Cash for Query Case: ಸಂಸದೆ ಮಹುವಾ ಮೋಯಿತ್ರಾ ವಿರುದ್ದ ಸಿಬಿಐ ತನಿಖೆಗೆ ಲೋಕಪಾಲ್ ಆದೇಶ!
ನವದೆಹಲಿ: ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ (Cash for Query Case) ಸ್ವೀಕರಿಸಿದ ಆರೋಪ ಎದುರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ (TMC MP Mahua Moitra) ಅವರಿಗೆ ಸಂಕಷ್ಟ ಎದುರಾಗಿದ್ದು, ಈ ಭ್ರಷ್ಟಾಚಾರ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಲೋಕಪಾಲ್(Lokpal), ಕೇಂದ್ರೀಯ ತನಿಖಾ ದಳಕ್ಕೆ(CBI) ಸೂಚಿಸಿದೆ ಎನ್ನಲಾಗಿದೆ.
ಈ ಕುರಿತು ಭಾರತೀಯ ಜನತಾ ಪಾರ್ಟಿಯ ಸಂಸದ ನಿಶಿಕಾಂತ್ ದುಬೆ (BJP MP Nishikant Dubey) ಅವರು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, 'ನಾನು ನೀಡಿದ ದೂರಿನ ಆಧಾರದ ಹಿನ್ನೆಲೆಯಲ್ಲಿ ಲೋಕಪಾಲ್ ಸಂಸ್ಥೆಯು, ರಾಷ್ಟ್ರೀಯ ಭದ್ರತೆಗೆ ಸವಾಲೊಡ್ಡಿದ್ದ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ ಅವರ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಕೈಗೊಳ್ಳುವಂತೆ ಕೇಂದ್ರ ತನಿಖಾ ದಳಕ್ಕೆ ಸೂಚಿಸಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅದಾನಿ ಗ್ರೂಪ್ ವಿರುದ್ಧ ಪ್ರಶ್ನೆ ಕೇಳಲು ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ ಅವರು ಎದುರಾಳಿ ಉದ್ಯಮಿಯೊಬ್ಬರಿಂದ ಲಂಚ ಸ್ವೀಕರಿಸಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಆರೋಪಿಸಿದ್ದರು.
ಕಳೆದ ಕೆಲವು ದಿನಗಳಲ್ಲಿ ಮಹುವಾ ಮೊಯಿತ್ರಾ ಅವರು ಕೆಲವು ಟಿವಿ ಸಂದರ್ಶನಗಳಲ್ಲಿ ಕಾಣಿಸಿಕೊಂಡಿದ್ದು, ಅಲ್ಲಿ ಅವರು ದರ್ಶನ್ ಹಿರಾನಂದಾನಿಗೆ ತಮ್ಮ ಸಂಸತ್ತಿನ ಲಾಗಿನ್ ಅನ್ನು ನೀಡಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಂಸತ್ ಲಾಗಿನ್ ಮಾಹಿತಿ ರಹಸ್ಯವಾಗಿಲ್ಲದಿರುವುದರಿಂದ ಭದ್ರತೆಗೆ ಯಾವುದೇ ಬೆದರಿಕೆ ಇಲ್ಲ ಎಂದು ಮಹುವಾ ಮೊಯಿತ್ರಾ ಸಂದರ್ಶನದಲ್ಲಿ ಪ್ರತಿಪಾದಿಸಿದ್ದರು.
ಇವರ ಖಾತೆಯನ್ನು ದುಬೈನಿಂದ ಲಾಗಿನ್ ಮಾಡಿದ ಆರೋಪವಿದ್ದು, ತಾನು ವಿದೇಶದಿಂದ ಅದನ್ನು ಪ್ರವೇಶಿಸಿದ್ದೇನೆ ಎಂದು ಮಹುವಾ ಹೇಳಿದ್ದಾರೆ. ಆದರೆ ಇದಕ್ಕಾಗಿ ಯಾವುದೇ ನಗದು ವಿನಿಮಯ ನಡೆದಿಲ್ಲ, ಸಂಸದರಾಗುವ ಮುಂಚೆಯೇ ದರ್ಶನ್ ಅವರು ತನಗೆ ಸ್ಕಾರ್ಫ್, ಕೆಲವು ಮೇಕಪ್ ವಸ್ತುಗಳನ್ನು ನೀಡಿದ್ದರು ಎಂದು ಮಹುವಾ ಮೊಯಿತ್ರಾ ಹೇಳಿದ್ದಾರೆ. ಅವರು ದೀರ್ಘಕಾಲದಿಂದ ತನ್ನ ಆಪ್ತ ಸ್ನೇಹಿತ ಎಂದು ವಿವರಿಸಿದ್ದಾರೆ. ಅದಾನಿ ಸಮೂಹವು ಈ ʼಬೋಗಸ್ ಆರೋಪʼಗಳ ಹಿಂದೆ ಇದೆ ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಹೇಳಿಕೊಂಡಿದ್ದಾರೆ. ಈ ಹಿಂದೆ ಅದಾನಿ ಸಮೂಹವನ್ನು ಮೋಯಿತ್ರಾ ಕಟುವಾಗಿ ಟೀಕಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ