ಇಬ್ಬರು ಮುಸ್ಲಿಂ ವ್ಯಕ್ತಿಗಳ ಹತ್ಯೆ ಪ್ರಕರಣ: ಗೋ ರಕ್ಷಕ ಮೋನು ಮಾನೇಸರ್ ಬಂಧನ!
ಹರಿಯಾಣ: ರಾಜಸ್ಥಾನದ ಇಬ್ಬರು ಮುಸ್ಲಿಂ ವ್ಯಕ್ತಿಗಳ ಹತ್ಯೆ ಹಾಗೂ ಜುಲೈನಲ್ಲಿ ನುಹ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಗೋರಕ್ಷಕ ಮೋನು ಮಾನೇಸರ್‌ನನ್ನು ಮಂಗಳವಾರ ಹರಿಯಾಣ ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿಯಲ್ಲಿ ಹರಿಯಾಣದಲ್ಲಿ ಕಾರಿನಲ್ಲಿ ರಾಜಸ್ಥಾನದ ಇಬ್ಬರು ಮುಸ್ಲಿಂ ವ್ಯಕ್ತಿಗಳ ಶವಗಳು ಪತ್ತೆಯಾಗಿತ್ತು.
ಈ ಪ್ರಕರಣದಲ್ಲಿ ಮನೇಸರ್ ಪ್ರಮುಖ ಆರೋಪಿಯಾಗಿದ್ದು, ಬಂಧನದ ನಂತರ ಆತನನ್ನು ರಾಜಸ್ಥಾನ ಪೊಲೀಸರ ವಶಕ್ಕೆ ನೀಡಲಾಗಿದೆ. ಬಜರಂಗದಳದ ಪ್ರಮುಖ ನಾಯಕ ಹಾಗೂ ಹರಿಯಾಣದ ಗುರುಗ್ರಾಮ್ ಆಡಳಿತದ ವಿಶೇಷ ಗೋಸಂರಕ್ಷಣಾ ಕಾರ್ಯಪಡೆಯ ಸದಸ್ಯನಾಗಿರುವ ಮಾನೇಸರ್, ಹತ್ಯೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವುದು ಪತ್ತೆಯಾಗಿಲ್ಲ ಎಂದು ಪೊಲೀಸರು ಒಪ್ಪಿಕೊಂಡಿದ್ದಾರೆ.
ಜುಲೈ 31 ರಂದು ನುಹ್ ನಲ್ಲಿ ನಡೆದ ಜಲಾಭಿಷೇಕ ಯಾತ್ರೆಯಲ್ಲಿ ಮಾನೇಸರ್ ಭಾಗಿಯಾಗಿ ಪ್ರಚೋದನೆ ನೀಡಿದ್ದರಿಂದ ಏಳು ಮಂದಿ ಸಾವನ್ನಪ್ಪಿದ್ದರು ಎಂಬುದಾಗಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದರೆ ಮತ್ತೆ ಕೆಲವರು ಈತ ಪಾಲ್ಗೊಂಡಿರಲಿಲ್ಲ. ಮುಸ್ಲಿಂರು ಹಿಂಸಾಚಾರ ನಡೆಸಿ ಹಿಂದೂ ಭಕ್ತರ ಮೇಲೆ ದಾಳಿ ನಡೆಸಿದ್ದಾಗಿ ಪ್ರತಿಕ್ರಿಯಿಸಿದ್ದರು.
ಶೋಭಾ ಯಾತ್ರೆಗೆ ಅಡ್ಡಿಪಡಿಸಲು ಮುಸ್ಲಿಂರು ಮನೇಸರ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ನೆಪವನ್ನು ಬಳಸಿದ್ದಾರೆ ಎಂದು ಹಿಂಸಾಚಾರದ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.