ಬಂಗಾಳದಲ್ಲಿ ದೀದಿ ಆಪರೇಷನ್, ಶಾಸಕ ಬೇರಾನ್‌ ಟಿಎಂಸಿ ಸೇರ್ಪಡೆ; 'ಪ್ರತಿಪಕ್ಷಗಳ ಒಗ್ಗಟ್ಟಿಗೆ ಒಳ್ಳೆಯದಲ್ಲ, ಕಳ್ಳಬೇಟೆ ಕೃತ್ಯ' ಎಂದ ಕಾಂಗ್ರೆಸ್‌

ಪಶ್ಚಿಮ ಬಂಗಾಳದ ಆಪರೇಷನ್ 'ಕೈ' ಆರೋಪ ಎದುರಾಗಿದ್ದು, ಕಾಂಗ್ರೆಸ್ ಪಕ್ಷದ ಏಕೈಕ ಶಾಸಕ ಬೇರಾನ್ ಬಿಸ್ವಾಸ್ ಅವರು ಟಿಎಂಸಿ ಸೇರ್ಪಡೆಯಾಗಿರುವುದಕ್ಕೆ ಕಾಂಗ್ರೆಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಶಾಸಕ ಬೇರಾನ್‌ ಟಿಎಂಸಿ ಸೇರ್ಪಡೆ
ಶಾಸಕ ಬೇರಾನ್‌ ಟಿಎಂಸಿ ಸೇರ್ಪಡೆ

ಕೋಲ್ಕತಾ: ಪಶ್ಚಿಮ ಬಂಗಾಳದ ಆಪರೇಷನ್ 'ಕೈ' ಆರೋಪ ಎದುರಾಗಿದ್ದು, ಕಾಂಗ್ರೆಸ್ ಪಕ್ಷದ ಏಕೈಕ ಶಾಸಕ ಬೇರಾನ್ ಬಿಸ್ವಾಸ್ ಅವರು ಟಿಎಂಸಿ ಸೇರ್ಪಡೆಯಾಗಿರುವುದಕ್ಕೆ ಕಾಂಗ್ರೆಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಂಗಳವಾರ ಟೀಕಾ ಪ್ರಹಾರ ನಡೆಸಿದ್ದು, ತೃಣಮೂಲ ಕಾಂಗ್ರೆಸ್‌ನ ಇಂಥ ಕಳ್ಳಬೇಟೆ ಕೃತ್ಯದಿಂದ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಒಗ್ಗೂಡಬೇಕೆಂಬ ಆಶಯಕ್ಕೆ ಪೆಟ್ಟು ನೀಡಿದೆ. ಪ್ರತಿಪಕ್ಷಗಳ ಒಗ್ಗಟ್ಟಿನ ಬಗ್ಗೆ ಮಾತನಾಡುತ್ತಿರುವ ಮಮತಾ ಅವರ ಆಶಯವೂ ನಕಲಿ ಎಂಬುದು ಇದರಿಂದ ಸಾಬೀತಾಗಿದೆ’ ಎಂದು ಟೀಕಿಸಿದೆ.

ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್‌ ವಾಗ್ದಾಳಿ ನಡೆಸಿದ್ದು, ‘ಮೂರು ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಶಾಸಕರಾಗಿ ಬೇರಾನ್‌ ಐತಿಹಾಸಿಕ ಗೆಲುವು ಸಾಧಿಸಿದ್ದರು. ಅವರಿಗೆ ಟಿಎಂಸಿ ಆಮಿಷವೊಡ್ಡಿ ತನ್ನತ್ತ ಸೆಳೆದಿದೆ. ಜೊತೆಗೆ, ತನ್ನನ್ನು ಚುನಾಯಿಸಿದ ಸಾಗರ್ದಿಘಿ ಕ್ಷೇತ್ರದ ಮತದಾರರಿಗೂ ಅವರು ದ್ರೋಹ ಬಗೆದಿದ್ದಾರೆ. ಗೋವಾ, ಮೇಘಾಲಯ, ತ್ರಿಪುರ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಹಿಂದೆಯೂ ಇಂತಹ ಕಳ್ಳಬೇಟೆಗಳು ನಡೆದಿವೆ. ಇಂತಹ ನಿರ್ಧಾರ ಬಿಜೆಪಿ ವಿರುದ್ಧದ ಪ್ರತಿಪಕ್ಷಗಳ ಒಗ್ಗಟ್ಟಿಗೆ ನೆರವಾಗುವುದಿಲ್ಲ. ಬದಲಾಗಿ ಕಮಲ ಪಾಳಯದ ಉದ್ದೇಶಗಳಷ್ಟೇ ಸಾಫಲ್ಯಗೊಳ್ಳುತ್ತವೆ’ ಎಂದಿದ್ದಾರೆ.

ಸಾಗರ್ದಿಘಿ ಉಪ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಟಿಎಂಸಿ ಅಭ್ಯರ್ಥಿ ವಿರುದ್ಧವೇ ಜಯಗಳಿಸಿದ್ದ ಬೇರಾನ್‌, ಸೋಮವಾರ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್‌ ಬ್ಯಾನರ್ಜಿ ಸಮ್ಮುಖದಲ್ಲಿ ತೃಣಮೂಲ ಕಾಂಗ್ರೆಸ್‌ ಸೇರಿದ್ದರು. ಈ ವೇಳೆ ಮಾತನಾಡಿದ್ದ ಅವರು, ‘ಕಾಂಗ್ರೆಸ್‌ ನನ್ನ ಗೆಲುವಿನಲ್ಲಿ ಯಾವುದೇ ಪಾತ್ರವಹಿಸಿಲ್ಲ. ನನ್ನ ಸ್ವಸಾಮರ್ಥ್ಯದಿಂದ ಗೆಲುವು ಸಾಧಿಸಿದ್ದೇನೆ’ ಎಂದಿದ್ದರು. ಪಶ್ಚಿಮ ಬಂಗಾಳದ ಏಕೈಕ ಕಾಂಗ್ರೆಸ್‌ ಶಾಸಕರಾಗಿರುವ ಕಾರಣ ಅವರಿಗೆ ಪಕ್ಷಾಂತರ ನಿಷೇಧ ಕಾನೂನಿನ ಭಯವೂ ಇಲ್ಲ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com