ಜಮ್ಮು ಮತ್ತು ಕಾಶ್ಮೀರ: ಪಿಡಿಪಿ ಮುಖ್ಯಸ್ಥೆ ಕಾರು ಅಪಘಾತ; ಅಪಾಯದಿಂದ ಮೆಹಬೂಬಾ ಮುಫ್ತಿ ಪಾರು

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಸಂಗಮ್‌ನಲ್ಲಿ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ಕಾರು ಅಪಘಾತಕ್ಕೀಡಾಗಿದ್ದು, ಗುರುವಾರ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕಾರು ಅಪಘಾತಕ್ಕೀಡಾಗಿರುವುದು
ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕಾರು ಅಪಘಾತಕ್ಕೀಡಾಗಿರುವುದು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಸಂಗಮ್‌ನಲ್ಲಿ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ಕಾರು ಅಪಘಾತಕ್ಕೀಡಾಗಿದ್ದು, ಗುರುವಾರ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಗಮ್‌ನಲ್ಲಿ ಮುಫ್ತಿ ಅವರ ಕಾರು ನಾಗರಿಕರ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಕಿ ಅವಘಡವೊಂದರ ಸಂತ್ರಸ್ತರನ್ನು ಭೇಟಿ ಮಾಡಲು ಖಾನಬಾಲ್‌ಗೆ ತೆರಳುತ್ತಿದ್ದ ಮುಫ್ತಿ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಆದರೆ, ಅವರ ವೈಯಕ್ತಿಕ ಭದ್ರತೆಯಲ್ಲಿದ್ದ ಪೊಲೀಸ್ ಅಧಿಕಾರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಅಪಘಾತದಲ್ಲಿ ಮಫ್ತಿ ಅವರ ವಾಹನಕ್ಕೆ ತೀವ್ರ ಹಾನಿಯಾಗಿದೆ. ಅಪಘಾತದ ನಂತರ ಮುಫ್ತಿ ಅವರು ಮತ್ತೊಂದು ಕಾರಿನಲ್ಲಿ ತಮ್ಮ ನಿಗದಿತ ಭೇಟಿಗೆ ತೆರಳಿದರು.

ಮುಫ್ತಿ ಸುರಕ್ಷಿತವಾಗಿದ್ದು, ಯಾವುದೇ ಗಾಯಗಳಾಗಿಲ್ಲ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ವಕ್ತಾರರು ತಿಳಿಸಿದ್ದಾರೆ.

ಪಿಡಿಪಿ ಅಧ್ಯಕ್ಷರ ಮಾಧ್ಯಮ ಸಲಹೆಗಾರರಾಗಿರುವ ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ ಅವರು, ತಮ್ಮ ತಾಯಿ ಸುರಕ್ಷಿತವಾಗಿದ್ದಾರೆ ಎಂದು ಖಚಿತಪಡಿಸಿದ್ದಾರೆ.

'ಇಂದು ಅನಂತನಾಗ್ ಮಾರ್ಗವಾಗಿ ಸಂಚರಿಸುತ್ತ ವೇಳೆ ಮುಫ್ತಿ ಅವರ ಕಾರು ಭೀಕರ ಅಪಘಾತಕ್ಕೆ ಒಳಗಾಯಿತು. ದೇವರ ಕೃಪೆಯಿಂದಾಗಿ ಆಕೆ ಮತ್ತು ಆಕೆಯ ಭದ್ರತಾ ಅಧಿಕಾರಿಗಳು ಯಾವುದೇ ಗಂಭೀರ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ' ಎಂದು ಇಲ್ತಿಜಾ ಮುಫ್ತಿ ಟ್ವೀಟ್ ಮಾಡಿದ್ದಾರೆ.

ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಉಪಾಧ್ಯಕ್ಷ ಒಮರ್ ಅಬ್ದುಲ್ಲಾ, 'ಮೆಹಬೂಬಾ ಮುಫ್ತಿ ಅವರು ಅಪಘಾತದಲ್ಲಿ ಅಪಾಯದಿಂದ ಪಾರಾಗಿದ್ದಾರೆ ಎಂದು ಕೇಳಲು ಸಂತೋಷವಾಗಿದೆ. ಅಪಘಾತದ ಹಿಂದಿನ ಕಾರಣ ತಿಳಿಯಲು ಸರ್ಕಾರ ವಿಚಾರಣೆ ನಡೆಸಬೇಕೆಂದು ನಾನು ನಿರೀಕ್ಷಿಸುತ್ತೇನೆ. ಈ ಅಪಘಾತಕ್ಕೆ ಕಾರಣವಾದ ಆಕೆಯ ಭದ್ರತೆಯಲ್ಲಿನ ಯಾವುದೇ ಲೋಪವನ್ನು ತಕ್ಷಣವೇ ಪರಿಹರಿಸಬೇಕು' ಎಂದು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com