ಸುರಂಗ ಕುಸಿತ: 41 ಕಾರ್ಮಿಕರ ಜೀವ ಉಳಿಸಿದ್ದ 'Rat Hole Mining' ಗೆ 2014ರಲ್ಲೇ ನಿಷೇಧ!? ಬಲಿಯಾದವರೆಷ್ಚು ಮಂದಿ ಗೊತ್ತಾ?

ಕಳೆದ 17 ದಿನಗಳಿಂದ ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸುವ ಕಾರ‍್ಯಾಚರಣೆಗೆ ಬಳಸಲಾಗಿದ್ದ Rat Hole Mining ತಂತ್ರವನ್ನು 2014ರಲ್ಲೇ ನಿಷೇಧಿಸಲಾಗಿತ್ತು.
ರ‍್ಯಾಟ್ ಹೋಲ್ ಮೈನಿಂಗ್ (ಸಾಂದರ್ಭಿಕ ಚಿತ್ರ)
ರ‍್ಯಾಟ್ ಹೋಲ್ ಮೈನಿಂಗ್ (ಸಾಂದರ್ಭಿಕ ಚಿತ್ರ)

ಉತ್ತರ ಕಾಶಿ: ಕಳೆದ 17 ದಿನಗಳಿಂದ ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆಗೆ ಬಳಸಲಾಗಿದ್ದ ರಾಟ್-ಹೋಲ್ ಗಣಿಗಾರಿಕೆ ತಂತ್ರವನ್ನು 2014ರಲ್ಲೇ ನಿಷೇಧಿಸಲಾಗಿತ್ತು.

ಹೌದು.. ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗ ಕುಸಿತ ದುರಂತದಲ್ಲಿ ಸಿಲುಕಿ ಪ್ರಾಣಾಪಾಯ ಎದುರಿಸುತ್ತಿದ್ದ 41 ಜನ ಕಾರ್ಮಿಕರ ಜೀವ ಉಳಿಸಿದ 'Indian Jugad' ರ್‍ಯಾಟ್‌ ಹೋಲ್ ಮೈನಿಂಗ್ ಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿರುವಂತೆಯೇ ಇತ್ತ ಈ ರ್‍ಯಾಟ್‌ ಹೋಲ್ ಗಣಿಗಾರಿಕೆ ತಂತ್ರವನ್ನು 2014ರಲ್ಲಿಯೇ ನಿಷೇಧಿಸಲಾಗಿತ್ತು ಎಂಬ ಅಂಶ ತಿಳಿದುಬಂದಿದೆ.

ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ, ಲೆಫ್ಟಿನೆಂಟ್ ಜನರಲ್ ಸೈಯದ್ ಅಟಾ ಹಸ್ನೈನ್ (ನಿವೃತ್ತ) ಮಾಹಿತಿ ನೀಡಿದ್ದು, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ ಜಿಟಿ)ಯಿಂದ ಕಾನೂನುಬಾಹಿರವಾಗಿರುವ ರ‍್ಯಾಟ್-ಹೋಲ್ ಗಣಿಗಾರಿಕೆ ತಂತ್ರವನ್ನು ಬಳಸುವ ಪ್ರಶ್ನೆಗೆ ಪ್ರತಿಕ್ರಿಯಿಸಿದರು. "ರ‍್ಯಾಟ್ ಹೋಲ್ ಗಣಿಗಾರಿಕೆ ಅಕ್ರಮವಾಗಿರಬಹುದು. ಆದರೆ ಈ ರ‍್ಯಾಟ್ ಹೋಲ್ ಗಣಿಗಾರರು ಅತ್ಯಂತ ಪ್ರತಿಭಾನ್ವಿತರು ಮತ್ತು ಮತ್ತು ಅನುಭವವನ್ನು ಹೊಂದಿದ್ದಾರೆ. ಅವರ ಕೌಶಲ್ಯವನ್ನು ನಾವು ಇಲ್ಲಿ ಬಳಸಿದ್ದೇವೆ ಎಂದು ಹೇಳಿದರು.

ನಿಷೇಧ ಏಕೆ?
"ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) 2014 ರಲ್ಲಿ ರ‍್ಯಾಟ್ ಹೋಲ್ ಕಲ್ಲಿದ್ದಲು ಗಣಿಗಾರಿಕೆಯ ತಂತ್ರವನ್ನು ನಿಷೇಧಿಸಿತ್ತು. ಈ ತಂತ್ರಗಾರಿಕೆಯಲ್ಲಿ ಕಾರ್ಮಿಕರ ಜೀವ ರಕ್ಷಣೆಗೆ ಯಾವುದೇ ರೀತಿಯ ಭರವಸೆ ಇಲ್ಲ. ನಿರ್ಮಾಣ ಸ್ಥಳಗಳಲ್ಲಿ, ಪರಿಸ್ಥಿತಿಯು ಯಾವಾಗಲೂ ಕಾರ್ಮಿಕರಿಗೆ ಅನುಕೂಲಕರವಾಗಿರುವುದಿಲ್ಲ ಎಂದು ಹೇಳಿ ಈ ರ‍್ಯಾಟ್ ಹೋಲ್ ತಂತ್ರಗಾರಿಕೆಯನ್ನು ಅವೈಜ್ಞಾನಿಕ ಎಂದು ಘೋಷಿಸಿ ನಿಷೇಧ ಹೇರಿತ್ತು. ಆದರೆ ನಿರ್ಮಾಣ ಚಟುವಟಿಕೆಗಳಲ್ಲಿ ಈ ತಂತ್ರದ ಬಳಕೆ ಈಗಲೂ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಷ್ಟಕ್ಕೂ ಏನಿದು ರ‍್ಯಾಟ್ ಹೋಲ್ ಗಣಿಗಾರಿಕೆ?
ರ‍್ಯಾಟ್ ಹೋಲ್ ಗಣಿಗಾರಿಕೆಯು ಕಲ್ಲಿದ್ದಲನ್ನು ಹೊರತೆಗೆಯುವ ಒಂದು ವಿಧಾನವಾಗಿದ್ದು, 4 ಅಡಿಗಿಂತ ಹೆಚ್ಚು ಅಗಲವಿಲ್ಲದ ಅತ್ಯಂತ ಚಿಕ್ಕ ಹೊಂಡಗಳನ್ನು ಅಗೆದು ಅಲ್ಲಿ ಬರಿಗೈಯಿಂದಲೇ ಚಿಕ್ಕ-ಪುಟ್ಟ ಸಲಕರಣೆಗಳಿಂದ ಕಲ್ಲಿದ್ದಲನ್ನು ಹೊರತೆಗೆಯಲಾಗುತ್ತದೆ. ನಿಗಧಿತ ಗುರಿಯ ಜಾಗ ತಲುಪಿದ ನಂತರ ಅಲ್ಲಿ ಸುರಂಗ ತೆಗೆದು ಅಲ್ಲಿಂದ ಕಲ್ಲಿದ್ದಲನ್ನು ಹೊರ ಹಾಕಲಾಗುತ್ತದೆ. ನಂತರ ಹೆದ್ದಾರಿಗಳ ಮೂಲಕ ಸಾಗಿಸಲಾಗುತ್ತದೆ. ರ‍್ಯಾಟ್ ಹೋಲ್ ಗಣಿಗಾರಿಕೆಯಲ್ಲಿ ಕಾರ್ಮಿಕರು ಗಣಿಗಳನ್ನು ಪ್ರವೇಶಿಸಿ ಬರಿಗೈಯಿಂದಲೇ  ಅಗೆಯಲು ಕೈಯಲ್ಲಿ ಹಿಡಿಯುವ ಸಾಧನಗಳನ್ನು ಅಗೆಯಲು ಬಳಸುತ್ತಾರೆ. ಇದು ಮೇಘಾಲಯದಲ್ಲಿ ಗಣಿಗಾರಿಕೆಯ ಅತ್ಯಂತ ಸಾಮಾನ್ಯ ವಿಧಾನವಾಗಿದೆ. 

ಅಪಾಯಕಾರಿ ತಂತ್ರಗಾರಿಕೆ
ಆದರೆ ಇದೊಂದು ಅಪಾಯಕಾರಿ ತಂತ್ರಗಾರಿಕೆಯಾಗಿದ್ದು, ಇಲ್ಲಿ ಸಣ್ಣ ಗಾತ್ರದ ಸುರಂಗ ಮಾಡುವುದರಿಂದ ಮಳೆಗಾಲದಲ್ಲಿ ಇದು ಅತ್ಯಂತ ಅಪಯಾಕಾರಿಯಾಗಿರುತ್ತದೆ. ಸಣ್ಣ ಸಣ್ಣ ರಂದ್ರಗಳನ್ನು ಕೊರೆದು ಅದರೊಳಗೆ ಹೋಗಿ ಕಾರ್ಮಿಕರು ಕೆಲಸ ಮಾಡುವುದರಿಂದ ಮಳೆ ಬಂದಾಗ ಈ ರಂದ್ರದೊಳಗೆ ನೀರು ನುಗ್ಗಿ ಕಾರ್ಮಿಕರು ಸಾವನ್ನಪ್ಪುವ ಅಪಾಯವಿರುತ್ತದೆ. ಇಂತಹ ಅಪಾಯಕಾರಿ ಗಣಿಕಾರಿಕೆಯಲ್ಲಿ ಸಾಮಾನ್ಯವಾಗಿ ಬಡವರು ಮತ್ತು ಬಡ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿತ್ತು. ಜೀವನೋಪಾಯಕ್ಕಾಗಿ ಸೀಮಿತ ಆಯ್ಕೆಗಳನ್ನು ಹೊಂದಿರುವ ಈಶಾನ್ಯ ರಾಜ್ಯಗಳಲ್ಲಿ, ಅನೇಕರು ಈ ಅಪಾಯಕಾರಿ ಕೆಲಸಕ್ಕೆ ತೆರಳುತ್ತಾರೆ. ಇದೇ ಕಾರಣಕ್ಕೆ ಎನ್ ಜಿಟಿ ಈ ರ‍್ಯಾಟ್ ಹೋಲ್ ಗಣಿಕಾರಿಕೆಯನ್ನು ನಿಷೇಧಿಸಿದೆ.

ಹಲವರ ಸಾವು
ಇನ್ನು ಈ ರ‍್ಯಾಟ್ ಹೋಲ್ ಗಣಿಕಾರಿಕೆ ವೇಳೆ ದೇಶದ ನಾನಾ ಭಾಗಗಳಲ್ಲಿ ಹಲವು ಸಾವುಗಳು ವರದಿಯಾಗಿವೆ. 2018 ರಲ್ಲಿ, ಈ ರ‍್ಯಾಟ್ ಹೋಲ್ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ 15 ಪುರುಷರು ಸಾವನ್ನಪ್ಪಿದ್ದರು. ಇವರು ಕೆಲಸ ಮಾಡುತ್ತಿದ್ದ ವೇಳೆ ಪ್ರವಾಹ ಉಂಟಾಗಿ ಪ್ರವಾಹದ ನೀರು ಇವರು ಕೆಲಸ ಮಾಡುತ್ತಿದ್ದ ಸುರಂಗದೊಳಗೆ ನುಗ್ಗಿ ಇವರು ಜಲಸಮಾಧಿಯಾಗಿದ್ದರು. ಬರೊಬ್ಬರಿ ಎರಡು ತಿಂಗಳಿಗೂ ಅಧಿಕ ಹೆಚ್ಚು ಕಾಲ ನಡೆದ ರಕ್ಷಣಾ ಕಾರ‍್ಯಾಚರಣೆಯಲ್ಲಿ ಸಿಬ್ಬಂದಿಗಳು ಕೇವಲ ಎರಡು ಮೃತದೇಹಗಳನ್ನು ಮಾತ್ರ ಹೊರತೆಗೆಯಲು ಸಾಧ್ಯವಾಯಿತು. ಅಂತೆಯೇ 2021 ರಲ್ಲಿ ಐದು ಗಣಿಗಾರರು ಇದೇ ರೀತಿಯ ರ‍್ಯಾಟ್ ಹೋಲ್ ಗಣಿಕಾರಿಕೆ ವೇಳೆ ಪ್ರವಾಹಕ್ಕೆ ಸಿಲುಕಿದ ಗಣಿಯಲ್ಲಿ ಸಿಕ್ಕಿಹಾಕಿಕೊಂಡು ಸಾವನ್ನಪ್ಪಿದ್ದರು. ಇಲ್ಲಿ ಸಿಕ್ಕಿಬಿದ್ದವರಿಗಾಗಿ ಬರೊಬ್ಬರಿ ಒಂದು ತಿಂಗಳ ರಕ್ಷಣಾ ಕಾರ‍್ಯಾಚರಣೆ ನಡೆಸಲಾಗಿತ್ತು. ಈ ಒಂದು ತಿಂಗಳ ಅವಧಿಯಲ್ಲಿ ರಕ್ಷಣಾ ತಂಡಗಳು ಕೇವಲ ಮೂರು ಶವಗಳನ್ನು ಮಾತ್ರ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com