು ಇತ್ತೀಚೆಗೆ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಶಾಂತ್ ಗುಂಜಾಲ್ಕರ್ ಎಂಬವರು ದೂರು ದಾಖಲಿಸಿದ್ದರು. ಪೊಲೀಸರ ಪ್ರಕಾರ, ದೂರುದಾರರು ಸಲ್ಮಾನ್ ಖಾನ್ ಅವರ ಬಾಂದ್ರಾ ಮೂಲದ ನಿವಾಸಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದು, ಕಲಾವಿದ ನಿರ್ವಹಣಾ ಕಂಪನಿಯನ್ನು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿರುವ ಸಲ್ಮಾನ್ ಖಾನ್ ಅವರ ಕಚೇರಿಯಲ್ಲಿ ಗುಂಜಾಲ್ಕರ್ ಅವರು ಇದ್ದಾಗ, "ರೋಹಿತ್ ಗಾರ್ಗ್" ಐಡಿಯಿಂದ ಬೆದರಿಕೆ ಇಮೇಲ್ ಬಂದಿತ್ತು. ಹಿಂದಿಯಲ್ಲಿ ಬರೆದ ಇ-ಮೇಲ್ ನಲ್ಲಿ, "ಗೋಲ್ಡಿ ಭಾಯ್ (ದರೋಡೆಕೋರ ಗೋಲ್ಡಿ ಬ್ರಾರ್) ವಿಷಯವನ್ನು ಮುಚ್ಚಲು ಸಲ್ಮಾನ್ ಖಾನ್ ಅವರೊಂದಿಗೆ ಮುಖಾಮುಖಿ ಮಾತನಾಡಲು ಬಯಸಿದ್ದರು", "ಅಗ್ಲಿ ಬಾರ್, ಜಟ್ಕಾ ದೇಖ್ನೆ ಕೋ ಮಿಲೇಗಾ (ನೀವು ಶೀಘ್ರದಲ್ಲೇ ಆಘಾತಕಾರಿ ಸಂಗತಿ ನೋಡುತ್ತೀರಿ)" ಬರೆಯಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಮಂಗಳೂರು: ಪೂಜಾ ಹೆಗ್ಡೆ ಸಹೋದರ ರಿಷಬ್ ಮದುವೆಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್
"ಪ್ರಕರಣದ ವಿವರವಾದ ತಾಂತ್ರಿಕ ತನಿಖೆಯ ನಂತರ, ಆರೋಪಿಯ ಸ್ಥಳದ ಬಗ್ಗೆ ಪೊಲೀಸರು ಮಾಹಿತಿ ಪಡೆದರು. ನಂತರ ತಂಡವನ್ನು ರಾಜಸ್ಥಾನಕ್ಕೆ ಕಳುಹಿಸಲಾಗಿತ್ತು. ಇದೀಗ ಕಾರ್ಯಾಚರಣೆ ನಡೆಸಿದ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಗಾಯಕ ಸಿಧು ಮೂಸೆವಾಲಾ ಹತ್ಯೆಗೂ ಮುನ್ನ ಸಲ್ಮಾನ್ ಖಾನ್ ಹತ್ಯೆ ಮಾಡಲು ಲಾರೆನ್ಸ್ ಬಿಷ್ಣೋಯಿ ಹಂತಕರು ಸಂಚು ರೂಪಿಸಿದ್ದರು ಎನ್ನಲಾಗಿತ್ತು. ಲಾರೆನ್ಸ್ ಬಿಷ್ಣೋಯಿ ಸದ್ಯಕ್ಕೆ ತಿಹಾರ್ ಜೈಲಿನಲ್ಲಿದ್ದು ಸಲ್ಮಾನ್ ಖಾನ್ ಕೊಲ್ಲುವುದೇ ನನ್ನ ಜೀವನದ ಅಂತಿಮ ಗುರಿ ಎಂದು ವಿಚಾರಣೆ ವೇಳೆ ಹೇಳಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ನನಗೆ ಮಕ್ಕಳು ಬೇಕು, ಆದರೆ ತಾಯಿ ಬೇಡ - ಮಕ್ಕಳನ್ನು ನೋಡಿಕೊಳ್ಳಲು ನನ್ನ ಜೊತೆ ಇಡೀ ಹಳ್ಳಿಯಿದೆ: ಸಲ್ಮಾನ್ ಖಾನ್
ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರ ವರೆಗೂ ಸಲ್ಮಾನ್ ಅವರನ್ನು ಹತ್ಯೆ ಮಾಡಲು ಪ್ಲಾನ್ ನಡೆದಿತ್ತಂತೆ. ಆದರೆ ಹೆಚ್ಚಿನ ಭದ್ರತೆಯಿಂದ ಅದು ಸಾಧ್ಯವಾಗಲಿಲ್ಲ ಎಂದು ಲಾರೆನ್ಸ್ ಬಿಷ್ಣೋಯಿ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ಬಿಷ್ಣೋಯಿ ಸಮುದಾಯ ದೇವರಂತೆ ಆರಾಧಿಸುವ ಕೃಷ್ಣಮೃಗವನ್ನು ಕೊಂದು ಸಲ್ಮಾನ್ ಖಾನ್ ತಪ್ಪು ಮಾಡಿದ್ದಾರೆ. ಬಿಕಾನೇರ್ ದೇವಸ್ಥಾನಕ್ಕೆ ಹೋಗಿ ಆತ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಕೂಡಾ ಲಾರೆನ್ಸ್ ಬಿಷ್ಣೋಯಿ ಬೇಡಿಕೆ ಇಟ್ಟಿದ್ದ. ಇದರ ಬೆನ್ನಲ್ಲೇ ಮತ್ತೆ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಬಂದ ಹಿನ್ನೆಲೆ ಮತ್ತಷ್ಟು ಭದ್ರತೆ ಹೆಚ್ಚಿಸಲಾಗಿದೆ.