ರಾಷ್ಟ್ರಗೀತೆಗೆ ಅಗೌರವ: ದೂರು ರದ್ದುಗೊಳಿಸುವಂತೆ ಮಮತಾ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿ ಬಾಂಬೆ ಹೈಕೋರ್ಟ್ ನಲ್ಲಿ ವಜಾ

2022ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ ಆರೋಪಕ್ಕೆ ಸಂಬಂಧಿಸಿದಂತೆ ದೂರನ್ನು ರದ್ದುಗೊಳಿಸಬೇಕು ಎಂದು ಕೋರಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಮಧ್ಯೆ ಪ್ರವೇಶಿಸಲು ಬಾಂಬೆ ಹೈಕೋರ್ಟ್ ಬುಧವಾರ ನಿರಾಕರಿಸಿದೆ.
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ

ಮುಂಬೈ: 2022ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ ಆರೋಪಕ್ಕೆ ಸಂಬಂಧಿಸಿದಂತೆ ದೂರನ್ನು ರದ್ದುಗೊಳಿಸಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಮಧ್ಯೆ ಪ್ರವೇಶಿಸಲು ಬಾಂಬೆ ಹೈಕೋರ್ಟ್ ಬುಧವಾರ ನಿರಾಕರಿಸಿದೆ.

ನ್ಯಾಯಮೂರ್ತಿ ಅಮಿತ್ ಬೋರ್ಕರ್ ಅವರ ಏಕ ಸದಸ್ಯ ಪೀಠವು, ಹೊಸದಾಗಿ ಪ್ರಕರಣದ ತನಿಖೆಗಾಗಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸೂಚಿಸುವ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಬ್ಯಾನರ್ಜಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿತು.

ಬ್ಯಾನರ್ಜಿ ಅವರು ತಮ್ಮ ಅರ್ಜಿಯಲ್ಲಿ, ಸೆಷನ್ಸ್ ನ್ಯಾಯಾಲಯವು ಸಮನ್ಸ್ ಅನ್ನು ರದ್ದುಗೊಳಿಸುವ ಮತ್ತು ಪ್ರಕರಣವನ್ನು ರವಾನಿಸುವ ಬದಲು ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ದೂರನ್ನು ರದ್ದುಗೊಳಿಸಬೇಕು ಎಂದು ಹೇಳಿದರು.

ನ್ಯಾಯಮೂರ್ತಿ ಬೋರ್ಕರ್, ಸೆಷನ್ಸ್ ನ್ಯಾಯಾಲಯದ ಆದೇಶದಲ್ಲಿ ಕಾನೂನಿಗೆ ವಿರುದ್ಧವಾದ ಕ್ರಮವಿದೆ. ಆದ್ದರಿಂದ, ಹೈಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಹೇಳಿದರು.

ಮುಂಬೈನ ಕಫ್ ಪರೇಡ್‌ನಲ್ಲಿರುವ ಯಶವಂತರಾವ್ ಚವಾಣ್ ಸಭಾಂಗಣದಲ್ಲಿನ ಸಾರ್ವಜನಿಕ ಸಮಾರಂಭದಲ್ಲಿ ಮಮತಾ ಬ್ಯಾನರ್ಜಿ ಅವರು ಕುಳಿತೇ ರಾಷ್ಟ್ರಗೀತೆ ಹಾಡಲು ಪ್ರಾರಂಭಿಸಿದರು ಮತ್ತು ನಂತರ ಎದ್ದು ನಿಂತರು. ಅಲ್ಲದೆ, ಎರಡು ಸಾಲುಗಳನ್ನು ಹಾಡಿ, ಮಧ್ಯೆಯೇ ಅಲ್ಲಿಂದ ನಿರ್ಗಮಿಸಿದರು ಎಂದು ಆರೋಪಿಸಿ ವಿವೇಕಾನಂದ ಗುಪ್ತಾ ಎಂಬುವವರು ಸಲ್ಲಿಸಿದ್ದ ದೂರಿನ ಮೇರೆಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 2022ರ ಮಾರ್ಚ್‌ನಲ್ಲಿ ಬ್ಯಾನರ್ಜಿಗೆ ಸಮನ್ಸ್ ಜಾರಿ ಮಾಡಿತು. 

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ವಿಶೇಷ ನ್ಯಾಯಾಲಯದ ಮುಂದೆ ಸಮನ್ಸ್ ಅನ್ನು ಪ್ರಶ್ನಿಸಿದ್ದರು.

ಜನವರಿಯಲ್ಲಿ, ವಿಶೇಷ ನ್ಯಾಯಾಧೀಶ ಆರ್.ಎನ್. ರೋಕಡೆ ಅವರು, ಕಾರ್ಯವಿಧಾನದ ಆಧಾರದ ಮೇಲೆ ಮ್ಯಾಜಿಸ್ಟ್ರೇಟ್ ನೀಡಿದ್ದ ಸಮನ್ಸ್ ಅನ್ನು ರದ್ದುಗೊಳಿಸಿದರು ಮತ್ತು ದೂರನ್ನು ಹೊಸದಾಗಿ ಪರಿಗಣಿಸಲು ಮ್ಯಾಜಿಸ್ಟ್ರೇಟ್‌ಗೆ ತಿಳಿಸಿದರು.

ಬಳಿಕ ಹೈಕೋರ್ಟ್‌ ಮೊರೆ ಹೋದ ಬ್ಯಾನರ್ಜಿ, ಈ ಆದೇಶವನ್ನು ಪ್ರಶ್ನಿಸಿ ಸಮನ್ಸ್ ಅನ್ನು ಹೊಸದಾಗಿ ಪರಿಗಣಿಸಲು ಮ್ಯಾಜಿಸ್ಟ್ರೇಟ್‌ಗೆ ನಿರ್ದೇಶಿಸುವ ಬದಲು ಸಂಪೂರ್ಣ ಅದನ್ನು ರದ್ದುಗೊಳಿಸಬೇಕು ಎಂದು ಪ್ರತಿಪಾದಿಸಿದರು.

ಗುಪ್ತಾ ಅವರು ತಮ್ಮ ದೂರಿನಲ್ಲಿ, ಬ್ಯಾನರ್ಜಿ ಅವರ ಕೃತ್ಯಗಳು ರಾಷ್ಟ್ರಗೀತೆಗೆ ಅವಮಾನ ಮತ್ತು ಅಗೌರವಕ್ಕೆ ಸಮಾನವಾಗಿವೆ. ಆದ್ದರಿಂದ 1971 ರ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯಿದೆಯಡಿ ಅಪರಾಧ ಎಂದು ಹೇಳಿದ್ದಾರೆ. ಅವರು ಕಫ್ ಪರೇಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com