
ಸಾಂದರ್ಭಿಕ ಚಿತ್ರ
ತಿರುವನಂತಪುರಂ:ಪ್ಯಾಸೆಂಜರ್ ರೈಲಿನಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ರೈಲ್ವೆ ಟಿಕೆಟ್ ಪರೀಕ್ಷಕನನ್ನು ಮಂಗಳವಾರ ಬಂಧಿಸಲಾಗಿದೆ. ಕೇರಳದ ತಿರುವನಂತಪುರಂ ಜಿಲ್ಲೆಯ ನಿಲಂಬೂರಿನಿಂದ ಕೊಚುವೇಲಿಗೆ ತೆರಳುತ್ತಿದ್ದ ರೈಲಿನಲ್ಲಿ ಈ ಘಟನೆ ನಡೆದಿದ್ದು, ಕೊಟ್ಟಾಯಂ ರೈಲು ನಿಲ್ದಾಣದಲ್ಲಿ ಟಿಕೆಟ್ ಪರೀಕ್ಷಕನನ್ನು ಬಂಧಿಸಲಾಗಿದೆ.
ನಿಲಂಬೂರ್-ಕೊಚುವೇಲಿ ನಡುವಿನ ರಾಜ್ಯ ರಾಣಿ ಎಕ್ಸ್‌ಪ್ರೆಸ್ ರೈಲು ಬೆಳಗ್ಗೆ ಆಲುವಾ ನಿಲ್ದಾಣ ದಾಟಿದ ನಂತರ ಈ ಘಟನೆ ಸಂಭವಿಸಿದೆ ಎಂದು ಕೊಟ್ಟಾಯಂ ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರ್ ಎಸಿ ಟಿಕೆಟ್ ಹೊಂದಿದ್ದ ಮಹಿಳೆ ಎಸ್-4 ಕೋಚ್ ನಲ್ಲಿ ಕುಳಿತಿದ್ದಾಗ ಅಲ್ಲಿಗೆ ಬಂದ ಟಿಕೆಟ್ ಪರೀಕ್ಷಕ, ಆಕೆಯ ಹಿಂದೆ ಕುಳಿತು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾಳೆ.
ಘಟನೆ ನಡೆದ ತಕ್ಷಣವೇ ಆ ಮಹಿಳೆ ತಿರುವನಂತಪುರಂನಲ್ಲಿರುವ ರೈಲ್ವೆ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ನಂತರ ಅವರು ಏನಾಯಿತು ಎಂದು ತಿಳಿಯಲು ರೈಲಿನಲ್ಲಿದ್ದ ಆರ್‌ಪಿಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.
ಆರ್‌ಪಿಎಫ್ ಸಿಬ್ಬಂದಿ ಮಹಿಳೆ ಮತ್ತು ಟಿಕೆಟ್ ಪರೀಕ್ಷಕನೊಂದಿಗೆ ಮಾತುಕತೆ ನಡೆಸಿದ ಬಳಿಕ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ನಂತರ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆತ ಮದ್ಯ ಸೇವಿಸಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.