ತಮಿಳುನಾಡು: ಬಿಜೆಪಿ ಅಭ್ಯರ್ಥಿಯ ಬೆಂಬಲಿಗರು ಎನ್ನಲಾದ ಮೂವರಿಂದ 4 ಕೋಟಿ ರೂ. ವಶ

ಫ್ಲೈಯಿಂಗ್ ಸ್ಕ್ವಾಡ್ ತಂಡವು ಭಾನುವಾರ ತಿರುನಲ್ವೇಲಿಗೆ ತೆರಳುತ್ತಿದ್ದ ಮೂವರಿಂದ 3.90 ಕೋಟಿ ರೂಪಾಯಿ ವಶಪಡಿಸಿಕೊಂಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರ ಬಳಿಯಲ್ಲಿ ಆ ಹಣವನ್ನು ಸಾಗಿಸಲು ಯಾವುದೇ ಮಾನ್ಯ ದಾಖಲೆಗಳು ಇರಲಿಲ್ಲ.
ವಶಪಡಿಸಿಕೊಂಡ ಹಣ
ವಶಪಡಿಸಿಕೊಂಡ ಹಣ

ಚೆನ್ನೈ: ಚುನಾವಣೆ ನಿಮಿತ್ತ ತಮಿಳುನಾಡಿನ ತಿರುನಲ್ವೇಲಿಗೆ ತೆರಳುತ್ತಿದ್ದ ಮೂವರಿಂದ ಫ್ಲೈಯಿಂಗ್ ಸ್ಕ್ವಾಡ್ ತಂಡ 4 ಕೋಟಿ ರೂಪಾಯಿ ವಶಪಡಿಸಿಕೊಂಡಿದೆ ಎಂದು ಪೊಲೀಸರು ಮತ್ತು ಚುನಾವಣಾ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಆದಾಯ ತೆರಿಗೆ ಇಲಾಖೆಯು ಈ ಬಗ್ಗೆ ವಿವರವಾದ ತನಿಖೆಯನ್ನು ಪ್ರಾರಂಭಿಸಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ (ಸಿಇಒ) ಕಚೇರಿ ತಿಳಿಸಿದೆ.

ಮೂವರು ವ್ಯಕ್ತಿಗಳು ಇಲ್ಲಿನ ಎಗ್ಮೋರ್‌ನಿಂದ ರೈಲಿನಲ್ಲಿ ತಿರುನಲ್ವೇಲಿಗೆ ತೆರಳುತ್ತಿದ್ದ ವೇಳೆ ನಿನ್ನೆ ತಡರಾತ್ರಿ ತಾಂಬರಂನಲ್ಲಿ ಅಧಿಕಾರಿಗಳ ತಂಡ ಅವರನ್ನು ತಡೆದು ಅವರ ಬಳಿಯಿದ್ದ 4 ಕೋಟಿ ರೂ.ಗಳನ್ನು ವಶಕ್ಕೆ ಪಡೆದಿದೆ. ಅವರ ಬಳಿಯಲ್ಲಿ ಆ ಹಣವನ್ನು ಸಾಗಿಸಲು ಯಾವುದೇ ಮಾನ್ಯ ದಾಖಲೆಗಳು ಇರಲಿಲ್ಲ.

ಬಿಜೆಪಿಯ ತಿರುನಲ್ವೇಲಿ ಲೋಕಸಭಾ ಅಭ್ಯರ್ಥಿ ನೈನಾರ್ ನಾಗೇಂದ್ರನ್ ಅವರ ಬೆಂಬಲಿಗರು ಎಂದು ಶಂಕಿಸಲಾಗಿದ್ದು, ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.

ಈಮಧ್ಯೆ, ನಾಗೇಂದ್ರನ್ ರಾಜ್ಯದಲ್ಲಿ ಮತದಾರರಿಗೆ ಹಣ ಹಂಚಲು ಯೋಜಿಸಿದ್ದಾರೆ ಎಂದು ಆರೋಪಿಸಿರುವ ಆಡಳಿತಾರೂಢ ಡಿಎಂಕೆ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ನೈನಾರ್ ನಾಗೇಂದ್ರನ್ ಅವರು ಮತದಾರರಿಗೆ ಹಂಚಲು ಹಲವು ಕೋಟಿಗಳಷ್ಟು ಹಣವನ್ನು ರಹಸ್ಯ ಸ್ಥಳಗಳಲ್ಲಿ ಸಂಗ್ರಹಿಸಿರುವ ಶಂಕೆ ಇದೆ ಎಂದು ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್‌ಎಸ್ ಭಾರತಿ ತಮಿಳುನಾಡು ಸಿಇಒ ಸತ್ಯಬ್ರತ ಸಾಹೂ ಅವರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ನಾಗೇಂದ್ರನ್ ಅವರಿಗೆ ಸೇರಿದ ಎಲ್ಲ ಸ್ಥಳಗಳಲ್ಲಿ ಶೋಧ ನಡೆಸಬೇಕು ಎಂದು ಪಕ್ಷ ಒತ್ತಾಯಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com