ರಾಷ್ಟ್ರಪತಿಗೆ ಅವಮಾನ: ಟಿಎಂಸಿ ನಂತರ ಹೊಸ ಸಂಸತ್ ಭವನದ ಉದ್ಘಾಟನೆ ಬಹಿಷ್ಕರಿಸಲು ಎಎಪಿ ನಿರ್ಧಾರ

ನೂತನ ಸಂತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸದಿರುವುದು ಅವರಿಗೆ ಮಾಡಿದ ಅವಮಾನ ಎಂದಿರುವ ಆಮ್ ಆದ್ಮಿ ಪಕ್ಷ (ಎಎಪಿ) ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳುವ ಕಾರ್ಯಕ್ರಮವನ್ನು ಬಹಿಷ್ಕರಿಸುವುದಾಗಿ ಮಂಗಳವಾರ ಘೋಷಿಸಿದೆ.
ಸೆಂಟ್ರಲ್ ದೆಹಲಿಯಲ್ಲಿರುವ ನೂತನ ಸಂಸತ್ ಭವನ
ಸೆಂಟ್ರಲ್ ದೆಹಲಿಯಲ್ಲಿರುವ ನೂತನ ಸಂಸತ್ ಭವನ

ನವೆದೆಹಲಿ: ನೂತನ ಸಂತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸದಿರುವುದು ಅವರಿಗೆ ಮಾಡಿದ ಅವಮಾನ ಎಂದಿರುವ ಆಮ್ ಆದ್ಮಿ ಪಕ್ಷ (ಎಎಪಿ) ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳುವ ಕಾರ್ಯಕ್ರಮವನ್ನು ಬಹಿಷ್ಕರಿಸುವುದಾಗಿ ಮಂಗಳವಾರ ಘೋಷಿಸಿದೆ.

ಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಟ್ವೀಟ್‌ ಮಾಡಿದ್ದು, 'ನೂತನ ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸದಿರುವುದು ಅವರಿಗೆ ಮಾಡಿದ ಘೋರ ಅವಮಾನ. ಇದು ದಲಿತ, ಬುಡಕಟ್ಟು ಮತ್ತು ಸಮಾಜದ ಮೂಲ ವರ್ಗಕ್ಕೆ ಮಾಡಿದ ಅವಮಾನ. (ಪ್ರಧಾನಿ) ಮೋದಿ ಅವರು ರಾಷ್ಟ್ರಪತಿಗಳನ್ನು ಆಹ್ವಾನಿಸದಿರುವುದನ್ನು ಪ್ರತಿಭಟಿಸಿ ಉದ್ಘಾಟನಾ ಕಾರ್ಯಕ್ರಮವನ್ನು ಬಹಿಷ್ಕರಿಸಲಿದೆ' ಎಂದಿದ್ದಾರೆ.

ಇದಕ್ಕೂ ಮುನ್ನ ತೃಣಮೂಲ ಕಾಂಗ್ರೆಸ್ ನೂತನ ಸಂಸತ್ ಭವನದ ಉದ್ಘಾಟನೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿತ್ತು.

ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಡೆರೆಕ್ ಒ ಬ್ರಿಯಾನ್ ಟ್ವೀಟ್‌ ಮಾಡಿದ್ದು, 'ಸಂಸತ್ತು ಕೇವಲ ಹೊಸ ಕಟ್ಟಡವಲ್ಲ; ಇದು ಹಳೆಯ ಸಂಪ್ರದಾಯಗಳು, ಮೌಲ್ಯಗಳು, ಪೂರ್ವನಿದರ್ಶನಗಳು ಮತ್ತು ನಿಯಮಗಳೊಂದಿಗೆ ಸ್ಥಾಪನೆಯಾಗಿದೆ. ಸಂಸತ್ ಭವನವು ಭಾರತೀಯ ಪ್ರಜಾಪ್ರಭುತ್ವದ ಅಡಿಪಾಯವಾಗಿದೆ. ಪ್ರಧಾನಿ ಮೋದಿಗೆ ಅದು ಅರ್ಥವಾಗುವುದಿಲ್ಲ. ಭಾನುವಾರದ ಹೊಸ ಕಟ್ಟಡದ ಉದ್ಘಾಟನೆ ಎಂಬುದು ಅವರಿಗೆ ನಾನು, ನನ್ನದು ಮತ್ತು ನನಗಾಗಿ ಎನ್ನುವುದಷ್ಟೇ. ಆದ್ದರಿಂದ ನಾವು ಕಾರ್ಯಕ್ರಮದಿಂದ ಹೊರಗುಳಿಯುತ್ತೇವೆ' ಎಂದಿದ್ದಾರೆ.

ನೂತನ ಸಂಸತ್ ಭವನದ ಉದ್ಘಾಟನೆಯ ದಿನಾಂಕದ ಆಯ್ಕೆ ಬಗ್ಗೆ ತೃಣಮೂಲ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿದೆ. ಅವರ ಪ್ರಕಾರ, ಹೊಸ ಸಂಸತ್ ಕಟ್ಟಡದ ಉದ್ಘಾಟನೆಯ ಸಂದರ್ಭವು ಆರ್‌ಎಸ್‌ಎಸ್ ನಾಯಕ ವಿಡಿ ಸಾವರ್ಕರ್ ಅವರ ಜನ್ಮದಿನವಾದ ಮೇ 28ರ ಬದಲಿಗೆ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭವಾಗಿರಬೇಕು ಎಂದಿದೆ.

ಹೊಸ ಕಟ್ಟಡ ಉದ್ಘಾಟನೆಗೆ ಕಾಂಗ್ರೆಸ್ ಕೂಡ ಬಹಿಷ್ಕಾರ ಹಾಕುವ ಸಾಧ್ಯತೆ ಇದೆ. ಬುಧವಾರ ಅಥವಾ ಗುರುವಾರ ಈ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com