ನವದೆಹಲಿ: ಗಾಜಾ ಆಸ್ಪತ್ರೆ ಮೇಲೆ ನಡೆದ ಅಮಾನುಷ ದಾಳಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೀವ್ರವಾಗಿ ಖಂಡಿಸಿದ್ದು, ಭಾಗಿಯಾದವರು ಹೊಣೆ ಹೊರಬೇಕು ಎಂದು ಬುಧವಾರ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಸಂಘರ್ಷದಲ್ಲಿ ನಾಗರೀಕರ ಸಾವು-ನೋವುಗಳು ಕಳವಳಕಾರಿ ವಿಚಾರವಾಗಿದೆ. ದಾಳಿಯಲ್ಲಿ ಭಾಗಿಯಾದವರು ಹೊಣೆ ಹೊರಬೇಕು ಎಂದು ಹೇಳಿದ್ದಾರೆ.
ಗಾಜಾದ ಅಲ್ ಅಹ್ಲಿ ಆಸ್ಪತ್ರೆಯಲ್ಲಿ ಸಂಭವಿಸಿದ ದುರಂತದಲ್ಲಿ ಜೀವಹಾನಿಯ ಬಗ್ಗೆ ತೀವ್ರ ಆಘಾತವಾಗಿದೆ. ಸಂತ್ರಸ್ತರ ಕುಟುಂಬಗಳಿಗೆ ಸಂತಾಪಗಳನ್ನು ಸೂಚಿಸುತ್ತೇನೆ. ಗಾಯಗೊಂಡವರು ಶೀಘ್ರಗತಿಯಲ್ಲಿ ಗುಣಮುಖರಾಗಲಿ ಎಂದು ತಿಳಿಸಿದ್ದಾರೆ.
ದಕ್ಷಿಣ ಗಾಜಾದಲ್ಲಿರುವ ಅಲ್ ಅಹ್ಲಿ ಆಸ್ಪತ್ರೆಯ ಮೇಲೆ ಮಂಗಳವಾರ ವೈಮಾನಿಕ ದಾಳಿ ನಡೆದಿದ್ದು, ಘಟನೆಯಲ್ಲಿ 500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ವೈಮಾನಿಕ ದಾಳಿಯನ್ನು ಇಸ್ರೇಲ್ ಪಡೆಯೇ ನಡೆಸಿದೆ ಎಂದು ಆರಂಭದಲ್ಲಿ ಹೇಳಲಾಗುತ್ತಿತ್ತು. ಆದರೀಗ ಇಸ್ರೇಲ್ ರಕ್ಷಣಾ ಪಡೆ ದಾಳಿಯಲ್ಲಿ ನಮ್ಮ ಪಾತ್ರವಿಲ್ಲ. ಹಮಾಸ್ ಭಯೋತ್ಪಾದರೇ ದಾಳಿ ನಡೆಸಿದ್ದು, ನಮ್ಮ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಹಮಾಸ್ ಉಗ್ರರೇ ದಾಳಿ ನಡೆಸಿದ್ದಾರೆಂಬುದಕ್ಕೆ ನಮ್ಮ ಬಳಿ ಸಾಕ್ಷಿ ಇದೆ ಎಂದು ಹೇಳಿದೆ.
ಇಸ್ರೇಲ್- ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಸುಮಾರು ನೂರು ವರ್ಷಗಳಿಂದ ನಡೆಯುತ್ತಿದೆ. ವೆಸ್ಟ್ ಬ್ಯಾಂಕ್, ಗಾಜಾ ಪಟ್ಟಿ ಮತ್ತು ಗೋಲನ್ ಹೈಟ್ಸ್ ಇನ್ನಿತರ ಪ್ರದೇಶಗಳ ಮೇಲಿನ ಹಕ್ಕಿನ ಬಗ್ಗೆ ಎರಡೂ ರಾಷ್ಟ್ರಗಳ ನಡುವೆ ವಿವಾದ ಇದೆ. ಪೂರ್ವ ಜೆರುಸಲೆಮ್ ಸೇರಿ ಈ ಪ್ರದೇಶಗಳನ್ನು ಪ್ಯಾಲೆಸ್ತೀನ್ ತನ್ನದು ಎಂದು ಹೇಳಿಕೊಳ್ಳುತ್ತಿದೆ. ಆದರೆ ಇಸ್ರೇಲ್ ಜೆರುಸಲೆಮ್ ಮೇಲಿನ ಹಕ್ಕನ್ನು ಸಾಧಿಸುತ್ತಿದೆ.
ಗಾಜಾ ಪಟ್ಟಿ ಇಸ್ರೇಲ್ ಮತ್ತು ಈಜಿಪ್ಟ್ ನಡುವೆ ಇದೆ. ಈ ಸ್ಥಳವು ಪ್ರಸ್ತುತ ಹಮಾಸ್ ಉಗ್ರರ ನಿಯಂತ್ರಣದಲ್ಲಿದೆ. ಹಮಾಸ್ ಎಂಬುದು ಇದು ಇಸ್ರೇಲ್ ವಿರೋಧಿ ಗುಂಪು. ಸೆಪ್ಟೆಂಬರ್ 2005 ರಲ್ಲಿ ಇಸ್ರೇಲ್, ಗಾಜಾ ಪಟ್ಟಿಯಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಂಡಿತು. ನಂತರ ಈ ಪ್ರದೇಶದ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿತು. ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯಲ್ಲಿ ಸ್ವತಂತ್ರ ಪ್ಯಾಲೆಸ್ಟೈನ್ ರಾಜ್ಯವನ್ನು ಸ್ಥಾಪಿಸಬೇಕು ಎಂದು ಪ್ಯಾಲೆಸ್ತೀನ್ ಹೋರಾಟ ನಡೆಸುತ್ತಿದೆ.
ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿ, 1,200 ಮಂದಿಯನ್ನು ಹತ್ಯೆ ಮಾಡಿದ್ದರು. ಈ ದಾಳಿಗೆ ಪ್ರತೀಕಾರವಾಗಿ ಹಮಾಸ್ ಅನ್ನು ನಾಶ ಮಾಡುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದಾರೆ.
ಉಭಯ ರಾಷ್ಟ್ರಗಳ ನಡುವೆ ಯುದ್ಧ ಆರಂಭವಾದಾಗಿನಿಂದ ಪ್ಯಾಲೆಸ್ಟೀನ ನಲ್ಲಿ 2,778 ಮಂದಿ ಹಾಗೂ ಇಸ್ರೇಲಿನಲ್ಲಿ ಕನಿಷ್ಠ 1,400 ಮಂದಿ, ಮತ್ತು ವಿದೇಶಿ ಪ್ರಜೆಗಳು ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ.
Advertisement