ಉದ್ಯೋಗಕ್ಕಾಗಿ ಭೂ ಹಗರಣ: ಲಾಲು ಪ್ರಸಾದ್ ಯಾದವ್, ರಾಬ್ರಿ ದೇವಿ, ತೇಜಸ್ವಿ ಯಾದವ್‌ಗೆ ಜಾಮೀನು ಮಂಜೂರು

ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಮತ್ತು ಅವರ ಪುತ್ರ, ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಮತ್ತು ಪುತ್ರಿ ಆರ್‌ಜೆಡಿ ಸಂಸದೆ ಮಿಸಾ ಭಾರ್ತಿ ಅವರಿಗೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ.
ಲಾಲೂ ಪ್ರಸಾದ್ ಯಾದವ್
ಲಾಲೂ ಪ್ರಸಾದ್ ಯಾದವ್

ನವದೆಹಲಿ: ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿರುವ ಪ್ರಕರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಮತ್ತು ಅವರ ಪುತ್ರ, ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಮತ್ತು ಪುತ್ರಿ ಆರ್‌ಜೆಡಿ ಸಂಸದೆ ಮಿಸಾ ಭಾರ್ತಿ ಅವರಿಗೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ.

ಜುಲೈ 3ರಂದು ಸಲ್ಲಿಸಲಾದ ಹೊಸ ಆರೋಪಪಟ್ಟಿಯನ್ನು ಸ್ವೀಕರಿಸಿದ ನಂತರ ಪ್ರಕರಣಕ್ಕೆ ಸಂಬಂಧಿಸಿದ ಇತರ 14  ಆರೋಪಿಗಳೊಂದಿಗೆ ನ್ಯಾಯಾಲಯದಲ್ಲಿ ಹಾಜರಾಗುವಂತೆ ನ್ಯಾಯಾಲಯವು ಈ ಮೊದಲು ಅವರಿಗೆ ಸಮನ್ಸ್ ನೀಡಿತ್ತು.
50,000 ವೈಯಕ್ತಿಕ ಬಾಂಡ್ ಮೇಲೆ ನ್ಯಾಯಾಲಯ ಜಾಮೀನು ನೀಡಿದೆ. ರಾಷ್ಟ್ರ ರಾಜಧಾನಿಯ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ಯಾದವ್ ಕುಟುಂಬ ಮತ್ತು ಇತರ ಆರೋಪಿಗಳು ಹಾಜರಿದ್ದರು.

ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಅವರ ತಂದೆ, ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್, ತಾಯಿ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ವಿರುದ್ಧ ದಾಖಲಾಗಿರುವ ಉದ್ಯೋಗಕ್ಕಾಗಿ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎರಡನೇ ಚಾರ್ಜ್‌ಶೀಟ್ ಸಲ್ಲಿಸಿತ್ತು. 

ಚಾರ್ಜ್‌ಶೀಟ್‌ನಲ್ಲಿ ಒಟ್ಟು 14 ಜನರನ್ನು ಹೆಸರಿಸಲಾಗಿದೆ. ಮೊದಲ ಆರೋಪಪಟ್ಟಿ ಸಲ್ಲಿಸಿದ ಬಳಿಕ ಸಂಗ್ರಹಿಸಲಾದ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಆಧರಿಸಿ ಎರಡನೇ ಆರೋಪಪಟ್ಟಿ ಸಲ್ಲಿಸಲಾಗಿದೆ. ಲಾಲು ಕುಟುಂಬದ ಜೊತೆಗೆ, ಎಕೆ ಇನ್ಫೋಸಿಸ್ಟಮ್ಸ್ ಮತ್ತು ಕೆಲವು ಮಧ್ಯವರ್ತಿಗಳ ಹೆಸರನ್ನೂ ಉಲ್ಲೇಖಿಸಲಾಗಿದೆ.

ಲಾಲು ಪ್ರಸಾದ್ ಯಾದವ್ ಅವರು 2004 ಮತ್ತು 2009 ರ ಅವಧಿಯಲ್ಲಿ ರೈಲ್ವೆ ಸಚಿವರಾಗಿದ್ದಾಗ ಅವರ ಕುಟುಂಬಕ್ಕೆ ಉಡುಗೊರೆಯಾಗಿ ನೀಡಿದ ಅಥವಾ ಮಾರಾಟ ಮಾಡಿದ ಜಮೀನುಗಳಿಗೆ ಪ್ರತಿಯಾಗಿ ರೈಲ್ವೆಯಲ್ಲಿ ನೇಮಕಾತಿ ಮಾಡಲಾಗಿದೆ. ಜಾಹೀರಾತು ನೀಡದೆ ಅಥವಾ ಸಾರ್ವಜನಿಕರ ಗಮನಕ್ಕೂ ತಾರದೆ ತಮ್ಮ ನೆಚ್ಚಿನ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗಿದೆ. ಈ ನೇಮಕಾತಿಗಾಗಿ ಭಾರತೀಯ ರೈಲ್ವೆಯ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲಂಘಿಸಲಾಗಿದೆ ಎಂದು ಸಿಬಿಐ ಆರೋಪಿಸಿದೆ.

ಆರೋಪಿಗಳಾದ ಮಹೀಪ್ ಕಪೂರ್, ಮನೋಜ್ ಪಾಂಡೆ ಮತ್ತು ಪಿಎಲ್ ಬಣಕಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅಗತ್ಯ ಅನುಮೋದನೆಗಳನ್ನು ಪಡೆಯಲಾಗಿದೆ ಎಂದು ವಿಶೇಷ ನ್ಯಾಯಾಧೀಶರಾದ ಗೀತಾಂಜಲಿ ಗೋಯೆಲ್ ಅವರ ಮುಂದೆ ಸಿಬಿಐ ತಿಳಿಸಿತು.

ಸಿಬಿಐ ಸಲ್ಲಿಸಿರುವ ಚಾರ್ಜ್ ಶೀಟ್ ಅನ್ನು ಪರಿಗಣಿಸಬೇಕೆ, ಬೇಡವೇ ಎಂಬುದನ್ನು ನಿರ್ಧರಿಸಲು ಶುಕ್ರವಾರ ಈ ವಿಷಯವನ್ನು ಮತ್ತಷ್ಟು ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.

ಮುಂಬೈ, ಜಬಲ್‌ಪುರ್, ಕೋಲ್ಕತ್ತಾ, ಜೈಪುರ ಮತ್ತು ಹಾಜಿಪುರದಲ್ಲಿರುವ ವಿವಿಧ ವಲಯ ರೈಲ್ವೆಗಳಲ್ಲಿ ಪಾಟ್ನಾದಿಂದ ಬದಲಿಗಳನ್ನು ನೇಮಿಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಅಭ್ಯರ್ಥಿಗಳು ನೇರವಾಗಿ ಅಥವಾ ಅವರ ಹತ್ತಿರದ ಕುಟುಂಬದ ಸದಸ್ಯರ ಮೂಲಕ ಪ್ರಸಾದ್ ಅವರ ಕುಟುಂಬ ಸದಸ್ಯರಿಗೆ ಹೆಚ್ಚಿನ ರಿಯಾಯಿತಿ ದರದಲ್ಲಿ ಭೂಮಿಯನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com