ಯುಕೆಯಲ್ಲಿ ರಾಜಕೀಯ ಆಶ್ರಯ ನಿರಾಕರಣೆ!: ಇನ್ನೂ ಕೆಲವು ದಿನ ಭಾರತದಲ್ಲೇ ಉಳಿಯಲಿರುವ ಶೇಖ್ ಹಸೀನಾ!
ನವದೆಹಲಿ: ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಬ್ರಿಟನ್ ರಾಜಕೀಯ ಆಶ್ರಯ ನೀಡಲು ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಆಕೆ ಲಂಡನ್ ಗೆ ತೆರಳುವುದಕ್ಕೆ ಅಡ್ಡಿ ಎದುರಾಗಿದ್ದು, ಇನ್ನೂ ಕೆಲವು ದಿನಗಳ ಕಾಲ ಭಾರತದಲ್ಲೇ ಉಳಿಯಲಿದ್ದಾರೆ.
ಪ್ರಧಾನಿಯಾಗಿ ರಾಜೀನಾಮೆ ನೀಡಿದ ಬಳಿಕ ಹಸೀನಾ, ಸಿ-130 ಜೆ ಮಿಲಿಟರಿ ಸಾಗಣೆ ವಿಮಾನದಲ್ಲಿ ಭಾರತದ ಹಿಂಡನ್ ವಾಯುನೆಲೆಗೆ ಬಂದಿಳಿದಿದ್ದರು. ಈಗ ಅವರನ್ನು ಭದ್ರತೆಯ ಕಾರಣದಿಂದ ಗೌಪ್ಯ ಸ್ಥಳದಲ್ಲಿ ಇರಿಸಲಾಗಿದೆ.
ಶೇಖ್ ಹಸೀನಾ ಜೊತೆಯಲ್ಲಿ ಆಕೆಯ ಸಹೋದರಿ ಶೇಖ್ ರೆಖಾನಾ ಇದ್ದು, ಭಾರತದಿಂದ ಲಂಡನ್ ಗೆ ತೆರಳುವವರಿದ್ದರು. ಬ್ರಿಟನ್ ಸರ್ಕಾರ ಶೇಖ್ ಹಸೀನಾಗೆ ರಾಜಕೀಯ ಆಶ್ರಯ ನೀಡುವುದಕ್ಕೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಶೇಖ್ ಹಸೀನಾ ಇನ್ನೂ ಕೆಲ ಕಾಲ ಭಾರತದಲ್ಲೇ ಉಳಿಯಲಿದ್ದಾರೆ. ಇದಕ್ಕೆ ಭಾರತ ಒಪ್ಪಿಗೆ ನೀಡಿದೆ.
ಅವಾಮಿ ಲೀಗ್ ನಾಯಕಿ ಭಾರತದ ಮೂಲಕ ಲಂಡನ್‌ಗೆ ಪ್ರಯಾಣಿಸಲು ಯೋಜಿಸಿದ್ದರು ಮತ್ತು ಆಕೆಯ ಸಹಾಯಕರು ಹಿಂಡನ್‌ಗೆ ಇಳಿಯುವ ಮೊದಲು ಭಾರತೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಎಂದು ತಿಳಿದುಬಂದಿದೆ. ಶೇಖ್ ಹಸೀನಾ ಸಹೋದರಿ ರೆಹಾನಾ ಅವರ ಮಗಳು ಟುಲಿಪ್ ಸಿದ್ದಿಕ್ ಅವರು ಬ್ರಿಟಿಷ್ ಸಂಸತ್ತಿನ ಸದಸ್ಯರಾಗಿರುವ ಕಾರಣ ಹಸೀನಾ ಲಂಡನ್‌ಗೆ ಪ್ರಯಾಣಿಸಲು ನಿರ್ಧರಿಸಿದರು. ಟುಲಿಪ್ ಖಜಾನೆಗೆ ಆರ್ಥಿಕ ಕಾರ್ಯದರ್ಶಿ ಮತ್ತು ಹ್ಯಾಂಪ್‌ಸ್ಟೆಡ್ ಮತ್ತು ಹೈಗೇಟ್‌ಗೆ ಲೇಬರ್ ಸಂಸದರಾಗಿದ್ದಾರೆ.
ಕಳೆದ ಎರಡು ವಾರಗಳಲ್ಲಿ ಬಾಂಗ್ಲಾದೇಶವು ಹಿಂದೆಂದೂ ಕಂಡಿರದ ಹಿಂಸಾಚಾರ ಮತ್ತು ದುರಂತ ಪ್ರಾಣಹಾನಿಯನ್ನು ಕಂಡಿದೆ ಮತ್ತು ಘಟನೆಗಳ ಬಗ್ಗೆ ದೇಶದ ಜನರು "ಸಂಪೂರ್ಣ ಮತ್ತು ಸ್ವತಂತ್ರ ಯುಎನ್ ನೇತೃತ್ವದ ತನಿಖೆಗೆ ಅರ್ಹರು" ಎಂದು ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮ್ಮಿ ಸೋಮವಾರ ಲಂಡನ್‌ನಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.