ಜಮ್ಮು-ಕಾಶ್ಮೀರದಲ್ಲಿ INDI ಮೈತ್ರಿಕೂಟಕ್ಕೆ ಆಘಾತ: PDP ಪ್ರತ್ಯೇಕ ಸ್ಪರ್ಧೆ, ಅಡಕತ್ತರಿಯಲ್ಲಿ National Conference!
ಶ್ರೀನಗರ: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಇತ್ತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಮೈತ್ರಿಕೂಟದ ವಿರುದ್ಧ ಮಹಾಕಾಳಗಕ್ಕೆ ಸಿದ್ಧವಾಗಿರುವ INDIA ಮೈತ್ರಿಕೂಟಕ್ಕೆ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ದೊಡ್ಡ ಆಘಾತ ಎದುರಾಗಿದೆ.
ಹೌದು.. INDIA ಮೈತ್ರಿಕೂಟದ ಭಾಗವಾಗಿರುವ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಕಾಶ್ಮೀರದ ಮೂರು ಲೋಕಸಭಾ ಸ್ಥಾನಗಳಲ್ಲಿ ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಬುಧವಾರ ಘೋಷಿಸಿದ್ದಾರೆ. ಆ ಮೂಲಕ ಕಣಿವೆಯಲ್ಲಿ Indi ಮೈತ್ರಿಕೂಟದಲ್ಲಿನ ಮೈತ್ರಿಯನ್ನು ಮೆಹಬೂಬಾ ಮುಫ್ತಿ ಕೊನೆಗೊಳಿಸಿದ್ದಾರೆ.
ಸೀಟು ಹಂಚಿಕೆಯಲ್ಲಿ ಒಮರ್ ಸಹಕಾರ ನೀಡುತ್ತಿಲ್ಲ
ಸೀಟು ಹಂಚಿಕೆಯಲ್ಲಿ National Conference ಪಕ್ಷ ಮತ್ತು ಒಮರ್ ಅಬ್ದುಲ್ಲಾ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, 'ಸೀಟು ಹಂಚಿಕೆಗೆ ಸಂಬಂಧಿಸಿದಂತೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಉಮರ್ ಅಬ್ದುಲ್ಲಾ ಅವರು ಸಹಕಾರ ನೀಡುತ್ತಿಲ್ಲ. ಇಂಡಿಯಾ ಒಕ್ಕೂಟದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ನಾವು ಸ್ವತಂತ್ರವಾಗಿ ಸ್ಪರ್ಧಿಸುವ ಹೊರತು ಬೇರೆ ಆಯ್ಕೆಯನ್ನೇ ನೀಡಿಲ್ಲ. ಹಾಗಾಗಿ, ಪಿಡಿಪಿಯು ಜಮ್ಮು-ಕಾಶ್ಮೀರದ ಮೂರು ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಅಭ್ಯರ್ಥಿಗಳ ಆಯ್ಕೆ ಕುರಿತು ಶೀಘ್ರದಲ್ಲೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದು ಅವರ ಆಯ್ಕೆ ಎಂದ ಒಮರ್ ಅಬ್ದುಲ್ಲಾ
ಇನ್ನು ಮೆಹಬೂಬಾ ಮುಫ್ತಿ ಅವರ ನಿರ್ಧಾರದ ಕುರಿತು ಪ್ರತಿಕ್ರಿಯೆ ನೀಡಿರುವ National Conference ಮುಖ್ಯಸ್ಥ ಒಮರ್ ಅಬ್ದುಲ್ಲಾ, 'ಒಂದು ವೇಳೆ ಮೆಹಬೂಬಾ ಮುಫ್ತಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ್ದರೆ ಅದು ಅವರ ಆಯ್ಕೆ ಎಂದು ಪರೋಕ್ಷವಾಗಿ ತಾವೂ ಕೂಡ ಸ್ಪರ್ಧೆಗೆ ಸಿದ್ಧ ಎಂದು ಹೇಳಿದ್ದಾರೆ.
INDI ಮೈತ್ರಿಕೂಟಕ್ಕೆ ಪದೇ ಪದೇ ಆಘಾತ
ಬಿಜೆಪಿಯನ್ನು ಶತಾಯ ಗತಾಯ ಸೋಲಿಸಬೇಕು ಎಂಬ ಧ್ಯೇಯದಿಂದ ಅಸ್ತಿತ್ವಕ್ಕೆ ಬಂದಿರುವ ಇಂಡಿಯಾ ಒಕ್ಕೂಟವು ಲೋಕಸಭೆ ಚುನಾವಣೆಯ ಮೊದಲೇ ಛಿದ್ರ ಛಿದ್ರವಾಗಿದೆ. ಇತ್ತ ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯು ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದು, ಪಂಜಾಬ್‌ನಲ್ಲೂ ಆಪ್ ಕೂಡ ಮೈತ್ರಿ ಇಲ್ಲದೆಯೇ ಸ್ಪರ್ಧಿಸಲು ಮುಂದಾಗಿದೆ. ಬಿಹಾರದಲ್ಲಿ ನಿತೀಶ್ ಕುಮಾರ್ ಅವರು ಕೂಡ ಮೈತ್ರಿಕೂಟಕ್ಕೆ ವಿದಾಯ ಹೇಳಿ ಎನ್ ಡಿಎ ಮೈತ್ರಿಕೂಟ ಸೇರಿರುವುದು INDI ಒಕ್ಕೂಟದ ಒಗ್ಗಟ್ಟಿಗೆ ಭಾರಿ ಪೆಟ್ಟು ಬಿದ್ದಂತಾಗಿದೆ. ಮುಖ್ಯವಾಗಿ INDI ಒಕ್ಕೂಟದ ಮೈತ್ರಿಯಲ್ಲಿ ಪ್ರಧಾನವಾಗಿ ಕಾಣಿಸಿಕೊಂಡಿದ್ದ
ನಿತೀಶ್ ಕುಮಾರ್ ಅವರ ವಿದಾಯವು INDIA ಮೈತ್ರಿಕೂಟಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ನಿತೀಶ್ ಕುಮಾರ್ ಮಾತ್ರವಲ್ಲ, ರಾಷ್ಟ್ರೀಯ ಲೋಕದಳ (RLD) ಕೂಡ ಇಂಡಿಯಾ ಒಕ್ಕೂಟಕ್ಕೆ ವಿದಾಯ ಹೇಳಿದೆ. ಇನ್ನು, ಕಾಂಗ್ರೆಸ್‌ನ ಸಾಲು ಸಾಲು ನಾಯಕರು ಬಿಜೆಪಿ ಸೇರ್ಪಡೆಯಾಗಿರುವುದು ಕೂಡ ಪಕ್ಷಕ್ಕೆ ವೈಯಕ್ತಿಕವಾಗಿ ಹಿನ್ನಡೆಯಾದಂತಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ