ಬಿಹಾರ: ಬಾಬಾ ಸಿದ್ಧಾಂತ ದೇವಸ್ಥಾನದಲ್ಲಿ ಕಾಲ್ತುಳಿತ; 7 ಮಂದಿ ಸಾವು, ಸುಮಾರು 16 ಜನರಿಗೆ ಗಾಯ

ಕನ್ವಾರಿಯಾಗಳ ನಡುವೆ ವಾಗ್ವಾದ ನಡೆದಿದ್ದು, ವಾಗ್ವಾದ ಮತ್ತು ಹೊಡೆದಾಟವು ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಲಂಕೃತಾ ಪಾಂಡೆ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದರು.
ಘಟನೆ ನಂತರ ದೇವಸ್ಥಾನ ಬಳಿ ಸೇರಿರುವ ಪೊಲೀಸರು ಮತ್ತು ಜನರು
ಘಟನೆ ನಂತರ ದೇವಸ್ಥಾನ ಬಳಿ ಸೇರಿರುವ ಪೊಲೀಸರು ಮತ್ತು ಜನರು
Updated on

ಜೆಹನಾಬಾದ್: ಬಿಹಾರದ ಜೆಹಾನಾಬಾದ್ ಜಿಲ್ಲೆಯ ಬಾಬಾ ಸಿದ್ಧೇಶ್ವರ ನಾಥ ದೇವಸ್ಥಾನದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಆರು ಮಹಿಳೆಯರು ಸೇರಿದಂತೆ ಕನಿಷ್ಠ ಏಳು ಜನರು ಮೃತಪಟ್ಟಿದ್ದಾರೆ. ಹಾಗೂ ಸುಮಾರು 16 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ಪ್ಯಾರೆ ಪಾಸ್ವಾನ್ (30), ನಿಶಾ ದೇವಿ (30), ಪುನಮ್ ದೇವಿ (30), ನಿಶಾ ಕುಮಾರಿ (21), ಮತ್ತು ಸುಶೀಲಾ ದೇವಿ (64) ಎಂದು ಗುರುತಿಸಲಾಗಿದೆ. ಒಬ್ಬ ಮಹಿಳೆಯ ಗುರುತು ಇನ್ನೂ ಸಿಕ್ಕಿಲ್ಲ.

ನಿನ್ನೆ ಭಾನುವಾರ ರಾತ್ರಿ 11.30 ರ ಸುಮಾರಿಗೆ ದೇವಸ್ಥಾನದಲ್ಲಿ ಕಾಲ್ತುಳಿತ ಸಂಭವಿಸಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಲಂಕೃತಾ ಪಾಂಡೆ ತಿಳಿಸಿದ್ದಾರೆ. ದೇವಾಲಯದ ಭದ್ರತಾ ಸಿಬ್ಬಂದಿ ತ್ವರಿತವಾಗಿ ಪರಿಸ್ಥಿತಿಯನ್ನು ಹತೋಟಿಗೆ ತಂದರು ಎಂದು ಹೇಳಿದ್ದಾರೆ.

ನಿನ್ನೆ ಭಾನುವಾರ ರಾತ್ರಿ 11.30 ರ ಸುಮಾರಿಗೆ ಜೆಹಾನಾಬಾದ್‌ನ ಬರಾಬರ್ ಪಹಾಡಿ ಪ್ರದೇಶದ ಬಾಬಾ ಸಿದ್ದೇಶ್ವರ ನಾಥ ದೇವಸ್ಥಾನದಲ್ಲಿ ಕಾಲ್ತುಳಿತದಲ್ಲಿ ಏಳು ಜನರು, ಹೆಚ್ಚಾಗಿ ಕನ್ವಾರಿಯಾಗಳು ಮೃತಪಟ್ಟಿದ್ದಾರೆ. ಮತ್ತು ಸುಮಾರು 16 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಆರು ಮಹಿಳೆಯರು ಸೇರಿದ್ದಾರೆ ಎಂದು ಅವರು ಪಿಟಿಐಗೆ ತಿಳಿಸಿದರು.

ಸಂತಾಪ, ಪರಿಹಾರ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಘಟನೆಗೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ.

ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿ ಸೂಚಿಸಿದರು.

ಗಾಯಾಳುಗಳನ್ನು ಮುಕುಂದಾಪುರ ಮತ್ತು ಹತ್ತಿರದ ಪ್ರದೇಶಗಳಲ್ಲಿನ ವೈದ್ಯಕೀಯ ಸೌಲಭ್ಯ ಕೇಂದ್ರಗಳಿಗೆ ಕರೆದೊಯ್ಯಲಾಯಿತು, ಪ್ರಥಮ ಚಿಕಿತ್ಸೆಯ ನಂತರ 10 ಜನರನ್ನು ಬಿಡುಗಡೆ ಮಾಡಲಾಗಿದೆ ಮತ್ತು ಆರು ಮಂದಿ ಇನ್ನೂ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಿರುವ ಕಾರಣ ಜಿಲ್ಲಾಡಳಿತ ಹಾಗೂ ಪೊಲೀಸ್ ಹಿರಿಯ ಅಧಿಕಾರಿಗಳು ದೇವಸ್ಥಾನದಲ್ಲಿ ಬೀಡುಬಿಟ್ಟಿದ್ದಾರೆ. ದೇವಸ್ಥಾನದಲ್ಲಿ ನಿಯೋಜಿಸಲಾದ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು ಎಂದು ಪಾಂಡೆ ಹೇಳಿದರು.

ಕನ್ವಾರಿಯಾಗಳ ನಡುವಿನ ವಿವಾದವು ಕಾಲ್ತುಳಿತಕ್ಕೆ ಕಾರಣವಾಗಿರಬಹುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ನಿಖರ ಕಾರಣ ಇನ್ನೂ ತನಿಖೆ ಹಂತದಲ್ಲಿದ್ದು, ತನಿಖೆಗೆ ಆದೇಶಿಸಲಾಗಿದೆ.

ಕೆಲವು ಸ್ಥಳೀಯರು ದೇವಾಲಯದ ಹೊರಗೆ ಕನ್ವಾರಿಯಾಗಳ ಗುಂಪು ಮತ್ತು ಹೂವು ಮಾರಾಟಗಾರರ ನಡುವೆ ನಡೆದ ತೀವ್ರ ವಾಗ್ವಾದವು ಕಾಲ್ತುಳಿತಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ. ಮೃತರ ಕುಟುಂಬಗಳಿಗೆ ಅಂತಿಮ ಸಂಸ್ಕಾರಕ್ಕಾಗಿ ಆಡಳಿತವು ತಲಾ 20,000 ರೂಪಾಯಿಗಳನ್ನು ನೀಡಲಿದ್ದು, ಹೆಚ್ಚುವರಿಯಾಗಿ 4 ಲಕ್ಷ ರೂಪಾಯಿ ಸರ್ಕಾರ ಪರಿಹಾರ ಘೋಷಿಸಿದೆ.

ಘಟನೆಯ ಬಗ್ಗೆ ಆರ್‌ಜೆಡಿ ನಾಯಕರಾದ ಲಾಲು ಪ್ರಸಾದ್, ರಾಬ್ರಿ ದೇವಿ ಮತ್ತು ತೇಜಸ್ವಿ ಯಾದವ್ ದುಃಖ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com