ಕಚ್ಚಾತೀವು-ದೇಶದ ಏಕತೆ, ಸಮಗ್ರತೆ ಎಂಬ ಪದಪುಂಜಗಳ ಅಬ್ಬರದಲ್ಲಿ ಮರೆಯಾಗುತ್ತಿರುವ ತಥ್ಯಗಳು!

1974ರಲ್ಲಿ ಅಂತಾರಾಷ್ಟ್ರೀಯ ಸಾಗರ ಗಡಿ ನಿರ್ಣಯವಾಗುವ ಹೊತ್ತಿನಲ್ಲಿ ಕಚ್ಚಾತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಡುವ ನಿರ್ಣಯವು ಅಣ್ಣಾಮಲೈ ಅವರ ಮಾಹಿತಿ ಹಕ್ಕು ಅರ್ಜಿಯಿಂದ ಉದ್ಭವಿಸಿದ ಬ್ರೇಕಿಂಗ್ ನ್ಯೂಸ್, ಶಾಕಿಂಗ್ ನ್ಯೂಸ್ ಏನೂ ಅಲ್ಲ.
ಕಚ್ಚಾತೀವು ದ್ವೀಪ- ಪ್ರಧಾನಿ ನರೇಂದ್ರ ಮೋದಿ (ಸಾಂಕೇತಿಕ ಚಿತ್ರ)
ಕಚ್ಚಾತೀವು ದ್ವೀಪ- ಪ್ರಧಾನಿ ನರೇಂದ್ರ ಮೋದಿ (ಸಾಂಕೇತಿಕ ಚಿತ್ರ)

ಇನ್ನೊಂದು 10-15 ವರ್ಷದ ನಂತರ ಕೇಂದ್ರದಲ್ಲಿ ಈಗಿರುವುದಕ್ಕಿಂತ ಭಿನ್ನ ಸರ್ಕಾರ ಅಧಿಕಾರಕ್ಕೆ ಬಂದುಬಿಡುತ್ತದೆ. ಬಲ ಕುಗ್ಗಿಸಿಕೊಂಡು ಪ್ರತಿಪಕ್ಷದಲ್ಲಿರುವ ಬಿಜೆಪಿಯನ್ನು ರಾಜಕೀಯವಾಗಿ ಹಣಿಯುವುದಕ್ಕೆ ಈ ಹೊಸ ಅಧಿಕಾರಸ್ಥರು ರಾಷ್ಟ್ರವಾದದ ಕರೆನ್ಸಿಯನ್ನೂ ಢಾಳಾಗಿ ಉಪಯೋಗಿಸಿಕೊಳ್ಳುತ್ತಾರೆ…ಹಾಗಂತ ಕಲ್ಪಿಸಿಕೊಳ್ಳಿ. ಆ ಹೊಸ ಅಧಿಕಾರಸ್ಥರ ಚುನಾವಣಾ ಭಾಷಣ ಈ ಧಾಟಿಯಲ್ಲಿರುತ್ತದೆ. “ನೀವೆಲ್ಲ ಮೋದಿ ಮೋದಿ ಎಂದಿದ್ದೇ ಬಂತು. ಈ ಮನುಷ್ಯ ಎಕರೆಗಟ್ಟಲೇ ಪ್ರದೇಶವನ್ನು ಸಾಬರ ದೇಶವಾದ ಬಾಂಗ್ಲಾದೇಶಕ್ಕೆ ಕೊಟ್ಟುಬಿಟ್ಟ. 2015ರಲ್ಲಿ ನಡೆದ ಈ ಘಾತಕ ಒಪ್ಪಂದ ನಿಮಗೆ ಗೊತ್ತಿದೆಯೇ..” ಅಂತ ಅಬ್ಬರಿಸಿದಾಗ, ಆ ಸಮಯಕ್ಕೆ ನಾವೆಲ್ಲ ಎಐ ಸರ್ಚ್ ಅನ್ನೋ, ಗೂಗಲ್ ಅನ್ನೋ ಮಾಡುತ್ತೇವೆ ಅಂದುಕೊಳ್ಳೋಣ. 2015ರ ಲ್ಯಾಂಡ್ ಬೌಂಡ್ರಿ ಅಗ್ರಿಮೆಂಟಿನಲ್ಲಿ ಭಾರತವು ಜಮೀನು ಕಳೆದುಕೊಂಡಿತೇ ಅಂತ ಚಾಟ್ ಜಿಪಿಟಿಗೋ, ಜೆಮಿನಿಗೋ ಕೇಳ್ತೀರಿ ಅರ್ಥಾತ್ ಪ್ರಾಂಪ್ಟ್ ಮಾಡ್ತೀರಿ.. ಅದು ಕೇಳಿದ್ದಕ್ಕಷ್ಟೇ ಉತ್ತರ ಹೇಳುತ್ತದೆ- ‘ಹೌದು. ಭಾರತವು ಬಾಂಗ್ಲಾದೇಶದ 7,110 ಎಕರೆ ಜಾಗವನ್ನು ತನ್ನದಾಗಿಸಿಕೊಂಡಿತು. ಇದಕ್ಕೆ ಪ್ರತಿಯಾಗಿ ಭಾರತದ 111 ವಸತಿಗುಚ್ಛಗಳ 17,160 ಎಕರೆಗಳು ಅಂದರೆ 40 ಚದರ ಕಿಲೋಮೀಟರುಗಳಷ್ಟು ಜಾಗವು ಬಾಂಗ್ಲಾದೇಶಕ್ಕೆ ಸೇರಿತು.’

ಇನ್ನು ಹದಿನೈದು ವರ್ಷಗಳ ನಂತರ ಇವಿಷ್ಟೇ ಮೇಲು-ಮೇಲಿನ ವಿಷಯ ಓದಿಕೊಂಡರೆ, ಅವತ್ತಿಗೆ ಅದೇನೋ ಹೊಸ ವಿಷಯ ಬಯಲಿಗೆ ಬಂದಂತಾಗಿ, ನಾವೆಲ್ಲ ಆಘಾತವನ್ನು ಆವಾಹಿಸಿಕೊಂಡು, “ಮೋದಿ ದೇಶಕ್ಕೆ ನಯವಾಗಿ ಮೋಸ ಮಾಡಿಬಿಟ್ಟ” ಅಂತ ಅವತ್ತಿನ ಹೊಸ ತಲೆಮಾರಿನೊಂದಿಗೆ ನಿಂತು ಒದರಿಕೊಳ್ಳುವುದಿಲ್ಲ ಅಂತ ಏನು ಗ್ಯಾರಂಟಿ?

ಕಚ್ಚಾತೀವು ದ್ವೀಪ- ಪ್ರಧಾನಿ ನರೇಂದ್ರ ಮೋದಿ (ಸಾಂಕೇತಿಕ ಚಿತ್ರ)
ಕಚ್ಚತೀವು ದ್ವೀಪದ ಬಗ್ಗೆ ಬಿಜೆಪಿ ಪ್ರಸ್ತಾಪ; ಶ್ರೀಲಂಕಾ ಪ್ರತಿಕ್ರಿಯೆ ಏನೆಂದರೆ...

ಆದರೆ, ವಾಸ್ತವವೇನು? ಗಡಿ ಪ್ರದೇಶದ ಭೂಭಾಗಗಳು ಭಾರತೀಯ ನಾಗರಿಕರು ಹಾಗೂ ಬಾಂಗ್ಲಾದೇಶದ ನಾಗರಿಕರಲ್ಲಿ ಅಲ್ಲಲ್ಲಿ ಹಂಚಿಹೋಗಿ ಭೂದ್ವೀಪಗಳೇ ಆಗಿಹೋಗಿದ್ದವು. ಅಂದರೆ, ಅಲ್ಲೆಲ್ಲೋ ಒಂದೆಕರೆ ಜಾಗದಲ್ಲಿ ಮೂರ್ನಾಲ್ಕು ಭಾರತೀಯ ಪ್ರಜೆಗಳು ವಾಸಿಸುತ್ತಿದ್ದರೆ, ಅವರ ಸುತ್ತ ನಾಲ್ಕೂ ದಿಕ್ಕುಗಳಲ್ಲಿ ಬಾಂಗ್ಲಾದೇಶೀಯರು ವಾಸಿಸುತ್ತಿದ್ದರು. ಈ ಬಾಂಗ್ಲಾದೇಶಿಯರ ಆವಾಸವೂ ಹಲವೆಡೆಗಳಲ್ಲಿ ಭಾರತೀಯರ ಆವಾಸಗಳಿಂದ ಲಾಕ್ ಆಗಿತ್ತು. ಹೀಗಾಗಿ, ಭಾರತ ಸರ್ಕಾರವಾಗಲೀ ಬಾಂಗ್ಲಾದೇಶವಾಗಲೀ ತನ್ನ ಪ್ರಜೆಗಳಿಗೆ ವಿದ್ಯುತ್ ಅನ್ನೋ ರಸ್ತೆಯನ್ನೋ ಇನ್ಯಾವುದೇ ಮೂಲಸೌಕರ್ಯವನ್ನೋ ಶಾಶ್ವತವಾಗಿ ನಿರ್ಮಿಸುವುದಕ್ಕೆ ಆಗುತ್ತಿರಲಿಲ್ಲ. ಹಾಗೆಂದೇ, ಸ್ವಲ್ಪ ಹೆಚ್ಚೋ-ಕಡಿಮೆಯೋ ಎಂಬಂತೆ ಮೋದಿ ಸರ್ಕಾರದ ಅವಧಿಯಲ್ಲಿ ಈ ‘ಭೂದ್ವೀಪ’ಗಳನ್ನು ಹಸ್ತಾಂತರಿಸಿಕೊಂಡು ಭೌಗೋಳಿಕ ನಿರಂತರತೆ ಕಾಪಾಡಲಾಯಿತು. ಆವರೆಗಿನ ಸರ್ಕಾರಗಳು ಯಾಕೆ ಇಂಥ ಒಪ್ಪಂದಕ್ಕೆ ಕೈ ಹಾಕಿರಲಿಲ್ಲ ಎಂಬುದಕ್ಕೆ ಕಾರಣವೂ ಬಹುಶಃ ಭಾರತದ ನೆಲದ ಹಕ್ಕನ್ನು ಸ್ವಲ್ಪ ಬಿಟ್ಟುಕೊಟ್ಟರು ಎಂಬ ಮಾತುಗಳನ್ನು ಕೇಳಬೇಕಾಗುತ್ತದೆ ಎಂಬ ಭಯವಿದ್ದಿರಬಹುದು. ಆದರೆ ರಾಷ್ಟ್ರೀಯತೆಯ ವಿಶ್ವಾಸಾರ್ಹತೆ ಗಳಿಸಿಕೊಂಡಿದ್ದ ಮೋದಿ ಸರ್ಕಾರ ಇದನ್ನು ಮಾಡಿ ಮುಗಿಸಿತು ಎಂಬುದು ಸ್ವಾಗತಾರ್ಹ ವಿಷಯವೇ.

ಇವತ್ತು ಮೋದಿ ಮತ್ತು ಅಣ್ಣಾಮಲೈ ಅವರ ತಂಡವು ಕೆದಕಿರುವ ಕಚ್ಚಾತೀವು ವಿಚಾರವನ್ನೂ ಸ್ವಲ್ಪ ಸಮಗ್ರದೃಷ್ಟಿಯಿಂದ ಅರ್ಥಮಾಡಿಕೊಳ್ಳುವ ವ್ಯವಧಾನ ತೋರಬೇಕು. ರಾಷ್ಟ್ರೀಯತೆ ವಿಚಾರದಲ್ಲಿ ಮೋದಿಯವರ ಬಿಜೆಪಿಯ ಟ್ರಾಕ್ ರೆಕಾರ್ಡ್ ಗಟ್ಟಿಯಾಗಿದೆ ಎಂಬುದು ಒಪ್ಪುವ ಮಾತೇ ಆಗಿದ್ದರೂ, ಇಂದಿರಾ ಗಾಂಧಿ ಸೇರಿದಂತೆ ಈ ಹಿಂದಿನವರೆಲ್ಲ ದೇಶವನ್ನು ಬೇರೆಯವರಿಗೆ ಮಾರಿಬಿಡೋಣ ಎಂಬ ಉದ್ದೇಶಕ್ಕೇ ಬದುಕಿದ್ದರು ಎಂಬಂತೆ ಬಿಂಬಿಸುವುದು ಅತಿರೇಕ.

ಮೊದಲಿಗೆ, 1974ರಲ್ಲಿ ಅಂತಾರಾಷ್ಟ್ರೀಯ ಸಾಗರ ಗಡಿ ನಿರ್ಣಯವಾಗುವ ಹೊತ್ತಿನಲ್ಲಿ ಕಚ್ಚಾತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಡುವ ನಿರ್ಣಯವು ಅಣ್ಣಾಮಲೈ ಅವರ ಮಾಹಿತಿ ಹಕ್ಕು ಅರ್ಜಿಯಿಂದ ಉದ್ಭವಿಸಿದ ಬ್ರೇಕಿಂಗ್ ನ್ಯೂಸ್, ಶಾಕಿಂಗ್ ನ್ಯೂಸ್ ಏನೂ ಅಲ್ಲ. ಈಗ ಚುನಾವಣೆಯ ಎದುರಿನಲ್ಲಿ ಮೋದಿಯವರು ಹೋದಲೆಲ್ಲ, “ನೋಡ್ರೀ..ಕಾಂಗ್ರೆಸ್ ದೇಶದ ಸಾರ್ವಭೌಮತೆ ಹಾಳುಮಾಡುವ ನಿರ್ಣಯ ತೆಗೆದುಕೊಂಡಿದ್ದ ಶಾಕಿಂಗ್ ಸತ್ಯ ಈಗಷ್ಟೇ ಹೊರಗೆ ಬರ್ತಿದೆ” ಎಂಬ ಧಾಟಿಯಲ್ಲಿ ಮಾತಾಡುತ್ತಿರುವುದು ಸಹ ಗಿಮಿಕ್. ಏಕೆಂದರೆ ಕಚ್ಚಾತೀವು ಕುರಿತ ಮಾಹಿತಿಗಳು ಪಾರ್ಲಿಮೆಂಟ್, ನ್ಯಾಯಾಂಗ ಸೇರಿದಂತೆ ಹಲವೆಡೆಗಳಲ್ಲಿ ಚರ್ಚೆಯಾಗಿವೆ. ಈಗೇನೋ ಬಿಜೆಪಿಯು ಹೊಸದಾಗಿ ಅನ್ವೇಷಿಸಿ ಹೊರಗೆಳೆದು ತನ್ನ ನಿಲುವು ಸ್ಪಷ್ಟಪಡಿಸುತ್ತಿರುವಂಥ ಸಂಗತಿಯೂ ಇದಲ್ಲ. ಅಲ್ಲಿನ ಪ್ರಮುಖ ಪಕ್ಷಗಳಾದ ಡಿಎಂಕೆ ಹಾಗೂ ಎಐಎಡಿಎಂಕೆಗಳೆರಡೂ ಈ ಹಿಂದಿನ ದಶಕಗಳಲ್ಲಿ ಆಗಾಗ ಕಚ್ಚಾತೀವು ಪರವಾಗಿ ಧ್ವನಿ ಎತ್ತಿವೆ.

ಕಚ್ಚಾತೀವು ದ್ವೀಪ- ಪ್ರಧಾನಿ ನರೇಂದ್ರ ಮೋದಿ (ಸಾಂಕೇತಿಕ ಚಿತ್ರ)
Katchatheevu island: 'ಶ್ರೀಲಂಕಾಕ್ಕೆ ಕಚ್ಚತೀವು ದ್ವೀಪ ಬಿಟ್ಟುಕೊಟ್ಟ ಕಾಂಗ್ರೆಸ್, ಅದನ್ನು ಎಂದಿಗೂ ನಂಬಲು ಸಾಧ್ಯವಿಲ್ಲ'- ಪ್ರಧಾನಿ ಮೋದಿ

ತಮಿಳುನಾಡಿನ ವಿಧಾನಸಭೆಯು ಕಚ್ಚಾತೀವು ವಿಷಯದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಮತ್ತೆ ಅದನ್ನು ತಮಿಳುನಾಡಿಗೆ ಸೇರಿಸಬೇಕೆಂದು ಆಗ್ರಹಿಸಿ ಈ ಹಿಂದೆ ಎರಡು ಬಾರಿ ನಿರ್ಣಯ ಸ್ವೀಕರಿಸಿದೆ. ಆಗಸ್ಟ್ 2015ರಲ್ಲಿ ತನ್ನ ನಿವಾಸಕ್ಕೆ ಭೇಟಿ ಕೊಟ್ಟಿದ್ದ ಇದೇ ಪ್ರಧಾನಿ ಮೋದಿಯವರಿಗೆ ಜಯಲಲಿತಾ ನೀಡಿದ್ದ ಅರಿಕೆ ಪತ್ರದಲ್ಲಿ ಕಚ್ಚಾತೀವು ಪ್ರದೇಶವನ್ನು ಕೇಂದ್ರ ಸರ್ಕಾರವು ಮರುವಶಪಡಿಸಿಕೊಳ್ಳಬೇಕು ಎಂಬ ಮನವಿಯೂ ಸೇರಿತ್ತು. ಬಹುಶಃ ಆಗ ಮೋದಿಯವರಿಗೆ ಇದನ್ನೊಂದು ರಾಜಕೀಯ ಹಾಗೂ ರಾಷ್ಟ್ರವಾದದ ಅಸ್ತ್ರವಾಗಿಸಿಕೊಳ್ಳುವುದಕ್ಕೆ ಕಾಲ ಪಕ್ವವಾಗಿಲ್ಲ ಅನ್ನಿಸಿದ್ದಿರಬೇಕು.

2013ರಲ್ಲಿ ಈ ಬಗ್ಗೆ ಆಗಿನ ಕೇಂದ್ರ ಸರ್ಕಾರವು ಪ್ರತಿಕ್ರಿಯೆ ಸಲ್ಲಿಸಬೇಕೆಂದು ಕೋರಿ ಜಯಲಲಿತಾ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದ ಸಂದರ್ಭದಲ್ಲಿ ಅವತ್ತಿನ ಯುಪಿಎ ಸರ್ಕಾರ ನೀಡಿದ್ದ ಉತ್ತರ ಎಂದರೆ- “ಕಚ್ಚಾತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಿದ್ದೇವೆ ಎಂಬ ಅಂಶವೇ ಉದ್ಭವವಾಗುವುದಿಲ್ಲ, ಏಕೆಂದರೆ ಮೊದಲಿನಿಂದಲೂ ಅದು ಸಂಪೂರ್ಣವಾಗಿ ನಮ್ಮ ಅಧೀನದಲ್ಲಿರಲಿಲ್ಲ. ಹೀಗಾಗಿ ಈ ವಿಷಯದಲ್ಲಿ ಸಂಸತ್ತಿನ ಸಮ್ಮತಿ ಕೇಳುವ ಪ್ರಮೇಯ ಬರಲಿಲ್ಲ” ಎಂದು. ಅದಾಗಿ ಆಗಸ್ಟ್ 2014ರ ವೇಳೆಗೆ ಮೀನುಗಾರರ ಬಂಧನದ ಸಂಬಂಧ ವಿಷಯವೊಂದು ಸುಪ್ರೀಂಕೋರ್ಟ್ ಮುಂದೆ ಬಂದಾಗಲೂ ಕಚ್ಚಾತೀವು ಚರ್ಚೆಯಾಗಿತ್ತು. ಆಗಷ್ಟೇ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಿದ್ದ ಸಂದರ್ಭದಲ್ಲಿ ಕೇಂದ್ರದ ಪರವಾಗಿ ಅಟಾರ್ನಿ ಜನರಲ್ ಮುಕುಲ್ ರೋಹ್ತಗಿ ಹೇಳಿದ್ದ ಮಾತು- “ಕಚ್ಚಾತೀವು ದ್ವೀಪವನ್ನು ಶ್ರೀಲಂಕಾದಿಂದ ಮರಳಿ ಪಡೆಯಲಾಗುವುದಿಲ್ಲ. ಹಾಗೇನಾದರೂ ಮಾಡುವುದಿದ್ದರೆ ಅದಕ್ಕಾಗಿ ಯುದ್ಧವನ್ನೇ ಮಾಡಬೇಕಾಗುತ್ತದೆ” ಅಂತ.

ಕಚ್ಚಾತೀವು ಭಾರತದ್ದೋ ಶ್ರೀಲಂಕಾದ್ದೋ ಎಂಬುದರ ಚರಿತ್ರೆ ಸಹ ಸಂಕೀರ್ಣ. 1921ರಲ್ಲಿ ಮೊದಲ ಬಾರಿಗೆ ಆಗಿನ ಸಿಲೋನ್ ಮತ್ತು ಮದ್ರಾಸ್ ಪ್ರಸಿಡೆನ್ಸಿ ಈ ಜಾಗದ ಬಗ್ಗೆ ನಿಷ್ಕರ್ಷೆ ಮಾಡಿದವು. 285 ಎಕರೆ ವ್ಯಾಪ್ತಿಯ ಆ ದ್ವೀಪದಲ್ಲಿ ಯಾರೂ ವಾಸವಿರಲಿಲ್ಲ. ಆದರೆ ತಮಿಳುನಾಡು ಮತ್ತು ಸಿಲೋನ್ ಎರಡೂ ಕಡೆಯಿಂದ ಮೀನುಗಾರರು ಅಲ್ಲಿಗೆ ಹೋಗುತ್ತಿದ್ದರು. ಆ ಕಾಲಕ್ಕೆ ಸಿಲೋನ್ ಮತ್ತು ಭಾರತಗಳೆರಡೂ ಬ್ರಿಟಿಷರದ್ದೇ ವಸಾಹತಾಗಿದ್ದ ಕಾರಣ ಅದರ ಪ್ರತಿನಿಧಿಗಳೇ ಮಾತಿಗೆ ಕುಳಿತರು. ಸೇತುಪತಿ ಸಾಮ್ರಾಜ್ಯದ ರಾಜನು ಕಚ್ಚಾತೀವು ದ್ವೀಪದ ಮೇಲೆ ಹಿಡಿತ ಇಟ್ಟುಕೊಂಡಿದ್ದರಿಂದ ಅದು ಮದ್ರಾಸ್ ಪ್ರಸಿಡೆನ್ಸಿಗೇ ಸೇರಬೇಕು ಎಂಬ ವಾದವನ್ನು ಇತ್ತಲಿನವರು ಮಂಡಿಸಿದರಾದರೂ ಯಾವುದೇ ನಿರ್ಣಯ ಹೊರಬರಲಿಲ್ಲ. ಭಾರತ ಮತ್ತು ಶ್ರೀಲಂಕಾಗಳು ಒಂದು ವರ್ಷದ ಅಂತರದಲ್ಲಿ ಸ್ವತಂತ್ರವಾದ ನಂತರವೂ ಎರಡೂ ಕಡೆಯವರು ಕಚ್ಚಾತೀವು ಸುತ್ತಮುತ್ತ ಮೀನುಗಾರಿಕೆ ಜಾರಿಯಲ್ಲಿಟ್ಟರು. ಇದೇ ಕಾರಣಕ್ಕೆ ಸಂಘರ್ಷಗಳೂ ಆಗುತ್ತಿದ್ದವು.

ಇದಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ 1974ರಲ್ಲಿ ಶ್ರೀಲಂಕಾ ಜತೆ ಒಪ್ಪಂದದಲ್ಲಿ ಕಚ್ಚಾತೀವು ಪ್ರದೇಶವನ್ನು ಅದರ ಸುಪರ್ದಿಗೆ ಬಿಟ್ಟ ಭಾರತ, 1976ರಲ್ಲಿ ಅದಕ್ಕೆ ಪ್ರತಿಫಲವನ್ನೂ ಪಡೆಯಿತು. ಮತ್ಸ್ಯ ಸಂಪತ್ತು ಹಾಗೂ ಸಾಗರ ಜೀವವೈವಿಧ್ಯದ 3,000 ಚದರ ಮೈಲಿ ವ್ಯಾಪ್ತಿಯ ವಾಜ್ ಬ್ಯಾಂಕ್ (Wadge Bank) ಸಮುದ್ರ ಪ್ರಾಂತ್ಯದಲ್ಲಿ ಶ್ರೀಲಂಕಾವು ತನ್ನ ಹಕ್ಕೊತ್ತಾಯ ಹಿಂತೆಗೆದುಕೊಂಡಿತು. ಈ ಕಾರಣಕ್ಕಾಗಿಯೇ ಇವತ್ತಿಗೆ ಮೋದಿ ಸರ್ಕಾರವು ಅಲ್ಲಿ ತೈಲದ ಗಣಿಗಾರಿಕೆ ಪ್ರಸ್ತಾಪ ಮುಂದೆ ಮಾಡಿದೆ. ಇದಕ್ಕೆ ಮೀನುಗಾರರ ಪ್ರತಿರೋಧ ಎದುರಾಗಿರುವುದು ಬೇರೆ ವಿಷಯ.

ಆಯಾಕಾಲದ ಜಾಗತಿಕ ರಾಜಕಾರಣಗಳು ಕೆಲವು ರಾಜಿಗಳಿಗೆ ಪ್ರೇರೇಪಿಸುತ್ತವೆ. 1971ರಲ್ಲಿ ಅವತ್ತಿನ ಪೂರ್ವ ಪಾಕಿಸ್ತಾನ (ಈಗಿನ ಬಾಂಗ್ಲಾದೇಶ) ವಿಮೋಚನೆ ಯುದ್ಧದಲ್ಲಿ ಭಾರತ ಪಾಲ್ಗೊಂಡಾಗ ಅಕ್ಕಪಕ್ಕದಲ್ಲಿ ಒಬ್ಬರೂ ಮಿತ್ರರಿರಲಿಲ್ಲ. ಅಮೆರಿಕವು ಭಾರತದ ವಿರುದ್ಧವಿತ್ತು. ಚೀನಾವನ್ನು ಸಹ ಭಾರತದ ಜತೆ ಯುದ್ಧಕ್ಕೆ ಅವತ್ತಿನ ಅಮೆರಿಕ ಪ್ರಚೋದಿಸಿತ್ತಾದರೂ ಚೀನಾವು ಸೇನಾ ನಿಯೋಜನೆಯನ್ನೇನೂ ಮಾಡದೇ ಭಾರತದ ಮೇಲೆ ಶೀಘ್ರ ಕದನವಿರಾಮದ ಒತ್ತಡವನ್ನಷ್ಟೇ ಹಾಕಿತ್ತು. ಅಲಿಪ್ತ ನೀತಿಯ ಪ್ರಕಾರ ಸುಮ್ಮನೇ ಕೂರಬೇಕಿದ್ದ ಶ್ರೀಲಂಕಾ ಸಹ ಪಾಕಿಸ್ತಾನವನ್ನು ಬೆಂಬಲಿಸಿತು. ಭಾರತವು ತಮಿಳು-ಸಿಂಹಳೀಯರ ಸಂಘರ್ಷದಲ್ಲಿ ಸಹ ಹೀಗೆಯೇ ತನ್ನನ್ನು ತುಂಡುಮಾಡೀತು ಎಂಬ ಆತಂಕವು ಶ್ರೀಲಂಕಾದ ಆ ನಡೆಗೆ ಕಾರಣ. ಅವತ್ತಿನ ಪಶ್ಚಿಮ ಪಾಕಿಸ್ತಾನದ ವಿಮಾನಗಳು ಪೂರ್ವ ಪಾಕಿಸ್ತಾನ ಮುಟ್ಟಿಕೊಳ್ಳುವುದಕ್ಕೆ ಭಾರತದ ಮೇಲೆ ಹಾರುವುದಕ್ಕೆ ಸಾಧ್ಯವಿರಲಿಲ್ಲ. ಹೀಗಾಗಿ ಅವು ಶ್ರೀಲಂಕಾ ಸುತ್ತಿಕೊಂಡು, ಅಲ್ಲಿ ಇಂಧನ ಪೂರಣವನ್ನೂ ಮಾಡಿಕೊಂಡು, ಪೂರ್ವ ಪಾಕಿಸ್ತಾನ (ಬಾಂಗ್ಲಾದೇಶ)ದ ಯುದ್ಧಕ್ಷೇತ್ರಕ್ಕೆ ಬರುತ್ತಿದ್ದವು.

ಕಚ್ಚಾತೀವು ದ್ವೀಪ- ಪ್ರಧಾನಿ ನರೇಂದ್ರ ಮೋದಿ (ಸಾಂಕೇತಿಕ ಚಿತ್ರ)
ಕಚ್ಚತೀವು ದ್ವೀಪವನ್ನು ಇಂದಿರಾ ಗಾಂಧಿ ಸರ್ಕಾರ ಶ್ರೀಲಂಕಾಕ್ಕೆ ನೀಡಿತು: ಪ್ರಧಾನಿ ಮೋದಿ ಲೋಕಸಭೆಯಲ್ಲಿ ಆರೋಪ

ಭಾರತ ಆ ಯುದ್ಧವನ್ನು ಗೆದ್ದಿತು. ಆದರೆ ಶ್ರೀಲಂಕಾದಂಥ ದೇಶಗಳ ಆತಂಕ ಕಡಿಮೆ ಮಾಡಿ ತನ್ನ ಸ್ನೇಹದ ಪಟ್ಟಿಯಲ್ಲಿರಿಸಿಕೊಳ್ಳಬೇಕೆಂಬ ಚಿಂತನೆ ಅವತ್ತಿಗೆ ಭಾರತದ ತಲೆಗೆ ಬಂತು. ಅದರ ಭಾಗವಾಗಿಯೇ ಕಚ್ಚಾತೀವು ಶ್ರೀಲಂಕಾಕ್ಕೆ, ವಾಜ್ ಬ್ಯಾಂಕ್ ಭಾರತಕ್ಕೆ ಎಂಬ ರಾಜಿಮಾರ್ಗ ತೆರೆದುಕೊಂಡಿದ್ದಾಗಿ ಜಾಗತಿಕ ವಿಶ್ಲೇಷಕರು ಹೇಳುತ್ತಾರೆ.

ಇಂದಿರಾ ಗಾಂಧಿ ಸರ್ಕಾರ ಇನ್ನಷ್ಟು ದೃಢವಾಗಿ ವ್ಯವಹರಿಸಬಹುದಿತ್ತಾ? ದ್ವೀಪ ಮತ್ತು ವಾಜ್ ಬ್ಯಾಂಕ್ ಸಾಗರ ಪ್ರದೇಶಗಳೆರಡರಲ್ಲೂ ಭಾರತದ ಅಸ್ತಿತ್ವವನ್ನೇ ಸ್ಥಾಪಿಸಬಹುದಿತ್ತಾ ಎಂಬ ಪ್ರಶ್ನೆಗೆ ಇವತ್ತು ನಿಂತುಕೊಂಡು ಹೌದೆಂಬ ಉತ್ತರವನ್ನು ನಾವ್ಯಾರಾದರೂ ಹೇಳಬಹುದೇನೋ. ಹಾಗೆ ಹೇಳುವುದರಲ್ಲಿ ತಪ್ಪಿಲ್ಲ. ಆದರೆ, ಆ ಪರ್ವತದಲ್ಲಿ ಹುಲ್ಲುಕಡ್ಡಿಯೂ ಬೆಳೆಯುವುದಿಲ್ಲ ಎಂದು ಅಕ್ಸಾಯ್ ಚೀನ್ ಅನ್ನು ಚೀನಾಕ್ಕೇ ಬಿಟ್ಟುಕೊಟ್ಟ ನೆಹರು ಪ್ರಮಾದಕ್ಕೆ ಇದನ್ನೂ ಸಮೀಕರಿಸುವಂತಿಲ್ಲ.

ಇಲ್ಲಿಲ್ಲ..ಇದೂ ಅದೇಮಟ್ಟದಲ್ಲಿ ಭಾರತದ ಸಾರ್ವಭೌಮತೆಯನ್ನು ಹಾನಿ ಮಾಡಿದ ಘಟನೆ ಎಂದೇ ಬಿಜೆಪಿಯಾಗಲೀ, ಮೋದಿ ತಂಡವಾಗಲೀ ವಾದಿಸುತ್ತದೆ ಎಂದಾದರೆ ಅವರು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾಗುತ್ತದೆ.

ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರ, ಅಕ್ಸಾಯ್ ಚಿನ್ ಇಲ್ಲೆಲ್ಲ ಭಾರತದ ಸಂಸತ್ತೇ ಅಂಗೀಕರಿಸಿರುವ ನಿರ್ಣಯವೊಂದಿದೆ. ಅದೆಂದರೆ, ಇದು ಭಾರತದ ಅವಿಭಾಜ್ಯ ಅಂಗವಾಗಿದ್ದು, ಸೂಕ್ತ ಸಮಯದಲ್ಲಿ ಭಾರತ ಅದನ್ನು ಮರುವಿಲೀನಗೊಳಿಸಿಕೊಳ್ಳುತ್ತದೆ ಅಂತ. ಕಚ್ಚಾತೀವು ಸಹ ಅಂಥದೇ ಸಂಗತಿ ಎಂದಾದರೆ ಮೋದಿ ಸರ್ಕಾರ ಈವರೆಗೆ ಸಂಸತ್ತಿನಲ್ಲಿ ಅಂಥದೊಂದು ನಿರ್ಣಯ ಮಾಡಿಲ್ಲವೇಕೆ ಹಾಗೂ ಮುಂದೆ ಮಾಡಲಿದೆಯಾ ಎಂಬುದಕ್ಕೆ ನಿಖರ ಉತ್ತರ ಕೊಡಬೇಕಾಗುತ್ತದೆ. ಕಚ್ಚಾತೀವು ವಿಚಾರದಲ್ಲಿ ಕಾಂಗ್ರೆಸ್-ಡಿಎಂಕೆಗಳನ್ನು ಬಯ್ದುಕೊಂಡಿರುವುದೇನೋ ಸರಿ, ಆದರೆ ಶ್ರೀಲಂಕಾದ ವಿಚಾರದಲ್ಲಿ ಮುಂಬರುವ ದಿನಗಳಲ್ಲಿ ತನ್ನ ವಿದೇಶ ನೀತಿಯಲ್ಲಾಗುವ ಬದಲಾವಣೆ ಏನು ಎಂಬುದನ್ನೂ ಮೋದಿ ಸರ್ಕಾರ ಜನರೆದುರು ಇಡಬೇಕಾಗುತ್ತದೆ.

ಕಚ್ಚಾತೀವು ಪ್ರಕರಣವು ಭಾರತದ ಸಾರ್ವಭೌಮತೆಗೆ ಅಂದಿನ ಕಾಂಗ್ರೆಸ್ ಸರ್ಕಾರ ಮಾಡಿದ ಹಾನಿ ಎಂಬ ಮೋದಿ ಮಾತು ರಾಜಕಾರಣಿಯ ಹಂತಕ್ಕೇನೋ ಸರಿ. ಆದರೆ ಸರಿಪಡಿಸುವ ಜವಾಬ್ದಾರಿ ಸಹ ಅಧಿಕಾರದಲ್ಲಿರುವವರಿಗೆ ಬರುತ್ತದಲ್ಲ. ಹಾಗಾದರೆ, ಕೇಂದ್ರವು ಸುಪ್ರೀಂಕೋರ್ಟಿನಲ್ಲಿ ಈ ಹಿಂದೆ ಕಚ್ಚಾತೀವು ವಿಚಾರದಲ್ಲಿ 1974ರ ಒಪ್ಪಂದ ರದ್ದುಗೊಳಿಸಲಾಗದು ಎಂದಿದ್ದನ್ನು ಹಿಂದೆ ತೆಗೆದುಕೊಳ್ಳುವ ಕೆಲಸವನ್ನು ಮೋದಿ ಸರ್ಕಾರ ಮಾಡಲಿದೆಯಾ?

ತುರ್ತು ಪರಿಸ್ಥಿತಿ, ಭಿಂದ್ರನವಾಲೆಯಂಥವರನ್ನು ಸಲಹಿದ್ದು ಸೇರಿದಂತೆ ಇಂದಿರಾ ಗಾಂಧಿಯನ್ನು ಟೀಕಿಸುವುದಕ್ಕೆ ನೂರಾರು ಕಾರಣಗಳಿವೆ. ಹಾಗಂತ, ಭಾರತದ ಸಾರ್ವಭೌಮತ್ವ ಮತ್ತು ವಿದೇಶ ವ್ಯವಹಾರಗಳಲ್ಲಿ ಕೇವಲ ರಾಜಿ ಮಾಡಿಕೊಂಡು ಬದುಕಿದ್ದರು ಎಂಬಂತೆ ಮಾತನಾಡುವುದಕ್ಕೆ ಇತಿಹಾಸದ ಬೆಂಬಲವಂತೂ ಇಲ್ಲ.

1950ರಲ್ಲಿ ಭಾರತದ ರಕ್ಷಣೆಯ ವ್ಯಾಪ್ತಿಯಲ್ಲಷ್ಟೇ ತಾನು ಎಂದು ಸಿಕ್ಕೀಂನ ಚೋಗ್ಯಲ್ ರಾಜಮನೆತನ ಮುಂದುವರಿದಿತ್ತು. ಅತ್ತ ಚೀನಾವು ಸಿಕ್ಕಿಂ ಟಿಬೆಟ್ಟಿನದ್ದೇ ಭಾಗವಾಗಿರುವುದರಿಂದ ಅದು ತನಗೆ ಸೇರಿದ್ದೆಂಬ ನಿಲವಿನಲ್ಲಿತ್ತು. ಹೀಗಿರುವಾಗ 1975ರ ವೇಳೆಗೆ ಸಿಕ್ಕಿಂ ಅನ್ನು ಅಧಿಕೃತವಾಗಿ ಭಾರತದೊಳಗೆ ವಿಲೀನಗೊಳಿಸಿಕೊಳ್ಳುವುದರಲ್ಲಿ ಇಂದಿರಾ ಗಾಂಧಿಯವರ ಬಲವಂತದ ನಡೆ ಮತ್ತು ತಂತ್ರಗಾರಿಕೆಗಳು ಕೆಲಸ ಮಾಡಿದ್ದವು. 2003ರವರೆಗೂ ಸಿಕ್ಕಿಂ ಅನ್ನು ಚೀನಾವು ಭಾರತದ ಭಾಗ ಎಂದು ಗುರುತಿಸಿರಲಿಲ್ಲ ಎಂಬುದರಲ್ಲೇ ಇದು ಎಂಥ ಸೂಕ್ಷ್ಮ ವಿಷಯವಾಗಿತ್ತು ಎಂಬುದು ಅರ್ಥವಾಗುತ್ತದೆ.

ಕಚ್ಚಾತೀವು ದ್ವೀಪ- ಪ್ರಧಾನಿ ನರೇಂದ್ರ ಮೋದಿ (ಸಾಂಕೇತಿಕ ಚಿತ್ರ)
ಶ್ರೀಲಂಕಾ ಹಣದುಬ್ಬರದ ಕಥೆ! (ಹಣಕ್ಲಾಸು)

1984ರ ಏಪ್ರಿಲ್ ತಿಂಗಳಿನಲ್ಲಿ ಆಪರೇಷನ್ ಮೇಘದೂತ್ ಮೂಲಕ ಭಾರತವು ಸಿಯಾಚಿನ್ ಎಂಬ ಕಾರ್ಯತಂತ್ರ ಸೂಕ್ಷ್ಮ ಹಿಮಪರ್ವತವನ್ನು ಪಾಕಿಸ್ತಾನಕ್ಕಿಂತ ಮೊದಲಿಗನಾಗಿ ವಶಕ್ಕೆ ಪಡೆಯಿತು. ಹಿಮತಪ್ಪಲಿನಲ್ಲಿ ಚೀನಾ-ಪಾಕಿಸ್ತಾನಗಳ ಸಂಗಮವನ್ನು ತುಂಡರಿಸಿ, ಅಲ್ಲಿಂದ ಇಬ್ಬರ ಮೇಲೂ ನಿಗಾ ಇಡುವ ಮಿಲಿಟರಿ ಪ್ರಾಮುಖ್ಯದ ಅತಿದುರ್ಗಮ ಜಾಗ ಇದು. ಇದು ಭಾರತದ ಮಿಲಿಟರಿ ಪರಾಕ್ರಮವೇ ಹೌದು. ಆದರೆ ಸರ್ಜಿಕಲ್ ಸ್ಟ್ರೈಕ್, ವಾಯುದಾಳಿಗಳಲ್ಲಿ ಮೋದಿಯವರ ರಾಜಕೀಯ ನಾಯಕತ್ವಕ್ಕೆ ಶ್ರೇಯಸ್ಸು ಸಿಕ್ಕಂತೆ, ಸಿಯಾಚಿನ್ ಶ್ರೇಯಸ್ಸಿನ ಪಾಲು ಅಂದಿನ ರಾಜಕೀಯ ನಾಯಕತ್ವವಾದ ಇಂದಿರಾ ಪಾಲಿಗೂ ಸಲ್ಲುತ್ತದೆಯಲ್ಲವೇ?

ಮೋದಿ ವರ್ಸಸ್ ಇಂದಿರಾ ಅಥವಾ ಬಿಜೆಪಿ ವರ್ಸಸ್ ಕಾಂಗ್ರೆಸ್ ಇವರಿಬ್ಬರಲ್ಲಿ ಯಾರು ಉತ್ತಮರು ಎಂಬ ಪ್ರಶ್ನೆಯ ಬೆಂಬತ್ತಿದ ಲೇಖನ ಇದಲ್ಲವೇ ಅಲ್ಲ. ಆದರೆ ಬಿಜೆಪಿಯಾಗಲೀ, ಕಾಂಗ್ರೆಸ್ ಆಗಲಿ ಮತ್ಯಾವುದೇ ರಾಜಕೀಯ ಗುಂಪು ತನ್ನ ಕೈಯಲ್ಲಿ ಮಾತ್ರ ದೇಶದ ಸಾರ್ವಭೌಮತೆ ಹಾಗೂ ಉಳಿದವರೆಲ್ಲ ಕಪಟಿಗಳು ರಾಷ್ಟ್ರದ್ರೋಹಿಗಳು ಎಂಬರ್ಥದಲ್ಲಿ ಮಾತನಾಡಿದಾಗಲೆಲ್ಲ ಕೆಲವೊಂದಿಷ್ಟು ತಥ್ಯಗಳ ಪ್ರತಿರೋಧ ದಾಖಲಿಸಬೇಕಾಗುತ್ತದೆ. 2010ರಲ್ಲಿ ಮಹಾರಾಷ್ಟ್ರದಲ್ಲಿ ಆದರ್ಶ ಸೊಸೈಟಿ ಹಗರಣ ಬೆಳಕಿಗೆ ಬಂದಾಗ ಬಿಜೆಪಿ ಅಬ್ಬರಿಸಿದ ಧಾಟಿ ಹೇಗಿತ್ತೆಂದರೆ- ನೋಡ್ರೀ, ಈ ಕಾಂಗ್ರೆಸ್ಸಿನವರು ಎಷ್ಟು ಹೇಸಿಗೆಗೆಟ್ಟವರೆಂದರೆ ಹುತಾತ್ಮ ಸೈನಿಕರ ಕುಟುಂಬಗಳಿಗೆ ಸಲ್ಲಬೇಕಿದ್ದ ವಸತಿ ಸಂಕೀರ್ಣಗಳನ್ನು ಸಹ ತಾವು ನುಂಗಿದ್ದಾರೆ, ಯೋಧರ ವಿಷಯದಲ್ಲೇ ಹೀಗೆ ನಡೆದುಕೊಳ್ಳುವವರು ದೇಶಕ್ಕೇನು ಒಳ್ಳೇದು ಮಾಡಿಯಾರು ಅಂತ.. ಈ ಆದರ್ಶ ಸೊಸೈಟಿ ಹಗರಣದಲ್ಲಿ ಜೈಲು ಸೇರಬೇಕಿದ್ದ ಅಂದಿನ ಕಾಂಗ್ರೆಸ್ ಮುಖ್ಯಮಂತ್ರಿ ಅಶೋಕ ಚವ್ಹಾಣರನ್ನು ಮೊನ್ನೆ ಫೆಬ್ರವರಿ ಅಂತ್ಯಕ್ಕೆ ಪಕ್ಷಕ್ಕೆ ಸೇರಿಸಿಕೊಂಡ ಬಿಜೆಪಿ ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಕಳುಹಿಸಿದೆ. ಅಶೋಕ್ ಚವ್ಹಾಣ್ ಈಗ ಅಪ್ಪಟ ದೇಶಪ್ರೇಮಿ!

ದೇಶದ ಏಕತೆ-ಸಾರ್ವಭೌಮತೆಗಳಿಗೆ ಮೋದಿ ಅವಧಿಯ ಆಡಳಿತ ಹಲವು ಆಯಾಮಗಳಲ್ಲಿ ಕೊಡುಗೆ ಕೊಟ್ಟಿದೆ. ಹಾಗಂತ ಇನ್ಯಾರನ್ನೋ ತುಂಬ ಸುಲಭಕ್ಕೆ ವಿಲನ್ ಸ್ಥಾನದಲ್ಲಿ ನಿಲ್ಲಿಸಿಬಿಡುವ ಪರವಾನಗಿಯನ್ನು ದೇಶದ ಜನತೆ ಮೋದಿಯವರಿಗೆ ಕೊಡಬೇಕಿಲ್ಲ. ಮೋದಿ ಹೇಳಿದ್ದಾರೆಂದಮೇಲೆ ಎಲ್ಲವೂ ಸರಿಯೇ ಇರುತ್ತದೆ ಎಂಬ ಜೀತಕ್ಕೂ ನಮ್ಮ ಮನಸ್ಸುಗಳನ್ನು ಬಿಡಬೇಕಿಲ್ಲ.

-ಚೈತನ್ಯ ಹೆಗಡೆ

cchegde@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com