ಭಾರತದ ಅತಿದೊಡ್ಡ ವಂಚಕ ಸಂಸ್ಥೆ: ಮನೇಕಾ ಗಾಂಧಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಇಸ್ಕಾನ್
ಗೋವುಗಳ ಸಾಕಣೆ ಹೆಸರಲ್ಲಿ ಅವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಮೂಲಕ ಭಾರತದಲ್ಲಿ ಅತಿದೊಡ್ಡ ವಂಚನೆಯನ್ನು ಇಸ್ಕಾನ್ ಮಾಡುತ್ತಿದೆ ಎಂದಿದ್ದ ಬಿಜೆಪಿ ಸಂಸದೆ ಮನೇಕಾ ಗಾಂಧಿ ಅವರಿಗೆ 100 ಕೋಟಿ ರೂಪಾಯಿ ಮಾನನಷ್ಟ ನೋಟಿಸ್ ಕಳುಹಿಸಿರುವುದಾಗಿ ಇಸ್ಕಾನ್ ಶುಕ್ರವಾರ ತಿಳಿಸಿದೆ.
Published: 29th September 2023 04:44 PM | Last Updated: 29th September 2023 04:44 PM | A+A A-

ಬಿಜೆಪಿ ಸಂಸದೆ ಮನೇಕಾ ಗಾಂಧಿ
ಕೋಲ್ಕತ್ತಾ: ಗೋವುಗಳ ಸಾಕಣೆ ಹೆಸರಲ್ಲಿ ಅವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಮೂಲಕ ಭಾರತದಲ್ಲಿ ಅತಿದೊಡ್ಡ ವಂಚನೆಯನ್ನು ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ನಡೆಸುತ್ತಿದೆ ಎಂದು ಬಿಜೆಪಿ ಸಂಸದೆ ಮನೇಕಾ ಗಾಂಧಿ ಆರೋಪ ಮಾಡಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ನಡುವೆ ಇಸ್ಕಾನ್ ಈ ಆರೋಪಗಳನ್ನು ತಳ್ಳಿಹಾಕಿದೆ.
ಸಂಸ್ಥೆಯ ವಿರುದ್ಧ ನಿರಾಧಾರ ಆರೋಪಗಳನ್ನು ಮಾಡಿದ ಬಿಜೆಪಿ ಸಂಸದೆ ಮನೇಕಾ ಗಾಂಧಿ ಅವರಿಗೆ 100 ಕೋಟಿ ರೂಪಾಯಿ ಮಾನನಷ್ಟ ನೋಟಿಸ್ ಕಳುಹಿಸಿರುವುದಾಗಿ ಇಸ್ಕಾನ್ ಶುಕ್ರವಾರ ತಿಳಿಸಿದೆ.
ಮನೇಕಾ ಗಾಂಧಿಯವರ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಅವರು, ಇಂಟರ್‌ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್‌ನೆಸ್ (ಇಸ್ಕಾನ್) ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಇಸ್ಕಾನ್ ವಿರುದ್ಧ ಸಂಪೂರ್ಣ ಆಧಾರರಹಿತ ಆರೋಪ ಮಾಡಿದ್ದಕ್ಕಾಗಿ ಇಂದು ನಾವು ಮನೇಕಾ ಗಾಂಧಿ ಅವರಿಗೆ 100 ಕೋಟಿ ರೂಪಾಯಿ ಮಾನನಷ್ಟ ನೋಟಿಸ್ ಕಳುಹಿಸಿದ್ದೇವೆ ಎಂದು ಅದರ ಉಪಾಧ್ಯಕ್ಷ ರಾಧಾರಾಮ್ ದಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: 'ಇಸ್ಕಾನ್' ಭಾರತದ ಅತೀ ದೊಡ್ಡ ವಂಚಕ ಸಂಸ್ಥೆ; ಹರೇ ರಾಮ್-ಹರೇ ಕೃಷ್ಣ ಎಂದು ಹೇಳಿ ಕಟುಕರಿಗೆ ಗೋವುಗಳ ಮಾರಾಟ: ಮನೇಕಾ ಗಾಂಧಿ
ಆ ಆರೋಪಗಳು ವಿಶ್ವದಾದ್ಯಂತ ಇರುವ ಇಸ್ಕಾನ್ ಭಕ್ತರು, ಬೆಂಬಲಿಗರು ಮತ್ತು ಹಿತೈಷಿಗಳ ಸಮುದಾಯಕ್ಕೆ ತೀವ್ರ ನೋವನ್ನುಂಟುಮಾಡಿದೆ ಎಂದು ಹೇಳಿದ ಅವರು, ಇವುಗಳನ್ನು 'ದುರುದ್ದೇಶಪೂರಿತ ಆರೋಪಗಳು' ಎಂದು ಬಣ್ಣಿಸಿದರು.
ಮನೇಕಾ ಗಾಂಧಿ ಇಸ್ಕಾನ್ ವಿರುದ್ಧ ಮಾಡಿದ್ದ ಆರೋಪಗಳೇನು?
ಆಂಧ್ರಪ್ರದೇಶದ ಅನಂತಪುರದಲ್ಲಿರುವ ಇಸ್ಕಾನ್‌ನ ಗೋಶಾಲೆಗೆ ಭೇಟಿ ನೀಡಿದ್ದನ್ನು ಸ್ಮರಿಸಿದ ಗಾಂಧಿ, ಅಲ್ಲಿ ಹಾಲು ನೀಡದ ಯಾವುದೇ ಹಸು ಅಥವಾ ಕರುಗಳು ಕಾಣಿಸುವುದಿಲ್ಲ. ಇಸ್ಕಾನ್ ತಮ್ಮ ಗೋಶಾಲೆಗಳಿಂದ ಕಟುಕರಿಗೆ ಹಸುಗಳನ್ನು ಮಾರಾಟ ಮಾಡುತ್ತದೆ ಎಂದು ಆರೋಪಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಇದೀಗ ವೈರಲ್ ಆಗಿದೆ.
'ಇಂದು ಭಾರತದಲ್ಲಿನ ದೊಡ್ಡ ವಂಚನೆ ಎಂದರೆ ಅದು ಇಸ್ಕಾನ್. ಅವರು ಗೋಶಾಲೆಗಳನ್ನು ಸ್ಥಾಪಿಸುತ್ತಾರೆ. ಆ ಮೂಲಕ ಅವುಗಳನ್ನು ನಡೆಸಲು ಸರ್ಕಾರದಿಂದ ಅನಿಯಮಿತ ಪ್ರಯೋಜನಗಳನ್ನು ಪಡೆಯುತ್ತಾರೆ. ಅವರು ಬೃಹತ್ ಭೂಮಿಯನ್ನು ಪಡೆಯುತ್ತಾರೆ. ಆಂಧ್ರ ಪ್ರದೇಶದ ಅನಂತಪುರದಲ್ಲಿರುವ ಇಸ್ಕಾನ್ ಗೋಶಾಲೆಗೆ ನಾನು ಇತ್ತೀಚೆಗೆ ಭೇಟಿ ನೀಡಿದ್ದೆ. ಅಲ್ಲಿ ಹಾಲು ಕೊಡದ ಒಂದೇ ಒಂದು ಹಸುಗಳಾಗಲೀ ಅಥವಾ ಕರುಗಳಾಗಲಿ ಇಲ್ಲ. ಅಲ್ಲಿದ್ದವುಗಳೆಲ್ಲಾ ಹಾಲು ಕೊಡುವಂತವುಗಳು. ಇಸ್ಕಾನ್ ತನ್ನ ಎಲ್ಲಾ ಗೊಡ್ಡು ಹಸುಗಳನ್ನು ಕಸಾಯಿಖಾನೆಗೆ ಮಾರುತ್ತಿದೆ ಎಂಬ ಮಾಹಿತಿ ಲಭ್ಯವಾಯಿತು. ಇವರು ಹೀಗೆ ಮಾಡಿದಷ್ಟು ಬೇರೆ ಯಾರೂ ಈವರೆಗೂ ಮಾಡಿಲ್ಲ' ಎಂದು ಮನೇಕಾ ಆರೋಪಿಸಿದ್ದಾರೆ.
ಇದನ್ನೂ ಓದಿ: ಗೋವುಗಳನ್ನು ಕಸಾಯಿಖಾನೆಗೆ ಮಾರುವ ಮೂಲಕ ಇಸ್ಕಾನ್ ಅತಿದೊಡ್ಡ ವಂಚನೆ; ಮನೇಕಾ ಗಾಂಧಿ ಆರೋಪ ತಳ್ಳಿಹಾಕಿದ ಇಸ್ಕಾನ್
ಅವರು ರಸ್ತೆಯಲ್ಲಿ 'ಹರೇ ರಾಮ ಹರೇ ಕೃಷ್ಣ' ಎಂದು ಹಾಡುತ್ತಾ ಹೋಗುತ್ತಾರೆ ಮತ್ತು ತಮ್ಮ ಇಡೀ ಜೀವನವು ಹಸುಗಳ ಮೇಲೆ ಅವಲಂಬಿತವಾಗಿದೆ ಎಂದು ಹೇಳುತ್ತಾರೆ. ಆದರೆ, ಕಸಾಯಿಖಾನೆಗೆ ಇವರಷ್ಟು ಹಸುಗಳನ್ನು ಬೇರೆ ಯಾರೂ ಮಾರಾಟ ಮಾಡಿಲ್ಲ. ಇವರೇ ಈ ರೀತಿ ಮಾಡಲು ಸಾಧ್ಯವಾದರೆ, ಇತರರು ಏನು ಮಾಡುತ್ತಾರೆ? ಆಕ್ರೋಶ ವ್ಯಕ್ತಪಡಿಸಿದ್ದಾರೆ.