ಉತ್ತರ ಪ್ರದೇಶದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಐಐಟಿ ಮದ್ರಾಸ್ ಅಧ್ಯಾಪಕರಿಂದ ವಿಶೇಷ ತರಗತಿ!
ಲಖನೌ: ಉತ್ತರ ಪ್ರದೇಶದ ಮೂಲ ಶಿಕ್ಷಣ ಇಲಾಖೆಯು ಐಐಟಿ ಮದ್ರಾಸ್‌ನೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದೆ. ಇದರಡಿ ಅದರ ಅಧ್ಯಾಪಕರು ವಾರಣಾಸಿಯ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವಿಶೇಷ ಆನ್‌ಲೈನ್ ತರಗತಿ ನಡೆಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ವಿದ್ಯಾ ಶಕ್ತಿ ಪ್ರಾಜೆಕ್ಟ್ ಅಡಿಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ವಾರಣಾಸಿಯ 100 ಶಾಲೆಗಳಲ್ಲಿ ಪ್ರಾಯೋಗಿಕ ಯೋಜನೆಯಾಗಿ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್‌ನಲ್ಲಿ ವಿಶೇಷ ಆನ್‌ಲೈನ್ ತರಗತಿಗಳು ಪ್ರಾರಂಭವಾಗಲಿವೆ. ವಾರಣಾಸಿಯ ಸರ್ಕಾರಿ ಶಾಲೆಗಳ 6 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಐಐಟಿ ಶಿಕ್ಷಕರು ಬೋಧಿಸಲಿದ್ದಾರೆ ಎಂದು ಮೂಲ ಶಿಕ್ಷಣ ಅಧಿಕಾರಿ ಅರವಿಂದ ಪಾಠಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶಾಲಾ ಸಮಯದ ನಂತರ ಎಲ್ಲಾ ತರಗತಿಗಳು ಆನ್‌ಲೈನ್‌ನಲ್ಲಿ ನಡೆಯುತ್ತವೆ. ವಾರಣಾಸಿಯ ಆಯ್ದ ಶಾಲೆಗಳಲ್ಲಿ 70 ಸ್ಮಾರ್ಟ್ ತರಗತಿಗಳಿವೆ. ಶೀಘ್ರದಲ್ಲೇ ಇನ್ನೂ 30ಕ್ಕೂ ಹೆಚ್ಚು ಸ್ಮಾರ್ಟ್ ಶಾಲೆಗಳು ತಲೆ ಎತ್ತಲಿವೆ. ಪ್ರತಿ ಶಾಲೆಯಲ್ಲಿ ತಾಂತ್ರಿಕ ಬೆಂಬಲಕ್ಕಾಗಿ ಮದ್ರಾಸ್ ನ ಭಾರತೀಯ ತಂತ್ರಜ್ಞಾನ ಸಂಸ್ಥೆ ಸ್ಥಳೀಯ ಸಂಯೋಜಕರನ್ನು ಹೊಂದಿರುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.