ಸಕ್ಕರೆ ಪ್ರಮಾಣ ಹೆಚ್ಚಳ ಹಿನ್ನೆಲೆಯಲ್ಲಿ ಅರವಿಂದ ಕೇಜ್ರಿವಾಲ್‌ಗೆ ಇನ್ಸುಲಿನ್ ನೀಡಲಾಗಿದೆ: ತಿಹಾರ್ ಜೈಲು ಅಧಿಕಾರಿಗಳು
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಅವರಿಗೆ ಕಡಿಮೆ ಡೋಸ್‌ನ ಇನ್ಸುಲಿನ್ ನೀಡಲಾಗಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
'ಏಮ್ಸ್ ವೈದ್ಯರ ಸಲಹೆಯ ಮೇರೆಗೆ ಸೋಮವಾರ ಸಂಜೆ ಕೇಜ್ರಿವಾಲ್ ಅವರಿಗೆ ಕಡಿಮೆ ಡೋಸ್‌ನ ಇನ್ಸುಲಿನ್‌ನ ಎರಡು ಘಟಕಗಳನ್ನು ನೀಡಲಾಗಿದೆ' ಎಂದು ತಿಹಾರ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾತ್ರಿ 7 ಗಂಟೆ ಸುಮಾರಿಗೆ ಕೇಜ್ರಿವಾಲ್ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ 217 ರಷ್ಟಿದ್ದು, ತಿಹಾರ್‌ನ ವೈದ್ಯರು ಅವರಿಗೆ ಇನ್ಸುಲಿನ್ ನೀಡಲು ನಿರ್ಧರಿಸಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಏಪ್ರಿಲ್ 20 ರಂದು ಮುಖ್ಯಮಂತ್ರಿಯವರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಏಮ್ಸ್ ತಜ್ಞರು, ಸಕ್ಕರೆ ಮಟ್ಟವು ಒಂದು ನಿರ್ದಿಷ್ಟ ಮಟ್ಟವನ್ನು ದಾಟಿದರೆ ಕೇಜ್ರಿವಾಲ್ ಅವರಿಗೆ ಇನ್ಸುಲಿನ್ ನೀಡಬಹುದು ಎಂದು ತಿಹಾರ್ ಜೈಲಿನ ವೈದ್ಯರಿಗೆ ಸಲಹೆ ನೀಡಿದ್ದರು ಎಂದು ಅವರು ಹೇಳಿದರು.
ಈಮಧ್ಯೆ, ತಿಹಾರ್ ಜೈಲಿನಲ್ಲಿ ಕೇಜ್ರಿವಾಲ್ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ 320 ದಾಟಿದೆ. ಕೆಲ ದಿನಗಳಿಂದ ಶುಗರ್ ಲೆವೆಲ್ ಹೆಚ್ಚಾಗುತ್ತಿದ್ದರೂ, ಜೈಲಿನಲ್ಲಿ ಅವರಿಗೆ ಇನ್ಸುಲಿನ್ ನೀಡುತ್ತಿರುವುದು ಇದೇ ಮೊದಲು ಎಂದು ಎಎಪಿ ಮೂಲಗಳು ತಿಳಿಸಿವೆ.
ದೆಹಲಿ ಸರ್ಕಾರವು ಈಗ ರದ್ದುಗೊಳಿಸಿರುವ ಅಬಕಾರಿ ನೀತಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲಅ ಅವರನ್ನು ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿತ್ತು. ಅವರು ಏಪ್ರಿಲ್ 1 ರಿಂದ ತಿಹಾರ್ ಜೈಲಿನಲ್ಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ