ಪಾಟ್ನಾ: ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಸಣ್ಣ ಸೇತುವೆ ಕುಸಿದು ಬಿದ್ದ ಘಟನೆಗಳಿಗೆ ಕೊನೆಯೇ ಇಲ್ಲದಂತಾಗಿದೆ. ಈ ವರ್ಷ ಜೂನ್‌ನಿಂದ ಬಿಹಾರದಲ್ಲಿ ಸೇತುವೆ ಕುಸಿತದ 15ನೇ ಘಟನೆ ಇದಾಗಿದೆ.
ಶುಕ್ರವಾರ ತಡರಾತ್ರಿ ವೈಶಾಲಿ ಜಿಲ್ಲೆಯ ಮಾಜಿ ಉಪಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಅವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪ್ಲಸ್ 2 ಶಾಲೆಯ ಬಳಿ ಸುಮಾರು 20 ವರ್ಷಗಳ ಹಿಂದೆ ನಿರ್ಮಿಸಲಾದ ಇಟ್ಟಿಗೆ ಸೇತುವೆ ಕುಸಿದಿದೆ. ವಿಪರ್ಯಾಸವೆಂದರೆ ತೇಜಸ್ವಿ ಅವರ ತಾಯಿ ರಾಬ್ರಿ ದೇವಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಈ ಸೇತುವೆಯನ್ನು ನಿರ್ಮಿಸಲಾಗಿತ್ತು.
ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿ ಉಕ್ಕಿ ಹರಿಯುತ್ತಿದ್ದು, ಗಂಗಾ ನದಿಯ ಬಲವಾದ ಪ್ರವಾಹದಿಂದ ಸೇತುವೆ ಕೊಚ್ಚಿಹೋಗಿದೆ ಎಂದು ಹಿರಿಯ ಜಿಲ್ಲಾ ಆಡಳಿತಾಧಿಕಾರಿಯೊಬ್ಬರು ಹೇಳಿದ್ದಾರೆ. ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಸೇತುವೆ ಕುಸಿದಿದ್ದು, ರಾಘೋಪುರ ಪೂರ್ವ ಮತ್ತು ರಾಘೋಪುರ ಪಶ್ಚಿಮ ಪಂಚಾಯಿತಿಗಳ ನಡುವಿನ ಸಂಪರ್ಕ ಕಡಿತಗೊಂಡಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಸೇತುವೆಯನ್ನು ಸುಮಾರು 20 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು ಅದು ಸ್ವಲ್ಪ ಸಮಯದಿಂದ ಸಂಪೂರ್ಣವಾಗಿ ಶಿಥಿಲಗೊಂಡಿತ್ತು ಎಂದು ಅವರು ಹೇಳಿದರು. ಮುಂಜಾಗ್ರತಾ ಕ್ರಮವಾಗಿ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಸೇತುವೆ ಕುಸಿತದಿಂದಾಗಿ ರಾಘೋಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎರಡು ಪಂಚಾಯತ್‌ಗಳ ಸುಮಾರು 20,000 ಜನರು ಬ್ಲಾಕ್ ಮತ್ತು ಜಿಲ್ಲಾ ಕೇಂದ್ರದೊಂದಿಗೆ ಸಂಪರ್ಕವನ್ನು ಕಳೆದುಕೊಂಡಿದ್ದಾರೆ.
ಸಂಪರ್ಕವನ್ನು ಪುನಃಸ್ಥಾಪಿಸಲು ಪರ್ಯಾಯ ವ್ಯವಸ್ಥೆ ಮಾಡಲು ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕೆಂದು ಅವರು ಮನವಿ ಮಾಡಿದ್ದಾರೆ. ನಾವು ನಮ್ಮ ಶಾಸಕ ತೇಜಸ್ವಿ ಯಾದವ್ ಮತ್ತು ಜಿಲ್ಲಾಡಳಿತದ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಆದರೆ, ಈ ನಿಟ್ಟಿನಲ್ಲಿ ಇದುವರೆಗೆ ಏನೂ ಮಾಡಿಲ್ಲ ಎಂದು ರಾಘೋಪುರ ಪೂರ್ವ ನಿವಾಸಿ ವಿನೋದ್ ಯಾದವ್ ಅಸಮಾಧಾನ ವ್ಯಕ್ತಪಡಿಸಿದರು.
Advertisement