
ಚಂಡೀಗಡ: ಜುಲೈ 31ರಂದು ಹರಿಯಾಣದ ನುಹ್‌ನಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಕೋಮು ಘರ್ಷಣೆಯ ನಂತರ ದಾಖಲಿಸಲಾದ ಎಫ್‌ಐಆರ್‌ನಲ್ಲಿ ಆರೋಪಿ ಎಂದು ಹೆಸರಿಸಲಾಗಿದ್ದ ಫಿರೋಜ್‌ಪುರ ಜಿರ್ಕಾ ಕ್ಷೇತ್ರದ ಶಾಸಕನನ್ನು ನಿನ್ನೆ ತಡರಾತ್ರಿ ಬಂಧಿಸಲಾಗಿದೆ. ಫಿರೋಜ್‌ಪುರ ಜಿರ್ಖಾದ ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಮುಖ್ಯಸ್ಥ ಸತೀಶ್ ಕುಮಾರ್, ಬಂಧನ ಖಚಿತಪಡಿಸಿದ್ದಾರೆ. ನುಹ್ ಕ್ಷೇತ್ರದ ಕಾಂಗ್ರೆಸ್ ನ ಹಿರಿಯ ಶಾಸಕ ಅಫ್ತಾಬ್ ಅಹ್ಮದ್ ಕೂಡ ಖಾನ್ ಬಂಧನವನ್ನು ಖಚಿತಪಡಿಸಿದ್ದಾರೆ.
ನೂಹ್ ಹಿಂಸಾಚಾರದ ನಂತರ ದಾಖಲಿಸಲಾದ ಎಫ್‌ಐಆರ್‌ನಲ್ಲಿ ಖಾನ್ ಅವರನ್ನು ಆರೋಪಿ ಎಂದು ಹೆಸರಿಸಲಾಗಿದೆ ಎಂದು ಹರಿಯಾಣ ಸರ್ಕಾರ ಗುರುವಾರ ಹೈಕೋರ್ಟ್‌ಗೆ ತಿಳಿಸಿತ್ತು, ಆರೋಪಕ್ಕೆ ಸಂಬಂಧಿಸಿದಂತೆ ಪೋಲೀಸರ ಬಳಿ ಫೋನ್ ಕರೆ ದಾಖಲೆಗಳು ಮತ್ತು ಇತರ ಪುರಾವೆಗಳಿವೆ ಎಂದು ಹೇಳಿದ್ದರು.
ಜುಲೈ 31 ರಂದು ನೂಹ್‌ನಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದ ಮೆರವಣಿಗೆಯ ಮೇಲೆ ಗುಂಪೊಂದು ದಾಳಿ ನಡೆಸಿತ್ತು. ದಾಳಿಯ ಸಮಯದಲ್ಲಿ ಆರು ಜನರು ಸಾವಿಗೀಡಾಗಿದ್ದರು. ನುಹ್‌ನಲ್ಲಿರುವ ನ್ಯಾಯಾಲಯದ ಸಂಕೀರ್ಣದಲ್ಲಿ ಮತ್ತು ಸುತ್ತಮುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ, ಅಲ್ಲಿ ಖಾನ್ ಅವರನ್ನು ದಿನದ ನಂತರ ಪೊಲೀಸರು ಹಾಜರುಪಡಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಈ ಪ್ರಕರಣಕ್ಕೆ ಸಂಬಂಧಿಸಿ ಫಿರೋಜ್‌ಪುರದ ಶಾಸಕ ಜಿರ್ಕಾ ಮಂಗಳವಾರ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನಲ್ಲಿ ಬಂಧನದಿಂದ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದು, ವಿಚಾರಣೆಯನ್ನು ಅಕ್ಟೋಬರ್ 19ಕ್ಕೆ ನಿಗದಿಪಡಿಸಲಾಗಿತ್ತು. ಹಿಂಸಾಚಾರ ಭುಗಿಲೆದ್ದ ದಿನದಂದು ತಾನು ನುಹ್‌ನಲ್ಲಿ ಇರಲಿಲ್ಲವಾದ್ದರಿಂದ ತನ್ನನ್ನು ಈ ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗುತ್ತಿದೆ ಎಂದು ಮಮ್ಮನ್ ಹೇಳಿದ್ದಾರೆ.
“ಸಾಕ್ಷಾಧಾರಗಳ ಕುರಿತು ಪರಿಶೀಲನೆ ಬಳಿಕ ಕಾಂಗ್ರೆಸ್ ನಾಯಕನನ್ನು ಆರೋಪಿ ಎಂದು ಹೆಸರಿಸಲಾಗಿದೆ ಎಂದು ಹರಿಯಾಣ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದಿದ್ದಾರೆ.
Advertisement