'ಕಾರ್ಯಕರ್ತರ ಭಾವನೆಗೆ ಅಗೌರವ ತೋರಲಾರೆ': ರಾಜಿನಾಮೆ ಹಿಂಪಡೆದ ಶರದ್ ಪವಾರ್

ಎನ್ ಸಿಪಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಹಿರಿಯ ನಾಯಕ ಶರದ್ ಪವಾರ್ ಕೊನೆಗೂ ತಮ್ಮ ನಿರ್ಧಾರ ಬದಲಿಸಿದ್ದು, ರಾಜಿನಾಮೆ ಹಿಂಪಡೆದಿದ್ದಾರೆ.
ಶರದ್ ಪವಾರ್
ಶರದ್ ಪವಾರ್

ಮುಂಬೈ: ಎನ್ ಸಿಪಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಹಿರಿಯ ನಾಯಕ ಶರದ್ ಪವಾರ್ ಕೊನೆಗೂ ತಮ್ಮ ನಿರ್ಧಾರ ಬದಲಿಸಿದ್ದು, ರಾಜಿನಾಮೆ ಹಿಂಪಡೆದಿದ್ದಾರೆ.

ಎನ್ ಸಿಪಿಯ 18 ಸದಸ್ಯರ ಸಮಿತಿಯು ಶರದ್ ಪವಾರ್ ಅವರ ರಾಜೀನಾಮೆಯನ್ನ ತಿರಸ್ಕರಿಸಿದ್ದು, ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ತಿಳಿಸಿದೆ. ಈ ಬೆಳವಣಿಗೆ ಬೆನ್ನಲ್ಲೇ ಶರದ್ ಪವಾರ್ ತಮ್ಮ ರಾಜಿನಾಮೆಯನ್ನು ಹಿಂಪಡೆದಿದ್ದಾರೆ. ಈ ಕುರಿತು ಶುಕ್ರವಾರ ಸಂಜೆ ವೈಬಿ ಚವ್ಹಾಣ್ ಕೇಂದ್ರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ರಾಜೀನಾಮೆಯನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ.

'ನಾನು ಎನ್ ಸಿಪಿ ಅಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನ ಹಿಂಪಡೆಯಲು ನಿರ್ಧರಿಸಿದ್ದೇನೆ. ನಾನು ರಾಜಕೀಯ ಜೀವನದಲ್ಲಿ 66 ವರ್ಷಗಳನ್ನ ಪೂರ್ಣಗೊಳಿಸಿದ್ದು, ಇಷ್ಟು ದೀರ್ಘ ಇನ್ನಿಂಗ್ಸ್ ನಂತರ ವಿಶ್ರಾಂತಿ ಪಡೆಯಲು ಬಯಸಿದ್ದೆ. ಆದರೆ ಈ ನಿರ್ಧಾರ ಘೋಷಿಸಿದ ನಂತರ ಪಕ್ಷದ ಕಾರ್ಯಕರ್ತರು, ನನ್ನ ಬೆಂಬಲಿಗರು, ಮತ್ತು ಜನರಲ್ಲಿ ಅಸಮಾಧಾನದ ಪ್ರತಿಕ್ರಿಯೆ ಇತ್ತು. ನಾನು ಈ ನಿರ್ಧಾರವನ್ನ ಮರುಪರಿಶೀಲಿಸಬೇಕು ಎಂದು ನನ್ನ ಸಲಹೆಗಾರರು ಹೇಳಿದರು. ನನ್ನ ಬೆಂಬಲಿಗರು ಮತ್ತು ಮಾರ್ಗದರ್ಶಕರು ನನ್ನ ನಿರ್ಧಾರವನ್ನ ಹಿಂತೆಗೆದುಕೊಳ್ಳುವಂತೆ ವಿನಂತಿಸುತ್ತಿದ್ದರು. ಅಲ್ಲದೇ, ಭಾರತದಾದ್ಯಂತ ಮತ್ತು ಮಹಾರಾಷ್ಟ್ರದ ರಾಜಕಾರಣಿಗಳು ಕೂಡ ರಾಜೀನಾಮೆ ಹಿಂತೆಗೆದುಕೊಳ್ಳುವಂತೆ ವಿನಂತಿಸಿದರು.. 

ಇನ್ನು 'ಸಮಿತಿಯು ತೆಗೆದುಕೊಂಡ ನಿರ್ಧಾರದ ನಂತರ ಮತ್ತು ಈ ಎಲ್ಲಾ ಬೇಡಿಕೆಗಳನ್ನ ಪರಿಗಣಿಸಿದ ನಂತರ, ನಾನು ಎನ್ಸಿಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ನನ್ನ ನಿರ್ಧಾರವನ್ನ ಹಿಂತೆಗೆದುಕೊಂಡಿದ್ದೇನೆ. ನಾನು ಈ ನಿರ್ಧಾರವನ್ನ ತೆಗೆದುಕೊಳ್ಳುತ್ತಿದ್ದರೂ, ಪಕ್ಷದಲ್ಲಿ ಹೊಸ ನಾಯಕತ್ವವನ್ನ ರಚಿಸಬೇಕು ಎಂದು ನಾನು ಭಾವಿಸುತ್ತೇನೆ ಮತ್ತು ಅದಕ್ಕಾಗಿ ನಾನು ಕೆಲಸ ಮಾಡುತ್ತೇನೆ' ಎಂದು ಶರದ್ ಪವಾರ್ ಹೇಳಿದ್ದಾರೆ.
 
'ನನ್ನ ಮೇಲೆ ತೋರಿದ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯಿಂದ ನಾನು ಮುಳುಗಿದ್ದೇನೆ. ನಿಮ್ಮೆಲ್ಲರ ಮನವಿಗಳನ್ನು ಪರಿಗಣಿಸಿ ಮತ್ತು ಪಕ್ಷವು ರಚಿಸಿರುವ ಸಮಿತಿಯ ನಿರ್ಧಾರವನ್ನು ಗೌರವಿಸಿ, ನಾನು ನನ್ನ ನಿವೃತ್ತಿಯ ನಿರ್ಧಾರವನ್ನು ಹಿಂತೆಗೆದುಕೊಳ್ಳುತ್ತೇನೆ. ಪಕ್ಷದಲ್ಲಿ ಯಾವುದೇ ಹುದ್ದೆ ಅಥವಾ ಜವಾಬ್ದಾರಿಗಾಗಿ "ಉತ್ತರಾಧಿಕಾರಿ ಯೋಜನೆ" ಇರಬೇಕು. ಪಕ್ಷದಲ್ಲಿ ಸಾಂಸ್ಥಿಕ ಬದಲಾವಣೆಗಳನ್ನು ಮಾಡುವುದು, ಹೊಸ ಜವಾಬ್ದಾರಿಗಳನ್ನು ನಿಯೋಜಿಸುವುದು ಮತ್ತು ಹೊಸ ನಾಯಕತ್ವವನ್ನು ರಚಿಸುವತ್ತ ಗಮನ ಹರಿಸಲಿದ್ದಾರೆ.

ನಾನು ಕೂಡ ಸಂಘಟನೆಯ ಬೆಳವಣಿಗೆಗೆ ಶಕ್ತಿಮೀರಿ ದುಡಿಯುತ್ತೇನೆ ಮತ್ತು ನಮ್ಮ ಸಿದ್ಧಾಂತ ಮತ್ತು ಪಕ್ಷದ ಗುರಿಗಳನ್ನು ಜನರ ಬಳಿಗೆ ಕೊಂಡೊಯ್ಯುತ್ತೇನೆ ಎಂದು ಪವಾರ್ ಹೇಳಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com