
ಡೆಹ್ರಾಡೂನ್: ಉತ್ತರಾಖಂಡದಲ್ಲಿ ಭಾರೀ ಮಳೆಯಿಂದಾಗಿ ಮನೆ ಕುಸಿತ, ಪ್ರವಾಹ ಮತ್ತು ರಾಜ್ಯದ ಹಲವು ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಿಂದಾಗಿ ಒಂದೇ ಕುಟುಂಬದ ಮೂವರು ಸೇರಿದಂತೆ 7 ಮಂದಿ ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
ಚಮೋಲಿ ಜಿಲ್ಲೆಯ ದೇವಚೌಲಿಯಲ್ಲಿ ನಿನ್ನೆ ಸಂಜೆಯಿಂದ ಮನೆ ಕುಸಿದು ಮಹಿಳೆ ಮತ್ತು ಮಗು ನಾಪತ್ತೆಯಾಗಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡವು ಸ್ಥಳಕ್ಕೆ ತೆರಳಿದೆ. ನಿನ್ನೆ ಸಂಜೆ ಸುರಿದ ಧಾರಾಕಾರ ಮಳೆಗೆ ಹರಿದ್ವಾರದ ಖಾರ್ಖಾರಿ ಪ್ರದೇಶದಲ್ಲಿ ಸುಖಿ ನದಿಯ ತಟದಲ್ಲಿ ನಿಲ್ಲಿಸಲಾಗಿದ್ದ ಸುಮಾರು ಒಂದು ಡಜನ್ ವಾಹನಗಳು ಕೊಚ್ಚಿಹೋಗಿವೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಎಸ್‌ಡಿಆರ್‌ಎಫ್ ಮತ್ತು ಆಡಳಿತದ ತಂಡಗಳನ್ನು ರಾಜ್ಯದ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೀಮಾಲಿ ಚೌಕಿ ಬಳಿಯ 20-25 ಮೀಟರ್ ಫುಟ್‌ಪಾತ್ ಕೊಚ್ಚಿಕೊಂಡು ಹೋಗಿದ್ದರಿಂದ ಕೇದಾರನಾಥ ಮಾರ್ಗದಲ್ಲಿ ಸಿಲುಕಿರುವ 200 ಪ್ರಯಾಣಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವಿಪತ್ತು ಕಾರ್ಯದರ್ಶಿ ವಿನೋದ್ ಕುಮಾರ್ ಸುಮನ್ ತಿಳಿಸಿದ್ದಾರೆ.
ಹರಿದ್ವಾರ ಜಿಲ್ಲೆಯ ಬಹದರಾಬಾದ್ ಪ್ರದೇಶದ ಭರ್ಪುರ್ ಗ್ರಾಮದಲ್ಲಿ ಭಾರೀ ಮಳೆಯಿಂದಾಗಿ ಮನೆ ಕುಸಿದು ಮೂವರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.
ತೆಹ್ರಿ ಜಿಲ್ಲೆಯ ಘನ್ಸಾಲಿ ಪ್ರದೇಶದ ಜಖನ್ಯಾಲಿ ಗ್ರಾಮದಲ್ಲಿ ಮೇಘಸ್ಫೋಟದ ನಂತರ ಸಂಭವಿಸಿದ ಭೂಕುಸಿತದಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರು - ಭಾನು ಪ್ರಸಾದ್ (50ವ), ಅವರ ಪತ್ನಿ ನೀಲಂ ದೇವಿ (45ವ) ಮತ್ತು ಮಗ ವಿಪಿನ್ (28ವ) ಮೃತಪಟ್ಟಿದ್ದಾರೆ. ವಿಪಿನ್ ಅವರನ್ನು ರಕ್ಷಿಸಲಾಯಿತು ಆದರೆ ಅವರನ್ನು ರಿಷಿಕೇಶದಲ್ಲಿರುವ ಏಮ್ಸ್‌ಗೆ ಕರೆದೊಯ್ಯುವಾಗ ಮೃತಪಟ್ಟರು ಎಂದು ತೆಹ್ರಿ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಬ್ರಿಜೇಶ್ ಭಟ್ ತಿಳಿಸಿದ್ದಾರೆ.
ಖಾರ್ಖಾರಿಯಲ್ಲಿ, ಕನ್ವಾರಿಯಾಕ್ಕೆ ಪಡಿತರ ಮತ್ತು ಅಗತ್ಯ ವಸ್ತುಗಳನ್ನು ಸಾಗಿಸುತ್ತಿದ್ದ ಟ್ರಕ್ ವಾಹನಗಳು ನೀರಿನಲ್ಲಿ ಕೊಚ್ಚಿಹೋದವು. ಈ ಸಂದರ್ಭದಲ್ಲಿ ಟ್ರಕ್ ನಲ್ಲಿ ಯಾರೂ ಇರಲಿಲ್ಲ.
ಹರಿದ್ವಾರದ ಹಲವು ಪ್ರದೇಶಗಳಲ್ಲಿ ರಸ್ತೆಗಳು ಮುಳುಗಡೆಯಾಗಿದ್ದು, ಕಂಖಾಲ್ ಪೊಲೀಸ್ ಠಾಣೆಗೂ ಮಳೆ ನೀರು ನುಗ್ಗಿದೆ. ಭೂಪತ್ವಾಲಾ, ಹರಿದ್ವಾರ, ನಯಾ ಹರಿದ್ವಾರ, ಕಂಖಾಲ್ ಮತ್ತು ಜ್ವಾಲಾಪುರದ ಹಲವು ಕಾಲೋನಿಗಳು ಮತ್ತು ಮಾರುಕಟ್ಟೆಗಳು ಸಹ ಜಲಾವೃತಗೊಂಡಿವೆ. ಪಿಥೋರಗಢ್ ಜಿಲ್ಲೆಯ ತಲ್ಲಾ ಗ್ರಾಮದಲ್ಲಿ ಭಾರೀ ಮಳೆಗೆ ಮನೆ ಕುಸಿದಿದೆ. ಗ್ರಾಮದಲ್ಲಿ ಇನ್ನೂ ಮೂರು ಮನೆಗಳಿಗೆ ಹಾನಿಯಾಗಿದೆ.
ಎರಡು ಘಟನೆಗಳಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ವಿಪತ್ತು ನಿರ್ವಹಣಾ ಕಾರ್ಯದರ್ಶಿಯೊಂದಿಗೆ ಮಾತನಾಡಿದ್ದಾರೆ. ಮಳೆಪೀಡಿತ ಪ್ರದೇಶಗಳು ಮತ್ತು ಪರಿಹಾರ ಮತ್ತು ರಕ್ಷಣಾ ಕ್ರಮಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಮುಖ್ಯಮಂತ್ರಿಗಳ ಸೂಚನೆಯಂತೆ ಜಿಲ್ಲಾಡಳಿತ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಕಟ್ಟೆಚ್ಚರ ವಹಿಸಿವೆ. ಅಗತ್ಯವಿದ್ದಾಗ ಮಾತ್ರ ಜನರು ಮನೆಯಿಂದ ಹೊರಬರುವಂತೆ ಧಮಿ ಮನವಿ ಮಾಡಿದ್ದಾರೆ.
ರಾಜ್ಯಕ್ಕೆ ಬರುವ ಜನರು ಮತ್ತು ಸಂದರ್ಶಕರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಅವರು ಹೇಳಿದರು.
Advertisement