ಕುಸ್ತಿಪಟುಗಳ ಮೇಲೆ ಹಲ್ಲೆ; ಪಟ್ಟಾಭಿಷೇಕ ಮುಗಿದಿದೆ, ರಾಜ ಜನರನ್ನು ಬೀದಿಗೆ ತಳ್ಳಿದ್ದಾರೆ: ರಾಹುಲ್ ಗಾಂಧಿ
ನವದೆಹಲಿ: ಭಾನುವಾರ ಪ್ರತಿಭಟನಾ ನಿರತ ಕುಸ್ತಿಪಟುಗಳ ವಿರುದ್ಧ ದೆಹಲಿ ಪೊಲೀಸರ ಕ್ರಮದ ಬಗ್ಗೆ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದು, 'ರಾಜ ಬೀದಿಗಳಲ್ಲಿ ಜನರ ಧ್ವನಿಯನ್ನು ಪುಡಿಮಾಡುತ್ತಿದ್ದಾನೆ' ಎಂದು ಹೇಳಿದ್ದಾರೆ.
ಹಿಂದಿಯಲ್ಲಿ ಮಾಡಿದ ಟ್ವೀಟ್ ಮಾಡಿರುವ ಅವರು, 'ಪಟ್ಟಾಭಿಷೇಕ ಮುಗಿದಿದೆ. 'ಸೊಕ್ಕಿನ ರಾಜ' ಬೀದಿಗಳಲ್ಲಿ ಜನರ ಧ್ವನಿಯನ್ನು ಪುಡಿಮಾಡುತ್ತಿದ್ದಾನೆ!' ಎಂದು ಬರೆದಿದ್ದು, ದೆಹಲಿ ಪೊಲೀಸರು ಪ್ರತಿಭಟನಾ ನಿರತ ಕುಸ್ತಿಪಟುಗಳ ಮೇಲೆ ದೌರ್ಜನ್ಯ ನಡೆಸಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಜಂತರ್ ಮಂತರ್‌ನಿಂದ ಹೊಸ ಸಂಸತ್ ಭವನದ ಕಡೆಗೆ ಮೆರವಣಿಗೆ ಮಾಡಲು ಪ್ರಯತ್ನಿಸಿದಾಗ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಸಂಗೀತಾ ಫೋಗಟ್ ಸೇರಿದಂತೆ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ಅವರನ್ನು ಬಂಧಿಸಿದರು.
ಪೊಲೀಸರು ಪ್ರತಿಭಟನಾ ಸ್ಥಳದಿಂದ ಟೆಂಟ್‌ಗಳನ್ನೂ ತೆರವುಗೊಳಿಸಿದ್ದಾರೆ.
ಏಪ್ರಿಲ್ 23 ರಿಂದ, ಭಾರತದ ಪ್ರಮುಖ ಕುಸ್ತಿಪಟುಗಳಾದ ಪುನಿಯಾ, ಮಲಿಕ್ ಮತ್ತು ವಿನೇಶ್ ಜಂತರ್ ಮಂತರ್‌ನಲ್ಲಿ ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.


