ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನ್ಯಾ. ಮಿಶ್ರಾ, ಹಿರಿಯ ವಕೀಲ ವಿಶ್ವನಾಥನ್ ಪ್ರಮಾಣ ವಚನ ಸ್ವೀಕಾರ
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದ ನ್ಯಾ. ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಹಿರಿಯ ವಕೀಲ ಕೆ ವಿ ವಿಶ್ವನಾಥನ್ ಅವರಿಗೆ ಶುಕ್ರವಾರ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಪ್ರಮಾಣ ವಚನ ಬೋಧಿಸಿದರು.
Published: 19th May 2023 12:44 PM | Last Updated: 19th May 2023 12:44 PM | A+A A-

ನ್ಯಾ. ಮಿಶ್ರಾ, ಹಿರಿಯ ವಕೀಲ ವಿಶ್ವನಾಥನ್ ಪ್ರಮಾಣ ವಚನ ಸ್ವೀಕಾರ
ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದ ನ್ಯಾ. ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಹಿರಿಯ ವಕೀಲ ಕೆ ವಿ ವಿಶ್ವನಾಥನ್ ಅವರಿಗೆ ಶುಕ್ರವಾರ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಪ್ರಮಾಣ ವಚನ ಬೋಧಿಸಿದರು.
ಸುಪ್ರೀಂ ಕೋರ್ಟ್‌ನಲ್ಲಿನ ನ್ಯಾಯಮೂರ್ತಿಗಳ ಹುದ್ದೆಯು 34 ಇದ್ದು, ಇಬ್ಬರು ನೂತನ ನ್ಯಾಯಮೂರ್ತಿಗಳ ನೇಮಕಾತಿಯೊಂದಿಗೆ ಎಲ್ಲಾ ಹುದ್ದೆಗಳು ಭರ್ತಿಯಾದಂತಾಗಿದೆ. ಮೇ 16ರಂದು ನಿರ್ಣಯ ಅಂಗೀಕರಿಸುವ ಮೂಲಕ ಸುಪ್ರೀಂ ಕೋರ್ಟ್ ಕೊಲಿಜಿಯಂ ಈ ಇಬ್ಬರು ನ್ಯಾಯಮೂರ್ತಿಗಳ ಹೆಸರುಗಳನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಇದರ ಬೆನ್ನಿಗೇ ಮೇ 18ರಂದು ಕೇಂದ್ರ ಸರ್ಕಾರವು ಅಧಿಸೂಚನೆ ಪ್ರಕಟಿಸಿತ್ತು. 1966ರ ಮೇ 16ರಂದು ವಿಶ್ವನಾಥನ್ ಅವರು ಜನ್ಮಿಸಿದ್ದು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕವಾಗಿರುವ ಅವರು 2031ರ ಮೇ 25ರವರೆಗೆ ಕರ್ತವ್ಯ ನಿರ್ವಹಸಲಿದ್ದಾರೆ. ನ್ಯಾ.ಜೆ ಬಿ ಪರ್ದಿವಾಲಾ 2030ರ ಆಗಸ್ಟ್ 11ರಂದು ನಿವೃತ್ತರಾಗಲಿದ್ದು, ವಿಶ್ವನಾಥನ್ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗುವವರ ಸಾಲಿನಲ್ಲಿ ಇದ್ದಾರೆ. ಪರ್ದಿವಾಲಾ ಅವರ ಅವಧಿಯ ನಂತರ 2031ರ ಮೇ 25ರಂದು ನಿವೃತ್ತಿ ಹೊಂದುವವರೆಗೂ ಅವರು ಸಿಜೆಐ ಆಗಿರಲಿದ್ದಾರೆ.
VIDEO | Chief Justice of India DY Chandrachud administered the oath of office to Justice Prashant Kumar Mishra and senior advocate Kalpathy Venkataraman Viswanathan as judges of the Supreme Court earlier today. pic.twitter.com/aQvmH1rg50
— Press Trust of India (@PTI_News) May 19, 2023
ನ್ಯಾ. ವಿಶ್ವನಾಥನ್ ನೇಮಕಾತಿಯೊಂದಿಗೆ ವಕೀಲರ ಪರಿಷತ್‌ನಿಂದ ನೇರವಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕವಾದ ವಕೀಲರ ಪಟ್ಟಿಯಲ್ಲಿ ಇವರು 10ನೇ ನ್ಯಾಯಮೂರ್ತಿಯಾಗಿದ್ದಾರೆ. ನ್ಯಾಯಮೂರ್ತಿಗಳಾದ ಎಸ್ ಎಂ ಸಿಕ್ರಿ, ಯು ಯು ಲಲಿತ್ ಮತ್ತು ಪಿ ಎಸ್ ನರಸಿಂಹ ಅವರ ಬಳಿಕ ಸಿಜೆಐ ಆಗಿ ನೇಮಕವಾಗಲಿರುವ ನಾಲ್ಕನೆಯವರು ನ್ಯಾ. ವಿಶ್ವನಾಥನ್ ಅವರಾಗಲಿದ್ದಾರೆ. ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆದ ವಿಶ್ವನಾಥನ್ ಅವರು 30 ವರ್ಷಗಳಿಂದ ವೃತ್ತಿಯಲ್ಲಿದ್ದು, ಹಲವು ಮಹತ್ವದ ಪ್ರಕರಣಗಳಲ್ಲಿ ವಾದಿಸಿದ್ದಾರೆ. ಮಾಜಿ ಅಟಾರ್ನಿ ಜನರಲ್ ಹಾಗೂ ಹಿರಿಯ ವಕೀಲ ಕೆ ಕೆ ವೇಣುಗೋಪಾಲ್ ಅವರ ಚೇಂಬರ್‌ನಲ್ಲಿ ಕಿರಿಯ ವಕೀಲರಾಗಿಯೂ ನ್ಯಾ. ವಿಶ್ವನಾಥನ್ ಅವರು ಕಾರ್ಯನಿರ್ವಹಿಸಿದ್ದರು. 2009ರಲ್ಲಿ ಸುಪ್ರೀಂ ಕೋರ್ಟ್ ನ್ಯಾ. ವಿಶ್ವನಾಥನ್ ಅವರಿಗೆ ಹಿರಿಯ ವಕೀಲರಾಗಿ ಪದೋನ್ನತಿ ನೀಡಿತ್ತು.
ಇದನ್ನೂ ಓದಿ: ಇದು ಶಿಕ್ಷೆಯಲ್ಲ: ಕೇಂದ್ರ ಭೂ ವಿಜ್ಞಾನ ಸಚಿವರಾಗಿ ಅಧಿಕಾರ ವಹಿಸಿಕೊಂಡ ರಿಜಿಜು
ಇನ್ನು 2021ರ ಅಕ್ಟೋಬರ್ 13ರಂದು ಆಂಧ್ರಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ನ್ಯಾ. ಮಿಶ್ರಾ ಅವರೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದಿದ್ದಾರೆ. ಛತ್ತೀಸಗಡ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹಾಗೂ ಅದೇ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿಯೂ ಅವರು ಕರ್ತವ್ಯ ನಿರ್ವಹಿಸಿದ್ದರು.