ಸನಾತನ ಧರ್ಮ ಹೇಳಿಕೆ ವಿವಾದ: ಸುಪ್ರೀಂ ಕೋರ್ಟ್ ನಿಂದ ಯಾವುದೇ ನೋಟಿಸ್ ಬಂದಿಲ್ಲ ಎಂದ ಉದಯನಿಧಿ ಸ್ಟಾಲಿನ್

ಸನಾತನ ಧರ್ಮ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿಂದ ತಮಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ತಮಿಳುನಾಡು ಸಿಎಂ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.
ಉದಯನಿಧಿ ಸ್ಟಾಲಿನ್
ಉದಯನಿಧಿ ಸ್ಟಾಲಿನ್

ಚೆನ್ನೈ: ಸನಾತನ ಧರ್ಮ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿಂದ ತಮಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ತಮಿಳುನಾಡು ಸಿಎಂ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ನೋಟಿಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಉದಯನಿಧಿ ಸ್ಟಾಲಿನ್, 'ಸುಪ್ರೀಂ ಕೋರ್ಟ್ ನೋಟಿಸ್‌ ನೀಡಿರುವ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಆದರೆ, ಇದುವರೆಗೆ ಕೋರ್ಟ್‌ನಿಂದ ಪ್ರತಿಕ್ರಿಯೆ ನೀಡುವಂತೆ ನನಗೆ ಯಾವುದೇ ನೋಟಿಸ್ ಬಂದಿಲ್ಲ’ ಎಂದು ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್‌ ತಿಳಿಸಿದ್ದಾರೆ. 

‘ಸನಾತನ ಧರ್ಮ’ ಕುರಿತು ಹೇಳಿಕೆ ನೀಡಿರುವ ಉದಯನಿಧಿ ಸ್ಟಾಲಿನ್‌ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ಶುಕ್ರವಾರ ತಮಿಳುನಾಡು ಸರ್ಕಾರ ಮತ್ತು ಉದಯನಿಧಿ ಅವರಿಗೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ‘ಸನಾತನ ಧರ್ಮ ನಿರ್ಮೂಲನೆ ಮಾಡಬೇಕು’ ಎಂಬ ಹೇಳಿಕೆ ನೀಡಿದ ಉದಯನಿಧಿ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಕೋರಿ ಮದ್ರಾಸ್‌ ಹೈಕೋರ್ಟ್‌ ವಕೀಲ ಬಿ.ಜಗನ್ನಾಥ ಎಂಬುವರು ಕೋರ್ಟ್ ಮೆಟ್ಟಿಲೇರಿದ್ದರು.

ನ್ಯಾಯಮೂರ್ತಿ ಅನಿರುದ್ಧ ಬೋಸ್ ಮತ್ತು ಬೇಲಾ ಎಂ.ತ್ರಿವೇದಿ ಅವರನ್ನು ಒಳಗೊಂಡ ನ್ಯಾಯಪೀಠವು ಶುಕ್ರವಾರ ಅರ್ಜಿ ವಿಚಾರಣೆ ನಡೆಸಿ ಪ್ರಕರಣ ಸಂಬಂಧ ಉದಯನಿಧಿಗೆ ನೋಟಿಸ್‌ ಜಾರಿ ಮಾಡಿತ್ತು. ‘ಸೆ.2ರಂದು ನಡೆದ ‘ಸನಾತನ ಧರ್ಮ ನಿರ್ಮೂಲನಾ ಸಮಾವೇಶ’ದಲ್ಲಿ ರಾಜ್ಯದ ಸಚಿವರು ಭಾಗವಹಿಸಿರುವುದನ್ನು ‘ಅಸಾಂವಿಧಾನಿಕ’ ಎಂದು ಘೋಷಣೆ ಮಾಡಬೇಕು. ಈ ಕುರಿತು ಸಿಬಿಐ ತನಿಖೆಗೆ ಸೂಚಿಸಬೇಕು’ ಎಂದೂ ಅವರು ಅರ್ಜಿಯಲ್ಲಿ ಕೋರಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com