ಮಣಿಪುರ ಹಿಂಸಾಚಾರ: ವಿದೇಶಿ ನೆಲದಿಂದ ಭಾರತದ ವಿರುದ್ಧ ಉಗ್ರ ಸಂಚು ಪ್ರಕರಣ; ಶಂಕಿತ ವ್ಯಕ್ತಿಯನ್ನು ಬಂಧಿಸಿದ NIA
ಮಣಿಪುರ ಹಿಂಸಾಚಾರದ ನೆಪದಲ್ಲಿ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಸಂಘಟನೆಗಳ ನೇತೃತ್ವದಲ್ಲಿ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಸಂಚು ರೂಪಿಸಲಾಗುತ್ತಿದ್ದು, ಇದರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಬಿಗಿಪಟ್ಟು ಹಿಡಿದಿದೆ.
Published: 30th September 2023 11:49 PM | Last Updated: 30th September 2023 11:49 PM | A+A A-

ಎನ್ ಐಎ ದಾಳಿ
ಗುವಾಹಟಿ: ಮಣಿಪುರ ಹಿಂಸಾಚಾರದ ನೆಪದಲ್ಲಿ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಸಂಘಟನೆಗಳ ನೇತೃತ್ವದಲ್ಲಿ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಸಂಚು ರೂಪಿಸಲಾಗುತ್ತಿದ್ದು, ಇದರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಬಿಗಿಪಟ್ಟು ಹಿಡಿದಿದೆ.
ವಿದೇಶಿ ನೆಲದಿಂದ ಭಾರತದ ವಿರುದ್ಧ ನಡೆಸಲಾಗುತ್ತಿರುವ ಭಯೋತ್ಪಾದಕ ಸಂಚಿನ ಭಾಗವಾಗಿರುವ ಶಂಕಿತ ಆರೋಪಿಯನ್ನು ಚುರಾಚಂದ್‌ಪುರದಿಂದ ಬಂಧಿಸಿರುವುದಾಗಿ ಎನ್‌ಐಎ ತಿಳಿಸಿದೆ.
ಎಚ್‌ಟಿ ವರದಿಯ ಪ್ರಕಾರ ಆರೋಪಿಯನ್ನು ಸೆಮಿನ್ಲುನ್ ಗ್ಯಾಂಗ್ಟೆ ಎಂದು ಗುರುತಿಸಲಾಗಿದೆ. ಪಿತೂರಿ ಪ್ರಕರಣದ ತನಿಖೆಗಾಗಿ ಎನ್‌ಐಎ ಜುಲೈ 19ರಂದು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿತ್ತು.
ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಮೂಲದ ಉಗ್ರಗಾಮಿ ಗುಂಪುಗಳು ವಿವಿಧ ಜನಾಂಗೀಯ ಗುಂಪುಗಳ ನಡುವೆ ಬಿರುಕು ಮೂಡಿಸುವ ಮತ್ತು ಭಾರತ ಸರ್ಕಾರದ ವಿರುದ್ಧ ದಾಳಿ ನಡೆಸುವ ಉದ್ದೇಶದಿಂದ ಹಿಂಸಾಚಾರದ ಘಟನೆಗಳಲ್ಲಿ ಪಾಲ್ಗೊಳ್ಳಲು ಭಾರತವನ್ನು ಪ್ರವೇಶಿಸಿವೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಎನ್ಐಎ ಹೇಳಿಕೆಯಲ್ಲಿ ತಿಳಿಸಿದೆ. ಈ ಉದ್ದೇಶಕ್ಕಾಗಿ ಮೇಲಿನ ಸಂಘಟನೆಗಳು ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಘರ್ಷಣೆಯನ್ನು ಪ್ರಚೋದಿಸಲು ಗಡಿಯಾಚೆಯಿಂದ ಮತ್ತು ಭಾರತಕ್ಕೆ ಸರಬರಾಜು ಮಾಡಲಾಗುತ್ತಿರುವ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಇತರ ರೀತಿಯ ಭಯೋತ್ಪಾದಕ ಯಂತ್ರಾಂಶಗಳ ಖರೀದಿಗೆ ಹಣವನ್ನು ಒದಗಿಸುತ್ತಿದೆ ಎಂದು ಎನ್ಐಎ ಹೇಳಿದೆ.
ಇದನ್ನೂ ಓದಿ: ಕರ್ಫ್ಯೂ ಉಲ್ಲಂಘಿಸಿ ಮಣಿಪುರ ಸಿಎಂ ಮನೆ ಮೇಲೆ ದಾಳಿಗೆ ಗುಂಪು ಯತ್ನ; ಭದ್ರತಾ ಪಡೆಗಳಿಂದ ತಡೆ
ಆರೋಪಿಯನ್ನು ದೆಹಲಿಗೆ ಕರೆತರಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ
ಆರೋಪಿ ಸೆಮಿನ್ಲುನ್ ಗ್ಯಾಂಗ್ಟೆಯನ್ನು ದೆಹಲಿಗೆ ಕರೆತರಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತನಿಖಾ ಸಂಸ್ಥೆ ತಿಳಿಸಿದೆ. ಅದೇ ಪ್ರಕರಣದಲ್ಲಿ ತರಬೇತಿ ಪಡೆದ ಉಗ್ರಗಾಮಿ ಕೇಡರ್‌ನ ಮೊಯಿರಾಂಗ್ಥೆಮ್ ಆನಂದ್ ಸಿಂಗ್‌ನನ್ನು ಏಜೆನ್ಸಿ ವಶಕ್ಕೆ ಪಡೆದ ಕೆಲವು ದಿನಗಳ ನಂತರ ಗ್ಯಾಂಗ್ಟೆಯ ಬಂಧನವಾಗಿದೆ.
ಮೊಯರಂಗತೇಮ್ ಆನಂದ್ ಸಿಂಗ್ ಅವರನ್ನು ಸೆಪ್ಟೆಂಬರ್ 24ರಂದು ಬಂಧಿಸಲಾಯಿತು. ದೆಹಲಿಗೆ ಕರೆತರಲಾಯಿತು. ಮರೆಮಾಚುವ ಸಮವಸ್ತ್ರವನ್ನು ಧರಿಸಿದ್ದ ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಆರೋಪದ ಮೇಲೆ ಮಣಿಪುರ ಪೊಲೀಸರು ಅವರನ್ನು ಸೆಪ್ಟೆಂಬರ್ 16 ರಂದು ಇತರ ನಾಲ್ವರ ಜೊತೆಗೆ ಬಂಧಿಸಿದರು. ಅವರು ಮಣಿಪುರದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯ ಮಾಜಿ ಕೇಡರ್ ಆಗಿದ್ದಾರೆ.