ನವದೆಹಲಿ: ನ್ಯಾಯಾಧೀಶರು ಹಾಗೂ ಅವರ ಕುಟುಂಬಕ್ಕಾಗಿ ಲಾಪತಾ ಲೇಡೀಸ್ ಚಿತ್ರವನ್ನು ಪ್ರದರ್ಶಿಸಲು ಸುಪ್ರೀಂ ಕೋರ್ಟ್ ಮುಂದಾಗಿದ್ದು, ಆಗಸ್ಟ್ 9 ರಂದು (ಇಂದು) ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ತಮ್ಮ ಕುಟುಂಬ ಸದಸ್ಯರೊಂದಿಗೆ ಪ್ರದರ್ಶನಕ್ಕೆ ಹಾಜರಾಗಲಿದ್ದಾರೆ.
ಲಾಪತಾ ಲೇಡಿಸ್ ಚಿತ್ರವು ಲಿಂಗ ಸಮಾನತೆಯ ವಿಷಯವನ್ನು ಆಧರಿಸಿದ್ದು, ಚಿತ್ರವು ಇಂದು ಸಂಜೆ 4.15ರಿಂದ 6.20ರವರೆಗೆ ಪ್ರದರ್ಶನಗೊಳ್ಳಲಿದೆ.
ಸುಪ್ರೀಂ ಕೋರ್ಟ್‌ನೊಳಗೆ ಲಿಂಗ ಸಮಾನತೆಯನ್ನು ಉತ್ತೇಜಿಸುವ ಉದ್ದೇಶದಿಂದ ಮುಖ್ಯ ನ್ಯಾಯಮೂರ್ತಿ ಸಿಜೆಐ ಡಿ ವೈ ಚಂದ್ರಚೂಡ್ ಅವರ ಸೂಚನೆಯಂತೆ ಸುಪ್ರೀಂ ಕೋರ್ಟ್ ಆಡಳಿತ ಕಟ್ಟಡ ಸಂಕೀರ್ಣದ ಸಭಾಂಗಣದಲ್ಲಿ ಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.
ಚಿತ್ರ ಪ್ರದರ್ಶನದಲ್ಲಿ ಚಿತ್ರದ ನಿರ್ಮಾಪಕ ಹಾಗೂ ಬಾಲಿವುಡ್ ಹಿರಿಯ ನಟ ಆಮಿರ್ ಖಾನ್ ಮತ್ತು ಸಿನಿಮಾದ ನಿರ್ದೇಶಕಿ ಕಿರಣ್ ರಾವ್ ಕೂಡ ಭಾಗವಹಿಸಲಿದ್ದಾರೆ.
ಚಿತ್ರ ವೀಕ್ಷಿಸಿದ್ದ ಸಿಜೆಐ ಚಂದ್ರಚೂಡ್ ಅವರ ಪತ್ನಿ ಕಲ್ಪನಾ ದಾಸ್ ಅವರು, ಸಿನಿಮಾವನ್ನು ಸುಪ್ರೀಂ ಕೋರ್ಟ್ ಸಿಬ್ಬಂದಿಗೆ ತೋರಿಸುವ ಇಂಗಿತ ವ್ಯಕ್ತಪಡಿಸಿದ್ದರು.
ಕಲ್ಪನಾ ದಾಸ್ ಅವರ ಈ ಸಲಹೆಗೆ ಮುಖ್ಯ ನ್ಯಾಯಮೂರ್ತಿ ಶ್ಲಾಘನೆ ವ್ಯಕ್ತಪಡಿಸಿ, ಸುಪ್ರೀಂಕೋರ್ಟ್ ಸಿಬ್ಬಂದಿಗಳ ನಡುವೆ ಬಾಂಧವ್ಯವನ್ನು ಹೆಚ್ಚಿಸಲು ಹಾಗೂ ಲಿಂಗ ಸಮಾನತೆಯನ್ನು ಮೂಡಿಸಲು ಚಿತ್ರ ಪ್ರದರ್ಶನ ಮಾಡುವ ನಿರ್ಧಾರ ಮಾಡಿದ್ದಾರೆಂದು ತಿಳಿದುಬಂದಿದೆ.
ಕಿರಣ್ ರಾವ್ ನಿರ್ದೇಶನದ ಮತ್ತು ರಾವ್, ಅಮೀರ್ ಖಾನ್ ಹಾಗೂ ಜ್ಯೋತಿ ದೇಶಪಾಂಡೆ ನಿರ್ಮಿಸಿದ ಲಾಪತಾ ಲೇಡೀಸ್ ಚಲನಚಿತ್ರವು 2024 ರಲ್ಲಿ ಬಿಡುಗಡೆಯಾದ ಹಿಂದಿ ಹಾಸ್ಯ ಚಿತ್ರವಾಗಿದೆ, ನಿತಾಂಶಿ ಗೋಯೆಲ್, ಪ್ರತಿಭಾ ರಂಟ, ಸ್ಪರ್ಶ ಶ್ರೀವಾಸ್ತವ, ಛಾಯಾ ಕದಮ್ ಮತ್ತು ರವಿ ಕಿಶನ್ ಅವರು ಚಿತ್ರದಲ್ಲಿ ನಟಿಸಿದ್ದಾರೆ.
ಇಬ್ಬರು ನವವಿವಾಹಿತರು ತಮ್ಮ ಗಂಡನ ಮನೆಗೆ ರೈಲಿನಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ವಿನಿಮಯ ಮಾಡಿಕೊಳ್ಳುವ ಕಥೆಯನ್ನು ಚಿತ್ರ ಒಳಗೊಂಡಿದೆ.
ಚಿತ್ರವನ್ನು ಸೆಪ್ಟೆಂಬರ್ 2023 ರಲ್ಲಿ 48 ನೇ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗಿತ್ತು.
Advertisement