
2 ಕುಟುಂಬಗಳ ನಡುವೆ ಮಾರಾಮಾರಿ
ಲಖನೌ: 2 ಕುಟುಂಬಗಳ ನಡುವಿನ ಭೂ ವಿವಾದ ಸಂಘರ್ಷಕ್ಕೆ ಕಾರಣವಾಗಿ, 6 ಮಂದಿಯ ಕೊಲೆಯಲ್ಲಿ ಅಂತ್ಯವಾಗಿರುವ ಧಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ರುದ್ರಾಪುರ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಫತೇಪುರ್ ಗ್ರಾಮದಲ್ಲಿ ಈ ಭಯಾನಕ ಘಟನೆ ನಡೆದಿದ್ದು, ಮಾರಾಮಾರಿ ಬಳಿಕ ಇಡೀ ಪ್ರದೇಶವೇ ರಕ್ತಸಿಕ್ತವಾಗಿ ಬದಲಾಗಿದೆ. ಇದುವರೆಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೇರಿ ಒಟ್ಟು 6 ಮಂದಿ ಮೃತಪಟ್ಟಿದ್ದಾರೆ. ಎರಡು ಕುಟುಂಬಗಳ ಮಧ್ಯೆ ಇದ್ದ ಜಮೀನು ವಿವಾದವೇ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.
ಇದನ್ನೂ ಓದಿ: ಮಾವೋವಾದಿಗಳೊಂದಿಗೆ ನಂಟು: ಆಂಧ್ರ ಪ್ರದೇಶ, ತೆಲಂಗಾಣದ 60 ಕಡೆ NIA ದಾಳಿ
ಮೂಲಗಳ ಪ್ರಕಾರ ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ಜಮೀನಿಗೆ ಸಂಬಂಧಿಸಿದಂತೆ ಅನೇಕ ವರ್ಷಗಳಿಂದ ವಿವಾದವಿತ್ತು ಎನ್ನಲಾಗಿದೆ. ಇಂದು (ಸೋಮವಾರ) ಬೆಳಗ್ಗೆ 8.30ರ ಸುಮಾರಿಗೆ ಎರಡು ಕುಟುಂಬಗಳ ನಡುವೆ ಮತ್ತೆ ಜಗಳ ಆರಂಭವಾಗಿದೆ. ಈ ಜಗಳ ತಾರಕಕ್ಕೇರಿ ಎರಡೂ ಕಡೆಯವರು ಕೋಲು, ಹರಿತವಾದ ಆಯುಧಗಳಿಂದ ಕೊಚ್ಚಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಸ್ವಲ್ಪ ಸಮಯದ ನಂತರ ಎರಡೂ ಕಡೆಯವರು ಬಂದೂಕು ತಂದು ಗುಂಡು ಹಾರಿಸಲು ಆರಂಭಿಸಿದ್ದಾರೆ.
ಜಿಲ್ಲಾಡಳಿತದಿಂದ ಈ ವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ಒಂದೇ ಕುಟುಂಬದ ಐವರು ಸಾವನ್ನಪ್ಪಿದರೆ, ಮತ್ತೊಂದು ಕುಟುಂಬದ ಒಬ್ಬ ಸದಸ್ಯ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಮನೆ ಮಾಲೀಕ, ಅವರ ಪತ್ನಿ, ಇಬ್ಬರು ಹೆಣ್ಣುಮಕ್ಕಳು ಮತ್ತು ಒಂದು ಕಡೆಯ ಒಬ್ಬ ಮಗ ಸತ್ತಿದ್ದಾನೆ. ಇನ್ನೊಂದು ಬದಿಯ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ದೆಹಲಿ ಪೊಲೀಸರಿಂದ ಮಹತ್ತರ ಕಾರ್ಯಾಚರಣೆ: ಮೋಸ್ಟ್ ವಾಂಟೆಡ್ ಐಸಿಸ್ ಉಗ್ರನ ಬಂಧನ
ಘಟನೆ ಬಗ್ಗೆ ಮಾಹಿತಿ ಬಂದ ತಕ್ಷಣ ಪೊಲೀಸರೂ ಆತಂಕಗೊಂಡಿದ್ದು, ಡಿಎಂ, ಎಸ್ಪಿ ಸೇರಿದಂತೆ ಹಲವು ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಹಲವು ಠಾಣೆಗಳಿಂದ ಪೊಲೀಸರನ್ನು ಕರೆಸಲಾಗಿದ್ದು, ಸದ್ಯ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.