ಮಹಿಳೆ ಶಿಕ್ಷಣ ಪಡೆದರೆ ಜನನ ಪ್ರಮಾಣ ಇಳಿಕೆ ಹೇಳಿಕೆ: ಕ್ಷಮೆಯಾಚಿಸಿದ ಬಿಹಾರ ಸಿಎಂ ನಿತೀಶ್‌ ಕುಮಾರ್

ರಾಜ್ಯ ವಿಧಾನಸಭೆಯಲ್ಲಿ ಜನಸಂಖ್ಯೆ ನಿಯಂತ್ರಣ ಕುರಿತು ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿದ್ದು, ಇದರ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ತಮ್ಮ ಹೇಳಿಕೆ ಕುರಿತು ಕ್ಷಮೆಯಾಚಿಸಿದ್ದಾರೆ.
ಬಿಹಾರ ಸಿಎಂ ನಿತೀಶ್‌ ಕುಮಾರ್
ಬಿಹಾರ ಸಿಎಂ ನಿತೀಶ್‌ ಕುಮಾರ್
Updated on

ಪಾಟ್ನ (ಬಿಹಾರ): ರಾಜ್ಯ ವಿಧಾನಸಭೆಯಲ್ಲಿ ಜನಸಂಖ್ಯೆ ನಿಯಂತ್ರಣ ಕುರಿತು ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿದ್ದು, ಇದರ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ತಮ್ಮ ಹೇಳಿಕೆ ಕುರಿತು ಕ್ಷಮೆಯಾಚಿಸಿದ್ದಾರೆ.

ಜಾತಿ ಸಮೀಕ್ಷೆಯ ಸಂಪೂರ್ಣ ವರದಿಯನ್ನು ಬಿಡುಗಡೆ ಮಾಡಿದ ನಂತರ ಬಿಹಾರ ಸಿಎಂ ಜನಸಂಖ್ಯಾ ನಿಯಂತ್ರಣದ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ್ದರು.
 
ಜನಸಂಖ್ಯೆ ನಿಯಂತ್ರಣದಲ್ಲಿ ಮಹಿಳೆಯರು ಶಿಕ್ಷಣ ಹೊಂದಿರುವುದು ಮಹತ್ವದ ಪಾತ್ರವಹಿಸುತ್ತದೆ ಎಂದು ಹೇಳಿದ ನಿತೀಶ್‌ ಕುಮಾರ್‌, ‘ಒಬ್ಬ ಸುಶಿಕ್ಷಿತ ಮಹಿಳೆಯು ಗಂಡ ಲೈಂಗಿಕ ಕ್ರಿಯೆಯಲ್ಲಿ ತೊಡಗದಂತೆ ನಿರ್ಬಂಧ ಹೇರಬಲ್ಲವಳಾಗಿರುತ್ತಾಳೆ’ ಎಂದು ವಿವರಿಸಿದರು.

‘ಜನನ ಪ್ರಮಾಣ ಹೆಚ್ಚಳಕ್ಕೆ ಪತಿಯ ಕೃತ್ಯವೇ ಕಾರಣವಾಗುತ್ತದೆ. ಆದರೆ, ಶಿಕ್ಷಣ ಪಡೆದ ಮಹಿಳೆಯು ಪತಿಯನ್ನು ನಿರ್ಬಂಧಿಸುವ ಕುರಿತು ತಿಳಿದುಕೊಂಡಿರುತ್ತಾಳೆ. ಜನನ ಪ್ರಮಾಣದಲ್ಲಿ ಇಳಿಕೆಯಾಗಿರುವುದಕ್ಕೆ ಮಹಿಳೆಯರು ಶಿಕ್ಷಣ ಪಡೆದಿರುವುದೇ ಕಾರಣ’ ಎಂದು ತಮ್ಮದೇ ಶೈಲಿಯಲ್ಲಿ ಹೇಳಿದ್ದರು.

‘ಇದನ್ನು ನೀವೂ ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತೀರಿ. ಈ ಹಿಂದೆ ಫಲವತ್ತತೆ ಪ್ರಮಾಣ 4.3ರಷ್ಟಿತ್ತು. ಈಗ 2.9ರಷ್ಟಿದ್ದು, ಶೀಘ್ರವೇ ಈ ಪ್ರಮಾಣ 2ರ ಗಡಿ ತಲುಪಲಿದೆ’ ಎಂದು ತಿಳಿಸಿದ್ದರು. ಈ ಹೇಳಿಕೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಹೇಳಿಕೆ ಸಂಬಂಧ ರಾಜಕೀಯ ನಾಯಕರು, ರಾಷ್ಟ್ರೀಯ ಮಹಿಳಾ ಆಯೋಗ ಆಕ್ರೋಶ ವ್ಯಕ್ತಪಡಿಸಿದೆ. ನಿತೀಶ್ ಕುಮಾರ್ ಕೂಡಲೇ ಕ್ಷಮೆಯಾಚಿಸಬೇಕು ಎಂದು ಎನ್‌ಸಿಡಬ್ಲ್ಯೂ ಮುಖ್ಯಸ್ಥೆ ರೇಖಾ ಶರ್ಮಾ ಒತ್ತಾಯಿಸಿದ್ದಾರೆ.

ವಿಧಾನಸಭೆಯಲ್ಲಿ ನಿತೀಶ್​ ಕುಮಾರ್ ಆಡಿರುವ ಅಸಭ್ಯ ಮಾತುಗಳಿಂದ ಪ್ರತಿಯೊಬ್ಬ ಮಹಿಳೆಯ ಘನತೆ ಹಾಗೂ ಗೌರವಕ್ಕೆ ಧಕ್ಕೆಯುಂಟಾಗಿದೆ. ಅವರ ಭಾಷಣದಲ್ಲಿ ಬಳಸಲಾದ ಭಾಷೆಯು ಸಮಾಜಕ್ಕೆ ಕಪ್ಪುಚುಕ್ಕೆಯಾಗಿದೆ. ನಾವು ಅಂತಹ ನಡವಳಿಕೆ ವಿರುದ್ಧ ಬಲವಾಗಿ ನಿಲ್ಲುತ್ತೇವೆ ಎಂದು ರೇಖಾ ತಿಳಿಸಿದ್ದಾರೆ.

ಹೇಳಿಕೆ ವಿವಾದ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಅವರು, ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದು, ಹೇಳಿಕೆ ಹಿಂದಕ್ಕೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com