ರಾಮನಾಥಪುರಂ: ಶ್ರೀಲಂಕಾದ ಸಮುದ್ರದಲ್ಲಿ ಬೇಟೆಯಾಡಿದ ಆರೋಪದ ಮೇಲೆ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಸುಮಾರು 35 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯು ಬಂಧಿಸಿದೆ. ಅಂತಾರಾಷ್ಟ್ರೀಯ ಕಡಲ ಗಡಿ ರೇಖೆಯನ್ನು ದಾಟಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಪಂಬನ್ ಮೀನುಗಾರರು ಮೀನುಗಾರಿಕೆಗೆ ಬಳಸುತ್ತಿದ್ದ ನಾಲ್ಕು ದೇಶಿಯ ದೋಣಿಗಳನ್ನು ಲಂಕಾ ನೌಕಪಡೆ ವಶಕ್ಕೆ ಪಡೆದಿದೆ ಎಂದು ಮೀನುಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಲಂಕಾದ ವಾಯವ್ಯ ಸಮುದ್ರದ ಮನ್ನಾರ್ ದಕ್ಷಿಣದಲ್ಲಿ ಲಂಕಾದ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಮೀನುಗಾರರನ್ನು ಬಂಧಿಸಿದ್ದು, ನಂತರ ಕಲ್ಪಿಟಿಯ ಮೀನುಗಾರಿಕಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ಈ ಹಿಂದೆ ಬಂಧಿತರಾಗಿದ್ದ 13 ಮೀನುಗಾರರನ್ನು ಬಿಡುಗಡೆ ಮಾಡುವಂತೆ ಶ್ರೀಲಂಕಾ ನ್ಯಾಯಾಲಯ ಆದೇಶ ನೀಡಿದ ಬೆನ್ನಲ್ಲೇ ಈ ಬಂಧನ ನಡೆದಿದೆ. ಬಂಧನವನ್ನು ಖಂಡಿಸಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ, ಪದೇ ಪದೇ ಮೀನುಗಾರರ ಬಂಧನಕ್ಕೆ ಶಾಶ್ವತ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಈ ವಿಚಾರದಲ್ಲಿ ಕೇಂದ್ರದ ಮೇಲೆ ಒತ್ತಡ ಹೇರದ ಡಿಎಂಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೀನುಗಾರರು ಬಿಡುಗಡೆ ಮಾಡಲು ಕ್ರಮ ತೆಗೆದುಕೊಳ್ಳುವಂತೆ ಕೇಂದ್ರವನ್ನು ಒತ್ತಾಯಿಸುವುದಾಗಿ ಅವರು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಪಳನಿಸ್ವಾಮಿ, ಮೀನುಗಾರರು ಪದೇ ಪದೇ ಎದುರಿಸುತ್ತಿರುವ ಸಂಕಷ್ಟಗಳಿಗೆ ಮಾತುಕತೆ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಕರೆ ನೀಡಿದ್ದಾರೆ.
Advertisement