ಸನಾತನ ಧರ್ಮದ ಕುರಿತು ಉದಯನಿಧಿ ಹೇಳಿಕೆ: 'INDIA' ಮೈತ್ರಿಕೂಟದ ವಿರುದ್ಧ ಅಮಿತ್ ಶಾ, ಜೆಪಿ ನಡ್ಡಾ ಕಿಡಿ

ಸನಾತನ ಧರ್ಮದ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಅವರು ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ವಿರೋಧ ಪಕ್ಷಗಳ ಒಕ್ಕೂಟವಾದ INDIA ವಿರುದ್ಧ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭಾನುವಾರ ವಾಗ್ದಾಳಿ ನಡೆಸಿದ್ದಾರೆ. 
ಅಮಿತ್ ಶಾ
ಅಮಿತ್ ಶಾ

ಜೈಪುರ: ಸನಾತನ ಧರ್ಮದ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಅವರು ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ವಿರೋಧ ಪಕ್ಷಗಳ ಒಕ್ಕೂಟವಾದ INDIA ವಿರುದ್ಧ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭಾನುವಾರ ವಾಗ್ದಾಳಿ ನಡೆಸಿದ್ದಾರೆ. 

ಮತಬ್ಯಾಂಕ್ ಮತ್ತು ತುಷ್ಟೀಕರಣ ರಾಜಕೀಯಕ್ಕಾಗಿ 'ಸನಾತನ ಧರ್ಮ'ವನ್ನು ಅವಮಾನಿಸಿದ್ದಾರೆ ಎಂದು ಶಾ ಆರೋಪಿಸಿದ್ದಾರೆ.
'ಸನಾತನ ಧರ್ಮ' ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಸನಾತನ ಧರ್ಮವನ್ನು ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಬೇಕು ಎಂದು ತಮಿಳುನಾಡು ಯುವ ಕಲ್ಯಾಣ ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.

ರಾಜಸ್ಥಾನದ ಡುಂಗರ್‌ಪುರದಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಅವರು, 'ತಮಿಳುನಾಡು ಮುಖ್ಯಮಂತ್ರಿ ಪುತ್ರ ಉದಯನಿಧಿ ಸ್ಟಾಲಿನ್ ಸೇರಿದಂತೆ ಡಿಎಂಕೆ ನಾಯಕರು ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳುತ್ತಿದ್ದಾರೆ. ಈ ಜನರು ಮತಬ್ಯಾಂಕ್ ಓಲೈಕೆಗಾಗಿ 'ಸನಾತನ ಧರ್ಮ'ದ ಬಗ್ಗೆ ಮಾತನಾಡಿದ್ದಾರೆ. ಅವರು 'ಸನಾತನ ಧರ್ಮ'ವನ್ನು ಅವಮಾನಿಸಿದ್ದಾರೆ' ಎಂದು ದೂರಿದರು. 

ಇಂಡಿಯಾ ಮೈತ್ರಿಕೂಟವನ್ನು 'ಘಮಾಂಡಿಯ ಘಟಬಂಧನ್' ಎಂದು ಕರೆದ ಶಾ, ಈ ಮೈತ್ರಿಕೂಟವು ಮತಬ್ಯಾಂಕ್ ರಾಜಕೀಯಕ್ಕಾಗಿ ಯಾವುದೇ ಹಂತಕ್ಕೆ ಬೇಕಾದರೂ ಹೋಗಲು ಸಿದ್ಧವಾಗಿದೆ. ಅವರು 'ಸನಾತನ ಧರ್ಮದ' ವಿರುದ್ಧ ಹೆಚ್ಚೆಚ್ಚು ಮಾತನಾಡುತ್ತಾರೆ. ಆದರೆ, ಕಡಿಮೆ ಗೋಚರಿಸುತ್ತಾರೆ ಎಂದು ಹೇಳಿದರು.

'ಮೋದಿ ಗೆದ್ದರೆ 'ಸನಾತನ' ಆಡಳಿತ ಬರುತ್ತದೆ ಎಂದು ಅವರು ಹೇಳುತ್ತಾರೆ. 'ಸನಾತನ' ಜನರ ಹೃದಯವನ್ನು ಆಳುತ್ತಿದೆ. ಮೋದಿ ಅವರು ಸಂವಿಧಾನದ ಆಧಾರದ ಮೇಲೆ ದೇಶವನ್ನು ನಡೆಸುತ್ತಾರೆ. ಪ್ರಧಾನಿ ರಾಷ್ಟ್ರದ ಭದ್ರತೆಗೆ ಶ್ರಮಿಸುತ್ತಿದ್ದಾರೆ ಎಂದರು.
ರಾಮ ಮಂದಿರ ವಿಚಾರವಾಗಿ ಕಾಂಗ್ರೆಸ್‌ ವರ್ಷಗಳಿಂದ ದೇವಸ್ಥಾನಕ್ಕೆ ತಡೆ ಒಡ್ಡಿತ್ತು. ಆದರೆ, ಸುಪ್ರೀಂ ಕೋರ್ಟ್‌ ಆದೇಶದ ನಂತರ ಮೋದಿ ಅವರು ದೇಗುಲ ನಿರ್ಮಾಣಕ್ಕೆ ಭೂಮಿಪೂಜೆ ಮಾಡಿದ್ದು, ರಾಮ ಹುಟ್ಟಿದ ನೆಲದಲ್ಲಿಯೇ ಜನವರಿಯಲ್ಲಿ ಭವ್ಯ ಮಂದಿರ ನಿರ್ಮಾಣವಾಗಲಿದೆ. ಅದನ್ನು ತಡೆಯಲು ಇಂಡಿಯಾ ಮೈತ್ರಿಗೆ ಸಾಧ್ಯವಿಲ್ಲ ಎಂದರು.

ಉದಯನಿಧಿ ಹೇಳಿಕೆ INDIAದ ರಾಜಕೀಯ ತಂತ್ರದ ಭಾಗ: ಜೆಪಿ ನಡ್ಡಾ

ಚಿತ್ರಕೂಟ: 'ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಅವರು 'ಸನಾತನ ಧರ್ಮ' ಮಲೇರಿಯಾ, ಡೆಂಗ್ಯು ಇದ್ದಂತೆ. ಹಾಗಾಗಿ, ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದಾರೆ. ಈ ರೀತಿಯ ಹೇಳಿಕೆ ನೀಡಲು ಅವರಿಗೆ ಯಾವುದೇ ಹಿಂಜರಿಕೆ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕಿಡಿಕಾರಿದ್ದಾರೆ.

ಉದಯನಿಧಿ ಅವರು ಇಂತಹ ಹೇಳಿಕೆ ನೀಡಿರುವುದು ಇಂಡಿಯಾ ಮೈತ್ರಿಕೂಟದ ರಾಜಕೀಯ ತಂತ್ರದ ಭಾಗವಾಗಿದೆ. ಹಾಗಿದ್ದರೆ, ನೀವು ಮುಂಬರುವ ಚುನಾವಣೆಯಲ್ಲಿ ಈ ಹಿಂದೂ ವಿರೋಧಿ ತಂತ್ರವನ್ನು ಬಳಸುತ್ತೀರಾ?. ನಮ್ಮ ದೇಶಕ್ಕೆ ಸಂಬಂಧಿಸಿದ ಎಲ್ಲವನ್ನೂ ನೀವು ದ್ವೇಷಿಸುತ್ತೀರಿ ಎಂಬುದನ್ನು ಹಲವು ಬಾರಿ ಸಾಬೀತುಪಡಿಸಿದ್ದೀರಿ. 'ಮೊಹಬ್ಬತ್ ಕಿ ದುಕಾನ್' ದ್ವೇಷವನ್ನು ಹರಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com