ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಬಸ್ ಡಿಕ್ಕಿ: ಅಪಘಾತದಲ್ಲಿ ಸರ್ಕಾರಿ ಶಾಲೆಯ ಪ್ರಾಂಶುಪಾಲರು, ವಿದ್ಯಾರ್ಥಿನಿ ಸಾವು
ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಶನಿವಾರ ರಾತ್ರಿ ರಸ್ತೆಬದಿ ನಿಲ್ಲಿಸಿದ್ದ ಡಂಪರ್ ಟ್ರಕ್‌ಗೆ 27 ಮಂದಿ ಪ್ರಯಾಣಿಸುತ್ತಿದ್ದ ಬಸ್ ಡಿಕ್ಕಿ ಹೊಡೆದ ಪರಿಣಾಮ ಸರ್ಕಾರಿ ಶಾಲೆಯ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿನಿಯೊಬ್ಬರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Published: 24th September 2023 01:04 PM | Last Updated: 24th September 2023 01:04 PM | A+A A-

ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಡಿಕ್ಕಿಯಾಗಿರುವ ಬಸ್
ಬಾರ್ಮರ್: ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಶನಿವಾರ ರಾತ್ರಿ ರಸ್ತೆಬದಿ ನಿಲ್ಲಿಸಿದ್ದ ಡಂಪರ್ ಟ್ರಕ್‌ಗೆ 27 ಮಂದಿ ಪ್ರಯಾಣಿಸುತ್ತಿದ್ದ ಬಸ್ ಡಿಕ್ಕಿ ಹೊಡೆದ ಪರಿಣಾಮ ಸರ್ಕಾರಿ ಶಾಲೆಯ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿನಿಯೊಬ್ಬರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಪ್ರಾಂಶುಪಾಲರನ್ನು ಮೊಹಮ್ಮದ್ ಇಬ್ರಾಹಿಂ ಎಂದು ಗುರುತಿಸಲಾಗಿದ್ದು, ವಿದ್ಯಾರ್ಥಿನಿಯನ್ನು ಸವಿನಾ ಎಂದು ಗುರುತಿಸಲಾಗಿದೆ. ಈ ಘಟನೆ ರಾತ್ರಿ 8 ಗಂಟೆ ಸುಮಾರಿಗೆ ಸೆಹ್ಲಾವ್ ಗ್ರಾಮದ ಬಳಿ ನಡೆದಿದೆ.
ಅಧಿಕಾರಿಗಳ ಪ್ರಕಾರ, ಬಸ್ಸಿನಲ್ಲಿದ್ದ ಪ್ರಯಾಣಿಕರಲ್ಲಿ ದೇತಾನಿಯ ಸ್ವಾಮಿ ವಿವೇಕಾನಂದ ಸರ್ಕಾರಿ ಮಾದರಿ ಶಾಲೆಯ ವಿದ್ಯಾರ್ಥಿನಿಯರು ಮತ್ತು ಶಾಲೆಯ ಪ್ರಾಂಶುಪಾಲರು ಮತ್ತು ಮೂವರು ಶಿಕ್ಷಕರು ಸೇರಿದಂತೆ ಇತರ ನಾಲ್ವರು ಇದ್ದರು.
'ಅವರು ರಾಣಿವಾರದಲ್ಲಿ ಆಯೋಜಿಸಲಾದ ಪಂದ್ಯಾವಳಿಯನ್ನು ಮುಗಿಸಿಕೊಂಡು ಹಿಂತಿರುಗುತ್ತಿದ್ದರು' ಎಂದು ಅವರು ಹೇಳಿದರು.
ಸೆಹ್ಲಾವ್ ಗ್ರಾಮದ ಬಳಿ ಭಾರತ್ ಮಾಲಾ ರಸ್ತೆ ಬದಿಯಲ್ಲಿ ನಿಂತಿದ್ದ ಡಂಪರ್ ಟ್ರಕ್ ಅನ್ನು ಚಾಲಕ ಗಮನಿಸಿಲ್ಲ. ಬಳಿಕ ಬಸ್ ಟ್ರಕ್‌ಗೆ ಡಿಕ್ಕಿಯಾಗಿದೆ. 'ಅಪಘಾತದ ಹಿಂದಿನ ನಿಖರ ಕಾರಣ ತಿಳಿದುಬಂದಿಲ್ಲ' ಎಂದು ಅವರು ಹೇಳಿದರು.
ಟ್ರಕ್ ಪಾರ್ಕಿಂಗ್ ಲೈಟ್‌ಗಳನ್ನು ಸ್ವಿಚ್ ಆಫ್ ಮಾಡಿ ನಿಲ್ಲಿಸಿದ್ದರಿಂದ ಬಸ್ ಚಾಲಕನಿಗೆ ವಾಹನ ಕಾಣಿಸದೆ ಡಿಕ್ಕಿಯಾಗಿದೆ. ಅಪಘಾತವು ಎಷ್ಟು ತೀವ್ರವಾಗಿತ್ತು ಎಂದರೆ ಬಸ್ಸಿನ ಎಡ ಬದಿಗೆ ವ್ಯಾಪಕ ಹಾನಿಯಾಗಿದೆ ಮತ್ತು ಅಲ್ಲಿ ಕುಳಿತಿದ್ದ ಶಾಲಾ ಮುಖ್ಯೋಪಾಧ್ಯಾಯರು ಸ್ಥಳದಲ್ಲೇ ಸಾವಿಗೀಡಾಗಿದ್ದರೆ, ವಿದ್ಯಾರ್ಥಿನಿ ಚಿಕಿತ್ಸೆ ವೇಳೆ ಸಾವಿಗೀಡಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಸದ್ದು ಕೇಳಿದ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿ, ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಗ್ರಾಮಸ್ಥರ ನೆರವಿನೊಂದಿಗೆ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
'ಗಾಯಾಳುಗಳಲ್ಲಿ 20 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಚೌಹಾತಾನ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಒಂಬತ್ತು ಮಂದಿಯನ್ನು ಗಗರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ' ಎಂದು ಅವರು ಹೇಳಿದರು.
ಪರಿಸ್ಥಿತಿ ಗಂಭೀರವಾಗಿರುವ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಜೋಧ್‌ಪುರಕ್ಕೆ ಕಳುಹಿಸಲಾಗಿದೆ ಎಂದು ಎಡಿಎಂ ಅಂಜುಮ್ ತಾಹಿರ್ ಸಮ್ಮ ತಿಳಿಸಿದ್ದಾರೆ.