ಬಾಂಬೆ ಐಐಟಿ ವಿದ್ಯಾರ್ಥಿ ಸಾವು: ಎಫ್‌ಐಆರ್ ದಾಖಲು ವೇಳೆ ಪೊಲೀಸರಿಂದ ಕಿರುಕುಳ; ದರ್ಶನ್ ತಂದೆ ಆರೋಪ

ಬಾಂಬೆ ಐಐಟಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿಕೊಳ್ಳಲು ಪೊಲೀಸರು ಕಿರುಕುಳ ನೀಡುತ್ತಿದ್ದಾರೆಂದು ದರ್ಶನ್ ಸೋಲಂಕಿ ಅವರ ತಂದೆ ಗುರುವಾರ ಆರೋಪ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಬಾಂಬೆ ಐಐಟಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿಕೊಳ್ಳಲು ಪೊಲೀಸರು ಕಿರುಕುಳ ನೀಡುತ್ತಿದ್ದಾರೆಂದು ದರ್ಶನ್ ಸೋಲಂಕಿ ಅವರ ತಂದೆ ಗುರುವಾರ ಆರೋಪ ಮಾಡಿದ್ದಾರೆ.

ಪೊಲೀಸರು ಕಿರುಕುಳ ನೀಡುತ್ತಿರುವ ಸಂಬಂಧ ಮೃತ ವಿದ್ಯಾರ್ಥಿ ದರ್ಶನ್ ಅವರ ತಂದೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಮುಂಬೈ ಪೊಲೀಸ್ ಆಯುಕ್ತ ವಿವೇಕ್ ಫನ್ಸಾಲ್ಕರ್ ಅವರಿಗೆ ಪತ್ರ ಬರೆದಿದ್ದಾರೆ.

2 ವಾರಗಳಿಂದ ಎಫ್ಐಆರ್ ದಾಖಲಿಸಿಕೊಳ್ಳಲು ಪೊಲೀಸರು ಹಾಗೂ ವಿಶೇಷ ತನಿಖಾ ದಳ ನಿರಾಕರಿಸುತ್ತಿದ್ದು, ಅಧಿಕಾರಿಗಳ ವರ್ತನೆ ಕುಟುಂಬಕ್ಕೆ ಆಘಾತ ಹಾಗೂ ನಿರಾಶೆಯನ್ನು ತಂದಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಮಗನ ಸಾವಿನ ಹಿಂದೆ ಪಿತೂರಿಯಿದೆ. ಪ್ರಕರಣ ಸಂಬಂಧ ಮಾರ್ಚ್ 16 ರಂದು ನಾನು ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲು ಕುಟುಂಬದೊಂದಿಗೆ ಅಹಮದಾಬಾದ್‌ನಿಂದ ಪೊವೈ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದೆ. ಮನವಿಯ ಹೊರದಾಗಿಯೂ ಪೊಲೀಸರು ಎಫ್ಐಆರ್ ದಾಖಲಿಸಿಕೊಳ್ಳಲು ನಿರಾಕರಿಸಿದರು. ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚನೆ ಮಾಡಲಾಗಿರುವುದರಿಂದ ಎಫ್ಐಆರ್ ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.

ಈ ಸಮಯದಲ್ಲಿ ಡಿಸಿಪಿ ಕೂಡ ಉಪಸ್ಥಿತರಿದ್ದರು. ಆದರೆ, ಅವರು ಸಹಾಯ ಮಾಡಲಿಲ್ಲ. ಅವರನ್ನು ಮನವಿ ಮಾಡಿಕೊಂಡೆವು. ಆದರೆ, ಅವರು, ನಮ್ಮ ಮನವಿಯನ್ನು ನಿರಾಕರಿಸಿದರು. ಪೊಲೀಸರು ನಿರಾಕರಿಸಿದ ಹಿನ್ನೆಲೆಯಲ್ಲಿ ಅದೇ ದಿನ ಎಸ್ಐಟಿಯನ್ನೂ ಸಂಪರ್ಕಿಸಿದ್ದೆವು. ಆದರೆ, ಅವರೂ ಕೂಡ ಸಹಕಾರ ನೀಡಲಿಲ್ಲ. ಪೊಲೀಸರು ಹಾಗೂ ಎಸ್ಐಟಿ ಅಧಇಕಾರಿಗಳ ವರ್ತನೆಯಿಂದ ನಮ್ಮ ಕುಟುಂಬ ಸಂಪೂರ್ಣ ಆಘಾತ ಹಾಗೂ ನಿರಾಶೆಗೊಂಡಿದೆ. ಹೀಗಾಗಿ ನಮಗೆ ಬೇರೆ ದಾರಿಯಿಲ್ಲದೆ ನಿಮಗೆ ಪತ್ರ ಬರೆಯುತ್ತಿದ್ದೇವೆ. ಪೊಲೀಸರು ಹಾಗೂ ಅಧಿಕಾರಿಗಳ ವರ್ತನೆ ನಮಗೆ ನ್ಯಾಯ ದೊರೆಯುವ ವಿಶ್ವಾಸ ಹೋಗುವಂತೆ ಮಾಡುತ್ತಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಜಾತಿ ತಾರತಮ್ಯ ಕೋನವನ್ನು ಬದಿಗೊತ್ತು, ಬೇರೆಯದ್ದೇ ರೀತಿಯಲ್ಲಿ ತನಿಖೆ ನಡೆಸಲು ಪ್ರಯತ್ನ ನಡೆಸುತ್ತಿದೆ ಎಂಬ ಆತಂಕ ಶುರುವಾಗಿದೆ.

"ದಯವಿಟ್ಟು ಈ ವಿಚಾರವನ್ನು ಪರಿಶೀಲಿಸಿ ಮತ್ತು ನಮ್ಮ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸುವಂತೆ ಮತ್ತು ತನಿಖೆಯನ್ನು ಸ್ವತಂತ್ರವಾಗಿ. ನ್ಯಾಯಯುತವಾಗಿ, ಯಾವುದೇ ಅಕ್ರಮವಿಲ್ಲದೆ ನಡೆಸಲಾಗುತ್ತಿದೆ ಎಂಬುದನ್ನು ಖಚಿತಪಡಿಸಿ ಎಂದು ನಾವು ವಿನಂತಿಸುತ್ತೇವೆ. ದಯವಿಟ್ಟು ನಮ್ಮ ಮಗನಿಗೆ ನ್ಯಾಯವನ್ನು ಒದಗಿಸಿ. ಈ ವಿಷಯದಲ್ಲಿ ತುರ್ತಾಗಿ ಕಾರ್ಯನಿರ್ವಹಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಅಹಮದಾಬಾದ್‌ನ ದರ್ಶನ್ ಅವರು ಬಾಂಬೆ ಐಐಟಿಯಲ್ಲಿ ಬಿ.ಟೆಕ್ (ಕೆಮಿಕಲ್) ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದರು. ಫೆ. 12ರಂದು ಐಐಟಿ ಬಾಂಬೆಯ ಪೊವೈ ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್‌ನ 7ನೇ ಮಹಡಿಯಿಂದ ಜಿಗಿದು ಸಾವಿಗೀಡಾಗಿದ್ದರು. ದರ್ಶನ್ ಪರಿಶಿಷ್ಟ ಜಾತಿಗೆ ಸೇರಿದ್ದ ಕಾರಣ ಆತ ಜಾತಿ ತಾರತಮ್ಯ ಎದುರಿಸುತ್ತಿದ್ದ ಎಂದು ಆತನ ಕುಟುಂಬದವರು ಆರೋಪಿಸುತ್ತಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಐಐಟಿ (ಬಿ)ಯ ಅಧಿಕಾರಿಗಳು, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ನಂದ ಕಿಶೋರ್ ಅವರ ನೇತೃತ್ವದಲ್ಲಿ 12 ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದ್ದರು.

ಈ ಸಮಿತಿಯು ತನ್ನ ವರದಿಯಲ್ಲಿ ವಿದ್ಯಾರ್ಥಿಯೊಂದಿಗೆ ಜಾತಿ ಆಧಾರಿತ ತಾರತಮ್ಯ ನಡೆದಿರುವ ಆರೋಪವನ್ನು ತಳ್ಳಿ ಹಾಕಿತ್ತು. ವಿದ್ಯಾರ್ಥಿಯ ಸಾವಿಗೆ ಶೈಕ್ಷಣಿಕ ಕಾರ್ಯಕ್ಷಮತೆ ಕ್ಷೀಣಿಸುತ್ತಿರುವುದೇ ಸಂಭವನೀಯ ಕಾರಣವಾಗಿರಬಹುದು ಎನ್ನುವ ಸುಳಿವನ್ನು ಸಮಿತಿ ನೀಡಿತ್ತು.

ಈ ನಡುವೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಸೋಲಂಕಿ ಬರೆದಿದ್ದ ಡೆತ್ ನೋಟ್'ನ್ನು ವಶಪಡಿಸಿಕೊಂಡಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಪತ್ರದಲ್ಲಿ ಮೃತ ವಿದ್ಯಾರ್ಥಿ ದರ್ಶನ್, ಹಾಸ್ಟೆಲ್ ನಲ್ಲಿ ತನ್ನ ಜೊತೆಗಿದ್ದ ವಿದ್ಯಾರ್ಥಿಯೊಬ್ಬನ ಹೆಸರನ್ನು ಬರೆದಿದ್ದಾನೆಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com