'ಅವರೇ ಬೇರೆಯವರನ್ನು ಖಿನ್ನತೆಗೆ ತಳ್ಳುತ್ತಾರೆ, ಎಲ್ಲಾ ನಾಟಕವಷ್ಟೇ': ಕೋಟಾದ ಜೆಇಇ ಮತ್ತು ನೀಟ್‌ ವಿದ್ಯಾರ್ಥಿಗಳ ಪೋಷಕರ ನಿರ್ಲಕ್ಷ್ಯ!

ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ಕಾರ್ಖಾನೆಯೆಂದೇ ಪ್ರಸಿದ್ಧವಾಗಿರುವ ರಾಜಸ್ಥಾನದ ಕೋಟಾದಲ್ಲಿ ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ಖಿನ್ನತೆ (ಸಾಂಕೇತಿಕ ಚಿತ್ರ)
ಖಿನ್ನತೆ (ಸಾಂಕೇತಿಕ ಚಿತ್ರ)

ಕೋಟಾ: ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ಕಾರ್ಖಾನೆಯೆಂದೇ ಪ್ರಸಿದ್ಧವಾಗಿರುವ ರಾಜಸ್ಥಾನದ ಕೋಟಾದಲ್ಲಿ ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಲು ಕ್ರಮ ಕೈಗೊಂಡಿರುವ ಪೊಲೀಸರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಕಾರ, ಇಲ್ಲಿ ತರಬೇತಿ ಪಡೆಯಲು ಬಂದ ಮಕ್ಕಳಿಗೆ ವಾಪಸ್ ಬರುವ  ಪ್ರಶ್ನೆಯೇ ಇಲ್ಲ ಎಂದು ಹೇಳುತ್ತಿರುವುದು ಒತ್ತಡವಾಗಿ ಪರಿಣಮಿಸಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಕಾರಣವಾಗುತ್ತಿದೆ.

ಇಲ್ಲಿನ ಟಾಪ್ ತರಬೇತಿ ಸಂಸ್ಥೆಗಳೂ ಸಹ ವಿದ್ಯಾರ್ಥಿಗಳ ಬಗ್ಗೆ ಅವರ ಪೋಷಕರಿಗೆ ಕಳಿಸಲಾಗುವ ಪ್ರತಿಕ್ರಿಯೆಗಳನ್ನು ಪೋಷಕರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅವರಿಗೆ ಬೇಕಿರುವುದು ಒಂದೇ ಅದೇನೆಂದರೆ ತಮ್ಮ ಮಕ್ಕಳು ಹೇಗಾದರೂ ಸರಿಯೇ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿಯನ್ನು ಮುಂದುವರೆಸಬೇಕೆಂಬುದಾಗಿದೆ.

ನಿರ್ದಿಷ್ಟ ವಿಷಯ ಹಾಗೂ ವೃತ್ತಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರ್ಹತೆ ಇಲ್ಲದೇ ಇರುವುದು ಅಥವಾ ತಮ್ಮ ಊರುಗಳಿಂದ ದೂರ ಇರಲು ಸಾಧ್ಯವಾಗದೇ ಇರುವುದು, ಖಿನ್ನತೆ ಇವೆಲ್ಲದರ ಲಕ್ಷಣಗಳನ್ನು ಪೋಷಕರಿಗೆ ಹೇಳಿದರೂ ಅದನ್ನು ಕೇಳಿಸಿಕೊಂಡು ಸ್ವೀಕರಿಸುವ ಸ್ಥಿತಿಯಲ್ಲಿ ಪೋಷಕರು ಇಲ್ಲ ಎಂದು ತರಬೇತಿ ಸಂಸ್ಥೆಗಳು ಹೇಳಿವೆ.

ವಿದ್ಯಾರ್ಥಿಗಳೊಂದಿಗೆ ನಮ್ಮ ಸಂವಹನದಲ್ಲಿ ನಾವು ಓರ್ವ ವಿದ್ಯಾರ್ಥಿ ತೀವ್ರವಾಗಿ ಖಿನ್ನತೆಗೆ ಒಳಗಾಗಿರುವುದನ್ನು ಗಮನಿಸಿದೆವು. ಆ ವಿದ್ಯಾರ್ಥಿಯ ತಂದೆಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದಾಗ, ಅವನಿಗೆಂತಹ ಖಿನ್ನತೆ, ಅವನೇ ಬೇರೆಯವರನ್ನು ಖಿನ್ನತೆಗೆ ತಳ್ಳುತ್ತಾನೆ, ಅಂಥದ್ದೇನು ಇಲ್ಲ. ಇವೆಲ್ಲಾ ನಾಟಕವಷ್ಟೇ ಎಂದು ಹೇಳುವ ಮೂಲಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ನಿರಾಕರಿಸಿದ್ದಾರೆ ಎಂದು ಕೋಟಾ ಎಎಸ್ ಪಿ ಚಂದ್ರಶೀಲ್ ಠಾಕೂರ್ ಹೇಳಿದ್ದಾರೆ. 

ನಿಮ್ಮ ಮಗನನ್ನು ಕೆಲವು ದಿನಗಳ ಕಾಲ ಮನೆಗೆ ಕರೆದೊಯ್ಯಿರಿ ಎಂದು ಒತ್ತಾಯಿಸಿದಾಗ, ಆತನ ತಂದೆ ಅದನ್ನು ನಿರಾಕರಿಸಲು ಕಾರಣಗಳನ್ನು ಹೇಳುತ್ತಾ ಹೋದರು. ಕೊನೆಗೆ ಎಫ್ಐಆರ್ ದಾಖಲಿಸುತ್ತೇನೆ ಎಂದು ಎಚ್ಚರಿಸಿದಾಗ ಕೋಟಾಗೆ ಬರುವುದಾಗಿ ಒಪ್ಪಿಕೊಂಡರು. ಅವರನ್ನು ಒಪ್ಪಿಸಲು ನಾನೇ ಇಷ್ಟು ಕಷ್ಟಪಡಬೇಕಾದರೆ ಮಗನಿಗೆ ತನ್ನ ತಂದೆಯ ಬಳಿ ಏನೂ ಹೇಳಲು ಸಾಧ್ಯವಾಗಿರುವುದಿಲ್ಲ ಎಂಬುದು ಅರ್ಥವಾಯಿತು. ಕೋಟಾದ ಜೆಇಇ ಮತ್ತು ನೀಟ್‌ ತರಬೇತಿ ಕೇಂದ್ರಗಳಿಂದ ಯಾವುದೇ ಕಾರಣಕ್ಕೂ ವಾಪಸ್ ಬರುವಂತಿಲ್ಲ ಎಂದು ಪೋಷಕರೇ ಮಕ್ಕಳಿಗೆ ಹೇಳಿರುತ್ತಾರೆ ಎಂದು ಠಾಕೂರ್ ತಿಳಿಸಿದ್ದಾರೆ.

ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ತಲುಪಲು ಮತ್ತು ಒತ್ತಡ ಮತ್ತು ಖಿನ್ನತೆಯ ಆರಂಭಿಕ ಲಕ್ಷಣಗಳನ್ನು ಪತ್ತೆಹಚ್ಚಲು ಪ್ರಯತ್ನಗಳನ್ನು ಮಾಡಲು ಸ್ಥಾಪಿಸಲಾದ ವಿದ್ಯಾರ್ಥಿ ಸೆಲ್ ನ ಮುಖ್ಯಸ್ಥರಾಗಿ ಠಾಕೂರ್ ಕಾರ್ಯನಿರ್ವಹಿಸುತ್ತಿದ್ದಾರೆ.

ಕೋಟಾದ ಟಾಪ್ ತರಬೇತಿ ಸಂಸ್ಥೆಗಳ ಪೈಕಿ ಒಂದರ ಪ್ರತಿನಿಧಿ ಈ ಬಗ್ಗೆ ಮಾತನಾಡಿದ್ದು, ಕಳೆದ 1 ವರ್ಷದ ಅವಧಿಯಲ್ಲಿ ನಾನು 50 ಮಂದಿ ಪೋಷಕರನ್ನು ಮಾತನಾಡಿಸಿ, ಅವರ ಮಕ್ಕಳಿಗೆ ಈ ತರಬೇತಿ ಸೂಕ್ತವಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲು ಯತ್ನಿಸಿದ್ದೇನೆ. ಈ ಪೈಕಿ ಕನಿಷ್ಠ 40 ಮಂದಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮಕ್ಕಳನ್ನು ವಾಪಸ್ ಕರೆದೊಯ್ಯಲು ಸಿದ್ಧರಿರಲಿಲ್ಲ. ಇನ್ನೂ ಕೆಲವರು ಸಲಹೆಯನ್ನು ಪರಿಗಣಿಸಿ ತರಬೇತಿಯಿಂದ ಮಕ್ಕಳನ್ನು ವಾಪಸ್ ಕರೆದೊಯ್ದರು. ಆದರೆ ಬೇರೆ ತರಬೇತಿ ಸಂಸ್ಥೆಗಳಿಗೆ ಸೇರಿಸಿದ್ದಾರೆ. ಇದು ಪೋಷಕರಲ್ಲಿರುವ ಮನಸ್ಥಿತಿಯನ್ನು ತೋರುತ್ತದೆ ಎಂದು ಹೇಳಿದ್ದಾರೆ.

"ನಾವು ಪೋಷಕರಿಗೆ ಕೌನ್ಸೆಲಿಂಗ್ ಸೆಷನ್‌ಗಳು ಮತ್ತು ಚಟುವಟಿಕೆಗಳನ್ನು ಆಯೋಜಿಸುತ್ತೇವೆ ಆದರೆ ಅಂತಹ ಉಪಕ್ರಮಗಳ ಸಮಯದಲ್ಲಿ ಪೋಷಕರ ಹಾಜರಾತಿ ತುಂಬಾ ಕಡಿಮೆಯಾಗಿದೆ. ಬೇರೆ ಕಾರ್ಯಕ್ರಮಗಳು, ಹಣಕಾಸಿನ ಸಮಸ್ಯೆಗಳಿಂದಾಗಿ ಪೋಷಕರು ಪ್ರಯಾಣಿಸಲು ಸಾಧ್ಯವಾಗದೇ ಇರುವುದನ್ನು ಹೆಚ್ಚಾಗಿ ಉಲ್ಲೇಖಿಸುತ್ತಾರೆ" ಎಂದು ತರಬೇತಿ ಸಂಸ್ಥೆಯ ಪ್ರತಿನಿಧಿಯೊಬ್ಬರು ಹೇಳಿದ್ದಾರೆ.

ಎಂಜಿನಿಯರಿಂಗ್‌ಗಾಗಿ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮತ್ತು ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ವಾರ್ಷಿಕವಾಗಿ 2.5 ಲಕ್ಷ ವಿದ್ಯಾರ್ಥಿಗಳು ಕೋಟಾಕ್ಕೆ ತೆರಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com